ಬೀಗ ಹಾಕಿದ ಮನೆಗಳೇ ಖದೀಮನ ಟಾರ್ಗೆಟ್‌: ತಂದೆ-ಮಗ ಸೇರಿ ಮೂವರ ಬಂಧನ

By Kannadaprabha NewsFirst Published Jul 2, 2022, 5:15 AM IST
Highlights

*   ಬಂಧಿತರಿಂದ 1.3 ಕೆಜಿ ಚಿನ್ನ ಜಪ್ತಿ
*  ಬಾಲ್ಯದಿಂದಲೇ ಪುತ್ರನಿಗೆ ಮನೆಗಳ್ಳತನದ ಬಗ್ಗೆ ಹೇಳಿಕೊಟ್ಟಿದ್ದ ಅಪ್ಪ
*  ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು 
 

ಬೆಂಗಳೂರು(ಜು.02): ಬೀಗ ಮನೆಗಳಿಗೆ ಕನ್ನ ಹಾಕಿ ನಗ-ನಾಣ್ಯ ದೋಚುತ್ತಿದ್ದ ತಂದೆ-ಮಗ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದೆ. ಮೈಸೂರಿನ ಇಮ್ರಾನ್‌ ಅಲಿಯಾಸ್‌ ಚೋರ್‌ ಇಮ್ರಾನ್‌, ಆತನ ತಂದೆ ಏಜಾಜ್‌ ಖಾನ್‌ ಅಲಿಯಾಸ್‌ ದಾದಾಫೀರ್‌ ಹಾಗೂ ಸೈಯದ್‌ ಅಹಮದ್‌ ಬಂಧಿತರಾಗಿದ್ದು, ಆರೋಪಿಗಳಿಂದ .65 ಲಕ್ಷ ಮೌಲ್ಯದ 1.3 ಕೆಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳಿಂದ ನಗರದಲ್ಲಿ ನಡೆದ ಮನೆಗಳ ಬಗ್ಗೆ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಜಂಟಿ ಆಯುಕ್ತ (ಅಪರಾಧ) ರಮಣ್‌ ಗುಪ್ತಾ ತಿಳಿಸಿದ್ದಾರೆ.

ವೃತ್ತಿಪರ ಮನೆಗಳ್ಳರು ತಂದೆ-ಮಗ

ಮೈಸೂರಿನ ಏಜಾಜ್‌ ಖಾನ್‌ ವೃತ್ತಿಪರ ಕಳ್ಳನಾಗಿದ್ದು, ತನ್ನ ಮಗನ್ನು ಮನೆಗಳ್ಳತನಕ್ಕೆ ಆತ ಬಳಸಿಕೊಂಡಿದ್ದ. ಬಾಲ್ಯದಿಂದಲೇ ಪುತ್ರನಿಗೆ ಮನೆಗಳ್ಳತನ ಕೃತ್ಯ ಎಸಗುವ ಬಗ್ಗೆ ಹೇಳಿಕೊಟ್ಟಿದ್ದ ಏಜಾಜ್‌, 15 ವರ್ಷಗಳಿಂದ ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ಇತೆರೆಡೆ ತಂದೆ-ಮಗ ಜೋಡಿಯಾಗಿ ಮನೆಗಳಿಗೆ ಕನ್ನ ಹಾಕಿದ್ದರು. ಇತ್ತೀಚಿಗೆ ಜೈಲಿನಲ್ಲಿ ಪರಿಚಯವಾದ ಸೈಯದ್‌ನನ್ನು ಸಹ ತಮ್ಮ ತಂಡಕ್ಕೆ ಅವರ ಸೇರಿಸಿಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

'ತುಂಬಾ ಒಳ್ಳೆ ಕೆಲಸ ಮಾಡಿದ್ದಿ ಬ್ರದರ್':‌ ಫೇಸ್‌ಬುಕ್‌ನಲ್ಲಿ ಕನ್ಹಯ್ಯಾ ಹತ್ಯೆ ವಿಡಿಯೋ ಹೊಗಳಿದ ವ್ಯಕ್ತಿ ಬಂಧನ!

ಅಪಾರ್ಟ್‌ಮೆಂಟ್‌ ಮತ್ತು ಐಷರಾಮಿ ಮನೆಗಳನ್ನೇ ಟಾರ್ಗೆಟ್‌ ಮಾಡಿ ಆರೋಪಿಗಳು ಕನ್ನ ಹಾಕುತ್ತಿದ್ದರು. ಜನ ವಸತಿ ಕಡೆ ಅಡ್ಡಾಡುತ್ತಿದ್ದ ಆರೋಪಿಗಳು, ಬೀಗ ಹಾಕಿ ಮನೆಗಳು ಹಾಗೂ ಅಪಾರ್ಚ್‌ಮೆಂಟ್‌ನಲ್ಲಿ ಕೆಲಸಗಾರ ಸೋಗಿನಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದ. ಬಳಿಕ ಕದ್ದ ವಸ್ತುಗಳನ್ನು ಅಡಮಾನವಿಟ್ಟು ಐಷರಾಮಿ ಜೀವನ ನಡೆಸುತ್ತಿದ್ದರು.

ಪ್ರತಿದಿನ ಒಂದೊಂದು ಐಷರಾಮಿ ಹೋಟೆಲ್‌ನಲ್ಲಿ ಆರೋಪಿಗಳು ವಾಸ್ತವ್ಯ ಹೂಡುತ್ತಿದ್ದರು. ಹಳೇ ಪ್ರಕರಣಗಳ ವಿಚಾರಣೆ ಗೈರಾದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ನ್ಯಾಯಾಲಯವು 50ಕ್ಕೂ ಹೆಚ್ಚು ಬಾರಿ ಸಮನ್ಸ್‌ ಮಾಡಿತ್ತು. ಈ ಸಲುವಾಗಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗೋವಾಗಳಲ್ಲಿ ಆರೋಪಿಗಳಿಗೆ ಬೆನ್ನಹತ್ತಿ ಕೊನೆಗೆ ಮೈಸೂರು ಸೆರೆ ಹಿಡಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
 

click me!