ಪ್ರತ್ಯೇಕ ಬೈಕ್‌ ಅಪಘಾತ ಪ್ರಕರಣದಲ್ಲಿ ನಾಲ್ವರ ಸಾವು: ದೇಹದ ಮೇಲೆಯೇ ಹರಿದ ಲಾರಿ

By Sathish Kumar KHFirst Published Jun 6, 2023, 10:07 PM IST
Highlights

ಮಂಗಳವಾರ ಸಂಜೆ 6 ಗಂಟೆ ನಂತರ ಸಂಭವಿಸಿದ ಎರಡು ಪ್ರತ್ಯೇಕ ಬೈಕ್‌ ಅಪಘಾತ ಪ್ರಕರಣಗಳಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ನಾಲ್ವರು ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ರಾಯಚೂರು (ಜೂ.06): ರಾಜ್ಯದಲ್ಲಿ ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿದೆ. ಮಂಗಳವಾರ ಸಂಜೆ 6 ಗಂಟೆ ನಂತರ ಸಂಭವಿಸಿದ ಎರಡು ಪ್ರತ್ಯೇಕ ಬೈಕ್‌ ಅಪಘಾತ ಪ್ರಕರಣಗಳಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ನಾಲ್ವರು ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ರಾಯಚೂರು ಜಿಲ್ಲೆಯ ಸಾಥ್‌ಮೈಲ್‌ ಎಂಬಲ್ಲಿ ಬೈಕ್‌ ಸವಾರರ ಮೇಲೆ ಲಾರಿ ಹರಿದಿದ್ದು, ದೇಹವೆಲ್ಲಾ ಛಿದ್ರಗೊಂಡಿತ್ತು.

ರಾಯಚೂರು ತಾಲೂಕಿನ ಸಾಥ್ ಮೈಲ್ ಬಳಿ ನಡೆದ ಬೈಕ್ ಮತ್ತು ‌ಲಾರಿ ಡಿಕ್ಕಿ ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಯುವಕರನ್ನು ಹುಣಶ್ಯಾಳಹುಡಾದ ಹನುಮೇಶ್ ( 30), ಆಂಜನೇಯ ( 35) ಎಂದು ಗುರುತಿಸಲಾಗಿದೆ. ರಾಯಚೂರು ಕಡೆಯಿಂದ ಹುಣಿಶ್ಯಾಳಹುಡಾಕ್ಕೆ ಹೊರಟ ಬೈಕ್ ಸವಾರರು ಎದುರಿಗೆ ವೇಗವಾಗಿ ಬಂದ ಲಾರಿಯು ಡಿಕ್ಕಿ ಹೊಡೆದಿದೆ. ಇನ್ನು ಲಾರಿ ಗುದ್ದುತ್ತಿದ್ದಂತೆ ಬೈಕ್‌ನಿಂದ ಕೆಳಗೆ ಬಿದ್ದ ಯುವಕರು ಲಾರಿ ಚಕ್ರಕ್ಕೆ ಸಿಲುಕಿ ಪ್ರಾಣಬಿಟ್ಟಿದ್ದಾರೆ. 

ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರು ಪಲ್ಟಿಯಾಗಿ ಐವರು ಗಂಭೀರ

ಇನ್ನು ಘಟನೆಯ ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ರಾಯಚೂರು ಗ್ರಾಮೀಣ ಪೊಲೀಸರು, ಲಾರಿ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನು ಸ್ಥಳದಲ್ಲಿ ಮೃತರನ್ನು ನೋಡಿದಾಗ ದೇಹದ ಭಾಗಗಳೆಲ್ಲವೂ ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿದ್ದವು. ಈ ಪೈಕಿ ಒಬ್ಬ ಯುವಕನ ದೇಹದ ಮೇಲೆ ಚಾರಿ ಚಕ್ರವು ಹತ್ತಿ ನಿಂತಿದ್ದು, ದೇಹವು ರಸ್ತೆಗೆ ಅಪ್ಪಚ್ಚಿಯಾಗಿತ್ತು. ಅಪಘಾತ ಘಟನೆಯ ಕುರಿತು ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಕಾರವಾರದಲ್ಲಿ ಅಪರಿಚಿತ ವಾಹನ ಡಿಕ್ಕಿ ಇಬ್ಬರ ಸಾವು:  ಉತ್ತರಕ‌ನ್ನಡ ತಾಲೂಕಿನ ತೋಡುರು ಗ್ರಾಮದಲ್ಲಿ ರಸ್ತೆಯಲ್ಲಿ ಹೋಗುವಾಗ ಅಪರಿಚಿತ ವಾಹನವೊಂದು ಬಂದು ಬೈಕ್‌ ಸವಾರರಿಗೆ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದು ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಬೈಕ್‌ ಸವಾರರು ರಸ್ತೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಸಂದೀಪ್ ಗುನಗ, ಲಿಂಗರಾಜು ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿ ಚಲಿಸುತ್ತಿದ್ದಾಗ ಢಿಕ್ಕಿ ಹೊಡೆದ ಅಪರಚಿತ ವಾಹನ ಸ್ಥಳದಲ್ಲಿ ನಿಲ್ಲಿಸದೇ ಪರಾರಿ ಆಗಿದೆ. ಇನ್ನು ಘಟನೆ ಕುರಿತಂತೆ ಆರೋಪಿಗಳ ಪತ್ತೆಹಚ್ಚುವುದನ್ನು ಕಾರವಾರ ಗ್ರಾಮೀಣ ಪೊಲೀಸರು ಮುಂದಾಗಿದ್ದಾರೆ. ಸ್ಥಳ ಪರಿಶೀಲನೆ ಮಾಡಿದ ಪೊಲೀಸರು ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಕುರಿತು ಕಾರವಾರ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

ಕೆ.ಎಸ್. ಈಶ್ವರಪ್ಪಗೆ ಜೂನ್ 30 ನಿರ್ಣಯಕ ದಿನ: ಸಂತೋಷ್‌ ಆತ್ಮಹತ್ಯೆ ಬಿ ರಿಪೋರ್ಟ್‌ ರದ್ದಾಗುವ ಭೀತಿ

ಹಾಸನದಲ್ಲಿ ಮರದ ದಿಮ್ಮಿ ಬಿದ್ದು ಯುವಕ ಸಾವು: ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಅಂಕಿಹಳ್ಳಿ ಗ್ರಾಮದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಮರದ ದಿಮ್ಮಿಗಳನ್ನು ವಾಹನಕ್ಕೆ ಲೋಡಿಂಗ್‌ ಮಾಡುವ ವೇಳೆ ಕಾರ್ಮಿಕನ ಮೈಮೇಲೆ ಮರದ ದಿಮ್ಮಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಮೃತ ಯುವಕನನ್ನು ಉದುಮನಹಳ್ಳಿ ಗ್ರಾಮದ ಮಂಜುನಾಥ್ (32) ಎಂದು ಗುರುತಿಸಲಾಗಿದೆ. ಟಿಂಬರ್ ಕೆಲಸಕ್ಕೆ ಅಂಕಿಹಳ್ಳಿ ಗ್ರಾಮಕ್ಕೆ ತೆರಳಿದ್ದ ಮಂಜುನಾಥ್ ಹಾಗೂ ಇತರರು ಮರದ ದಿಮ್ಮಿಯನ್ನು ಹಗ್ಗಕಟ್ಟಿ ಟ್ರ‍್ಯಾಕ್ಟರ್‌ಗೆ ತುಂಬುತಿದ್ದ ವೇಳೆ ಘಟನೆ ನಡೆದಿದೆ. ಮಂಜುನಾಥನ ಮೇಲೆ ಮರದ ದಿಮ್ಮಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

click me!