Bengaluru: ಉಬರ್‌, ರ್ಯಾಪಿಡೋ ಇನ್‌ಸೆಂಟಿವ್‌ಗೆ ಕನ್ನ ಹಾಕಿದ ಮೂವರ ಬಂಧನ

By Kannadaprabha NewsFirst Published Jun 7, 2023, 7:02 AM IST
Highlights

ಪ್ರೀ ಆ್ಯಕ್ಟಿವೇಟೆಡ್‌ ಸಿಮ್‌ ಕಾರ್ಡ್‌ಗಳನ್ನು ದುರುಪಯೋಗಪಡಿಸಿ ನಗರದ ಪ್ರತಿಷ್ಠಿತ ಆ್ಯಪ್‌ ಆಧಾರಿತ ಸಾರಿಗೆ ಸೌಲಭ್ಯ ಕಲ್ಪಿಸುವ ಕಂಪನಿಗಳಿಗೆ ವಂಚಿಸಿ ಪೋತ್ಸಾಹ ಧನವನ್ನು(ಇನ್‌ಸೆಂಟಿವ್‌) ಲಪಟಾಯಿಸುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿದ ಸಿಸಿಬಿ, ಈ ಸಂಬಂಧ ಮೂವರು ದುಷ್ಕರ್ಮಿಗಳನ್ನು ಬಂಧಿಸಿದೆ.

ಬೆಂಗಳೂರು (ಜೂ.07): ಪ್ರೀ ಆ್ಯಕ್ಟಿವೇಟೆಡ್‌ ಸಿಮ್‌ ಕಾರ್ಡ್‌ಗಳನ್ನು ದುರುಪಯೋಗಪಡಿಸಿ ನಗರದ ಪ್ರತಿಷ್ಠಿತ ಆ್ಯಪ್‌ ಆಧಾರಿತ ಸಾರಿಗೆ ಸೌಲಭ್ಯ ಕಲ್ಪಿಸುವ ಕಂಪನಿಗಳಿಗೆ ವಂಚಿಸಿ ಪೋತ್ಸಾಹ ಧನವನ್ನು(ಇನ್‌ಸೆಂಟಿವ್‌) ಲಪಟಾಯಿಸುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿದ ಸಿಸಿಬಿ, ಈ ಸಂಬಂಧ ಮೂವರು ದುಷ್ಕರ್ಮಿಗಳನ್ನು ಬಂಧಿಸಿದೆ.

ಉಬರ್‌ ಹಾಗೂ ರ್ಯಾಪಿಡೋ ಕಂಪನಿಗಳ ವೆಂಡರ್‌ ಮನೋಜ್‌ ಕುಮಾರ್‌, ಖಾಸಗಿ ಕಂಪನಿ ನೌಕರ ಸಚಿನ್‌ ಹಾಗೂ ಸಿಮ್‌ ಕಾರ್ಡ್‌ ಹಂಚಿಕೆದಾರ ಶಂಕರ್‌ ಅಲಿಯಾಸ್‌ ಶಂಕರಿ ಬಂಧಿತರಾಗಿದ್ದು, ಆರೋಪಿಗಳಿಂದ 1055 ಪ್ರೀ ಆ್ಯಕ್ಟಿವೇಟೆಡ್‌ ಮೊಬೈಲ್‌ ಸಿಮ್‌ ಕಾರ್ಡ್‌ಗಳು, 15 ಮೊಬೈಲ್‌ಗಳು, 4 ಲ್ಯಾಪ್‌ಟಾಪ್‌ಗಳು ಹಾಗೂ ಕಂಪ್ಯೂಟರ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಆ್ಯಪ್‌ ಆಧಾರಿತ ಸಾರಿಗೆ ಸೇವೆ ಕಲ್ಪಿಸುವ ಕಂಪನಿಗಳಿಗೆ ವೆಂಡರ್‌ಶಿಪ್‌ ಸೋಗಿನಲ್ಲಿ ಜಾಲವೊಂದು ವಂಚಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ಈ ಸುಳಿವು ಬೆನ್ನುಹತ್ತಿದ್ದ ಸಿಸಿಬಿ ಪೊಲೀಸರು ಮೂವರನ್ನು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಹೇಳಿದ್ದಾರೆ.

ಬಾಡಿಗೆ ಮನೆಗಳಿಗೂ ಉಚಿತ ವಿದ್ಯುತ್‌: ಗೊಂದಲಕ್ಕೆ ತೆರೆ ಎಳೆದ ಸಿದ್ದು, ಇಂಧನ ಸಚಿವ ಜಾರ್ಜ್‌

ವೆಂಡರ್‌ಶಿಪ್‌ ಪಡೆದಿದ್ದ ಆರೋಪಿಗಳು: ಬೆಂಗಳೂರಿನಲ್ಲಿ ಬಾಡಿಗೆ ವಾಹನ ಸೇವೆ ನೀಡುತ್ತಿರುವ ಹೆಸರಾಂತ ಕಂಪನಿಗಳಾದ ಉಬರ್‌ ಮತ್ತು ರ್ಯಾಪಿಡೋ ಕಂಪನಿಗಳಿಗೆ ಚಾಲಕರು ಹಾಗೂ ವಾಹನಗಳನ್ನು ನೋಂದಣಿ ಮಾಡುವ ಸಲುವಾಗಿ ವೆಂಡರ್‌ಶಿಪ್‌ ಪಡೆಯಬೇಕಿದೆ. ಈ ವೆಂಡರ್‌ಶಿಪ್‌ ಪಡೆದ ಬಳಿಕ ಆನ್‌ಲೈನ್‌ ಮೂಲಕ ಚಾಲಕರು ಹಾಗೂ ವಾಹನಗಳನ್ನು ಅಟ್ಯಾಚ್‌ ಮಾಡಿಸಿದರೆ ಇಂತಿಷ್ಟುಹಣ ಸಿಗುತ್ತಿತ್ತು. ಹೀಗಾಗಿ ವೆಂಡರ್‌ಶಿಪ್‌ ಪಡೆದ ಆರೋಪಿಗಳು, ಬೇರೆಯವರ ಹೆಸರಿನಲ್ಲಿ ತೆಗೆದುಕೊಂಡಿದ್ದ ಸಾವಿರಾರು ಮೊಬೈಲ್‌ ಸಿಮ್‌ ಕಾರ್ಡ್‌ಗಳನ್ನು ಉಪಯೋಗಿಸಿ ಯಾವುದೇ ಸಂಚಾರ ಸೇವೆಯನ್ನು ನೀಡದೆ ಸಾಫ್ಟ್‌ವೇರ್‌ ದುರುಪಯೋಗ ಪಡಿಸಿಕೊಂಡು ಸಂಚಾರಿ ಸೇವೆ ನೀಡಿದಂತೆ ದಾಖಲೆ ಸೃಷ್ಟಿಸಿ ಕಂಪನಿಗಳಿಂದ ಪ್ರೋತ್ಸಾಹ ಧನ (ಇನ್‌ಸೆಂಟಿವ್‌) ರೂಪದಲ್ಲಿ ಸಾವಿರಾರು ರುಪಾಯಿ ಪಡೆದು ಕಂಪನಿಗಳಿಗೆ ಮೋಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಮೂವರು ಆರೋಪಿಗಳ ಪೈಕಿ ಮನೋಜ್‌ ಉಬರ್‌ ಮತ್ತು ರ್ಯಾಪಿಡೋ ಕಂಪನಿಗಳ ವೆಂಡರ್‌ಶಿಪ್‌ ಪಡೆದಿದ್ದ. ಸುಲಭವಾಗಿ ಹಣ ಗಳಿಸುವ ಸಲುವಾಗಿ ವೆಂಡರ್‌ಶಿಪ್‌ ದುರ್ಬಳಕೆ ಮಾಡಿಕೊಂಡು ವಂಚಿಸಲು ಆತ ಸಂಚು ರೂಪಿಸಿದ್ದ. ಈ ಕೃತ್ಯಕ್ಕೆ ಆತನಿಗೆ ಫೈನಾನ್ಸ್‌ ಕಂಪನಿಯ ಲೋನ್‌ ಏಜೆಂಟ್‌ ಸಚಿನ್‌ ಹಾಗೂ ಸಿಮ್‌ ಮಾರಾಟಗಾರ ಶಂಕರ್‌ ಸಾಥ್‌ ಕೊಟ್ಟಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಫ್ರೀ ಆ್ಯಕ್ಟಿವೇಡೆಡ್‌ ಸಿಮ್‌ ಬಳಸಿ ಕೃತ್ಯ: ತನ್ನ ಉಬರ್‌ ಮತ್ತು ರ್ಯಾಪಿಡೋ ಕಂಪನಿಗಳ ವೆಂಡರ್‌ಶಿಪ್‌ನ ಸಹಾಯದಿಂದ ಮನೋಜ್‌, ಆ ಕಂಪನಿಗಳಿಂದ ಚಾಲಕರ ದಾಖಲಾತಿಗಳನ್ನು ಪಡೆದು ತನ್ನ ಸ್ನೇಹಿತ ಸಿಮ್‌ ಮಾರಾಟಗಾರ ಶಂಕರ್‌ಗೆ ನೀಡುತ್ತಿದ್ದ. ಈ ದಾಖಲಾತಿಗಳನ್ನು ಬಳಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿ ಪ್ರೀ ಆ್ಯಕ್ಟಿವೇಟೆಡ್‌ ಸಿಮ್‌ ಕಾರ್ಡ್‌ಗಳನ್ನು ಆರೋಪಿಗಳು ಪಡೆಯುತ್ತಿದ್ದರು. ಆನಂತರ ಉಬರ್‌ ಹಾಗೂ ರ್ಯಾಪಿಡೋ ಕಂಪನಿಗಳಿಗೆ ಕಾರು ಹಾಗೂ ಬೈಕುಗಳನ್ನು ಬಾಡಿಗೆ ಸೇವೆ ಕಲ್ಪಿಸಿದ ರೀತಿಯಲ್ಲಿ ಈ ಮೂವರು ದಾಖಲೆ ಸೃಷ್ಟಿಸುತ್ತಿದ್ದರು. ಅಲ್ಲದೆ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ಮೂಲಕ ಆ ಕಂಪನಿಗಳ ಸಾಫ್ಟ್‌ವೇರ್‌ಗಳನ್ನು ಬಳಸಿ ಯಾವುದೇ ವಾಹನವನ್ನು ಬಾಡಿಗೆ ಓಡಿಸದೆ ಇದ್ದರೂ ಸಹ ವಾಹನಗಳು ಚಲಿಸಿದಂತೆ ಡಾಟಾ ಸೃಷ್ಟಿಸುತ್ತಿದ್ದರು. ಬಳಿಕ ಆ ಕಂಪನಿಗಳಿಂದ ವೆಂಡರ್‌ಗೆ ಬರುವ ಇನ್‌ಸೆಂಟೀವ್‌ ಹಣವನ್ನು ಅಕ್ರಮವಾಗಿ ಆರೋಪಿಗಳು ಪಡೆದು ಪರಸ್ಪರ ಹಂಚಿಕೊಳ್ಳುತ್ತಿದ್ದ ಸಂಗತಿ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಆಯುಕ್ತ ದಯಾನಂದ್‌ ಹೇಳಿದ್ದಾರೆ.

ಆಯ​ನೂರು ಬಾರಲ್ಲಿ ಕ್ಯಾಶಿ​ಯರ್‌ ಹತ್ಯೆ: ಓರ್ವನ ಕಾಲಿಗೆ ಗುಂಡೇಟು, ಇಬ್ಬರ ಬಂಧನ

2 ವರ್ಷದಿಂದ ಕೃತ್ಯ: ಎರಡು ವರ್ಷಗಳಿಂದ ಈ ವಂಚನೆಯಲ್ಲಿ ಆರೋಪಿಗಳು ತೊಡಗಿದ್ದರು ಎಂಬ ಮಾಹಿತಿ ಇದೆ. ಹೀಗಾಗಿ ಈ ಅವಧಿಯಲ್ಲಿ ಎಷ್ಟುಪ್ರೋತ್ಸಾಹ ಧನವನ್ನು ಪಡೆದಿದ್ದಾರೆ ಎಂಬ ಬಗ್ಗೆ ವಿವರ ನೀಡುವಂತೆ ಉಬರ್‌ ಹಾಗೂ ರ್ಯಾಪಿಡೋ ಕಂಪನಿಗಳಿಗೆ ಸೂಚಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

click me!