ರಾಜ್ಯದಲ್ಲಿ ನಕಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಅಂಕಪಟ್ಟಿ ಮಾರಾಟ ಜಾಲ ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು, ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ 5 ರಿಂದ 10 ಸಾವಿರ ರು. ಪಡೆದು ನಕಲಿ ಅಂಕಪಟ್ಟಿ ಮಾರುತ್ತಿದ್ದ ಮೂವರನ್ನು ಸೆರೆ ಹಿಡಿದಿದ್ದಾರೆ.
ಬೆಂಗಳೂರು (ಮಾ.26): ರಾಜ್ಯದಲ್ಲಿ ನಕಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಅಂಕಪಟ್ಟಿ ಮಾರಾಟ ಜಾಲ ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು, ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ 5 ರಿಂದ 10 ಸಾವಿರ ರು. ಪಡೆದು ನಕಲಿ ಅಂಕಪಟ್ಟಿ ಮಾರುತ್ತಿದ್ದ ಮೂವರನ್ನು ಸೆರೆ ಹಿಡಿದಿದ್ದಾರೆ. ಧಾರವಾಡದ ಚೈತನ್ಯ ನಗರದ ಪ್ರಶಾಂತ್ ಗುಂಡುಮಿ ಅಲಿಯಾಸ್ ಪ್ರಶಾಂತ್, ಗದಗ ಜಿಲ್ಲೆ ಲಕ್ಷ್ಮೀಶ್ವರ ನಗರದ ರಾಜಶೇಖರ್.ಎಚ್.ಬಳ್ಳಾರಿ ಹಾಗೂ ಬೆಂಗಳೂರಿನ ಬನಶಂಕರಿ 3ನೇ ಹಂತದ ಶ್ರೀನಿವಾಸ ನಗರದ ಕೆ.ಜೆ.ಮೋನಿಷ್ ಬಂಧಿತರಾಗಿದ್ದು, ಆರೋಪಿಗಳಿಂದ ನಕಲಿ ಅಂಕಪಟ್ಟಿ ಸೇರಿದಂತೆ ಕೆಲ ದಾಖಲೆಗಳನ್ನು ಸಿಸಿಬಿ ತಂಡ ಜಪ್ತಿ ಮಾಡಿದೆ. ಕೆಲ ದಿನಗಳ ಹಿಂದೆ ದೂರ ಶಿಕ್ಷಣದ ಮೂಲಕ ಪಿಯುಸಿಗೆ ದಾಖಲು ಮಾಡಿಸುವ ಸಲುವಾಗಿ ಕತ್ರಿಗುಪ್ಪೆ ಮುಖ್ಯ ರಸ್ತೆಯ ರಾಮ್ ರಾವ್ ಲೇಔಟ್‌ನಲ್ಲಿರುವ ಮರ್ಕ್‌ಯುರಿ ಅಕಾಡೆಮಿ ಮಾಲಿಕರನ್ನು ಹಣ ಪಡೆದು ಪಿಯುಸಿ ನಕಲಿ ಅಂಕಪಟ್ಟಿ ನೀಡಿದ್ದಾಗಿ ಪೊಲೀಸ್ ಆಯುಕ್ತರಿಗೆ ಮಿರ್ಜಾ ಹುಲ್ ಹಕ್ ದೂರು ನೀಡಿದ್ದರು. ಈ ಬಗ್ಗೆ ಸಿಸಿಬಿ ತನಿಖೆಗೆ ಆಯುಕ್ತ ಬಿ.ದಯಾನಂದ್ ವರ್ಗಾಯಿಸಿದರು. ಆಗ ತನಿಖೆಗಿಳಿದಾಗ ರಾಜ್ಯದಲ್ಲಿ ಗುಪ್ತವಾಗಿದ್ದ ನಕಲಿ ಅಂಕಪಟ್ಟಿ ಮಾರಾಟ ಜಾಲ ಬಯಲಾಗಿದೆ.
ಮಾರಾಟ ಜಾಲ ಬಯಲಾಗಿದ್ದು ಹೇಗೆ?: ಕೆಲ ದಿನಗಳ ಹಿಂದೆ ಕತ್ರಿಗುಪ್ಪೆ ಮುಖ್ಯ ರಸ್ತೆಯ ರಾಮ್‌ರಾವ್ ಲೇಔಟ್‌ನಲ್ಲಿರುವ ಮರ್ಕ್ ಯುರಿ ಅಕಾಡೆಮಿ ಮುಖ್ಯಸ್ಥ ಕೆ.ಜೆ. ಮೋನಿಷ್‌ನನ್ನು ಭೇಟಿಯಾಗಿ ತಮ್ಮ ಅಣ್ಣನ ಮಗನನ್ನು ಪಿಯುಸಿಗೆ ಮಿರ್ಜಾ ದಾಖಲು ಮಾಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಯಾವುದೇಪರೀಕ್ಷೆ ಬರೆಸದೆ ಆವಿದ್ಯಾರ್ಥಿಗೆ 'ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ (Karnataka state Council of inter-mediate and higher education)' ಎಂಬ ಸಂಸ್ಥೆ ಹೆಸರಿನಲ್ಲಿ ಅಂಕಪಟ್ಟಿಯನ್ನು ಅಕಾಡೆಮಿ ನೀಡಿತ್ತು. ಅಲ್ಪಾವಧಿಯಲ್ಲೇ ಅಂಕ ಪಟ್ಟಿ ನೀಡಿಕೆ ಬಗ್ಗೆ ಶಂಕೆಗೊಂಡ ದೂರುದಾರರು, ಆ ಅಂಕಪಟ್ಟಿ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಕೂಡಲೇ ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಅವರು ದೂರು ಸಲ್ಲಿಸಿದರು. ಈ ದೂರು ಆಧರಿಸಿ ತನಿಖೆಗಿಳಿದಾಗ ಜಾಲ ಬಯಲಾಗಿದೆ.
ಎಂಬಿಎ ಪದವೀಧರ ಕಿಂಗ್ ಪಿನ್: ಈ ನಕಲಿ ಅಂಕಪಟ್ಟಿ ಜಾಲಕ್ಕೆ ಎಂಬಿಎ ಪದವೀಧರ ಧಾರವಾಡದ ಪ್ರಶಾಂತ್ ಕಿಂಗ್ ಪಿನ್ ಆಗಿದ್ದು, ರಾಜ್ಯವ್ಯಾಪಿ ಆತ ಸಂಪರ್ಕ ಜಾಲ ಹೊಂದಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 8 ವರ್ಷದಲ್ಲಿ 2 ಸಾವಿರ ಮಾರ್ಕ್ಸಸ್ ಮಾರಾಟ?: ಕಳೆದ ಏಳೆಂಟು ವರ್ಷಗಳಿಂದ ನಕಲಿ ಅಂಕಪಟ್ಟಿ ದಂಧೆಯಲ್ಲಿ ಪ್ರಶಾಂತ್ ಸಕ್ರಿ ಯವಾಗಿದ್ದು, ಈವರೆಗೆ ಸುಮಾರು 2 ಸಾವಿರಕ್ಕೂ ಅಧಿಕ ನಕಲಿ ಅಂಕಪಟ್ಟಿ ಮಾರಾಟ ಮಾಡಿರುವ ಮಾಹಿತಿ ಇದೆ. ಆತನ ಕಚೇರಿ ಕಂಪ್ಯೂಟರ್‌ನಲ್ಲಿ ಅಂಕಪಟ್ಟಿ ತಯಾರಿಕೆಯ ಮೂಲ ಪತ್ರಿ ಸಿಕ್ಕಿದೆ. ಈ ದಂಧೆ ಹಣ ವರ್ಗಾವಣೆ ಕುರಿತು ಬ್ಯಾಂಕ್‌ಗಳಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದ ಪೊಲೀಸರನ್ನು ನಾಯಿಗೆ ಹೋಲಿಸಿದ ಎಂಇಎಸ್ ಪುಂಡರು
ಹೇಗೆ ತಯಾರಿಕೆ?: ಪಿಯುಸಿ-ಎಸ್‌ಎಸ್‌ಎಲ್‌ಸಿ ದೂರ ಶಿಕ್ಷಣ ಮೂಲಕ ಪಡೆಯುವರನ್ನೇ ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು. ತಮ್ಮ ಅಕಾಡೆಮಿಗೆ ಪ್ರವೇಶ ಸಲುವಾಗಿ ಬರುವ ವರಿಂದ ಹಣ ಪಡೆದು ಅವರಿಗೆ ನಕಲಿ ಅಂಕಪಟ್ಟಿ ವಿತರಿಸುತ್ತಿದ್ದರು. ಪ್ರಶಾಂತ್ ಕಚೇರಿಯ ಕಂಪ್ಯೂಟರ್‌ನಲ್ಲಿ ಅಂಕಪಟ್ಟಿ ಮಾದರಿ ಮೂಲ ಪ್ರತಿ ಇದ್ದು, ಅಂಕಪಟ್ಟಿ ಬಯಸಿ ಬರುವ ಹೆಸರು ಹಾಗೂ ಅಂಕ ನಮೂದಿಸಿ ತಕ್ಷಣವೇ ಅಂಕಪಟ್ಟಿ ಕೊಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಡಾಟಾ ಡಿಲೀಟ್ ಮಾಡಿದ್ದ ಪ್ರಶಾಂತ್: ಕಳೆದ ವರ್ಷದ ಇದೇ ರೀತಿ ನಕಲಿ ಅಂಕಪಟ್ಟಿ ಪ್ರಕರಣ ಸಂಬಂಧ ಧಾರವಾಡದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ದಾಳಿ ಬಳಿಕ ಎಚ್ಚೆತ್ತುಕೊಂಡ ಪ್ರಶಾಂತ್, ತನ್ನ ಬಳಿ ಅಂಕಪಟ್ಟಿ ವಿತರಿಸಿದ ಕೂಡಲೇ ಆ ಅಭ್ಯರ್ಥಿ ಕುರಿತ ಮಾಹಿತಿಯನ್ನು ಅಳಿಸಿ ಹಾಕುತ್ತಿದ್ದ. ಹೀಗಾಗಿ ಅಂಕಪಟ್ಟಿ ಫಲಾನುಭವಿಗಳ ವಿವರ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.