Kolar Crime News: ಸರ್ಕಾರಿ ಭೂ ಮಂಜೂರಿಗಾಗಿ ಜಿಲ್ಲಾಧಿಕಾರಿ ನಕಲಿ ಸಹಿ: ಕಂದಾಯ ಇಲಾಖೆಯ ಇಬ್ಬರು ಅರೆಸ್ಟ್!

By Suvarna NewsFirst Published Jul 1, 2022, 8:41 PM IST
Highlights

Kolar Crime News: ಕೋಲಾರ ನಗರದ ಗಲ್‌ಪೇಟೆ ಪೊಲೀಸರು ವಕ್ಕಲೇರಿ ಕಂದಾಯ ನಿರೀಕ್ಷಕ ಮಂಜುನಾಥ್ ಹಾಗೂ ತಾಲ್ಲೂಕು ಕಚೇರಿ ಕೇಸ್ ವರ್ಕರ್ ಶೈಲಜಾ ಬಂಧಿತರು. 

ವರದಿ : ದೀಪಕ್, ಕೋಲಾರ.

ಕೋಲಾರ (ಜು. 01):  ಕೋಟ್ಯಂತರ ರೂಪಾಯಿ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು (Fake Signature)ಮಾಡಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತಾಲ್ಲೂಕು ಕಚೇರಿಯಲ್ಲಿರುವ ದಲ್ಲಾಳಿಗಳ ಜೊತೆಗೆ ಸೇರಿ ಸಹಿಯನ್ನ ನಕಲು ಮಾಡಿದ ಪ್ರಕರಣದಲ್ಲಿ ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಸಹಿ ನಕಲು ಮಾಡಿ ಸರ್ಕಾರಿ ಭೂಮಿ ಮಂಜೂರು ಮಾಡಲು ಯತ್ನಿಸಿದ ಸಂಭಂದ ಕೊಲಾರದ ಗಲ್‌ಪೇಟೆ ಪೊಲೀಸರು ಇಬ್ಬರು ಅಧಿಕಾರಿಗಳನ್ನ ಬಂಧಿಸಿದ್ದಾರೆ. ಕೋಲಾರ ನಗರದ ಗಲ್‌ಪೇಟೆ ಪೊಲೀಸರು ವಕ್ಕಲೇರಿ ಕಂದಾಯ ನಿರೀಕ್ಷಕ ಮಂಜುನಾಥ್ ಹಾಗೂ ತಾಲ್ಲೂಕು ಕಚೇರಿ ಕೇಸ್ ವರ್ಕರ್ ಶೈಲಜಾ ಬಂಧಿತರು. 

ಕೋಲಾರ ತಾಲ್ಲೂಕು ಆಲಹಳ್ಳಿ ಗ್ರಾಮದ ಸರ್ವೆ-ನಂ- 127 ರಲ್ಲಿ 3.37 ಎಕರೆ ಜಮೀನು ಮಂಜೂರಿಗೆ ದಾಖಲೆ ಸೃಷ್ಟಿ ಮಾಡಲಾಗಿತ್ತು. ನರಸಾಪುರ ಕೈಗಾರಿಕ ಪ್ರದೇಶಕ್ಕೆ ಹೊಂದಿಕೊಂಡಿರುವ 3 ಎಕರೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನಿಗೆ, ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಸಹಿ ನಕಲು ಮಾಡಿ ದಾಖಲೆ ಸೃಷ್ಟಿಸಿದ್ರು.  ಪಹಣಿಯಲ್ಲಿದ್ದ ಸರ್ಕಾರಿ ಕಟ್ಟೆಯನ್ನು ಸರ್ಕಾರಿ ಖರಾಬು ಎಂದು ತಿದ್ದಿದ್ದ ತಾಲ್ಲೂಕು ಕಚೇರಿ ಸಿಬ್ಬಂದಿ, ಕಡತಗಳನ್ನ ತಿರಸ್ಕರಿಸಿದ್ದ ಪ್ರತಿಯನ್ನು ಪುರಸ್ಕರಿಸಿದೆ ಎಂದು ದಾಖಲೆ ಸೃಷ್ಟಿ ಮಾಡಿದ್ದರು. 

ಇನ್ನು ಹಲವು ಕೋಲಾರ ತಾಲ್ಲೂಕು ಕಚೇರಿಯ ಅಧಿಕಾರಿ ಸಿಬ್ಬಂದಿ ಹಾಗೂ ದಲ್ಲಾಳರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಮತ್ತಷ್ಟು ತನಿಖೆ ಚುರುಕಾಗಿದೆ. ಜಿಲ್ಲಾಧಿಕಾರಿಗಳ ನಕಲಿ ಸಹಿ ಹಾಗೂ ಕಡತ ಮೇ 19 ರಂದು ತಹಶೀಲ್ದಾರ್ ಕಚೇರಿಯಲ್ಲಿ ಟಪಾಲ್ ಹಾಗೂ ಲಾಗ್ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅದರಂತೆ ಕಳೆದ ವಾರ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ನಾಗರಾಜ್ ಗಲ್ ಪೇಟೆ ಪೊಲೀಸರಿಗೆ ದೂರು ನೀಡಿದ್ರು. ಅದರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಇಬ್ಬರನ್ನ ಬಂಧಿಸಿದ್ರೆ ಮತ್ತೋಬ್ಬ ಶಿರಸ್ತೇದಾರ ಶ್ರೀನಿವಾಸ್ ತಲೆ ಮರೆಸಿಕೊಂಡಿದ್ದಾರೆ. 

ಇದನ್ನೂ ಓದಿ: ಸೂಸೈಡ್‌ ಕೇಸ್‌: ರಾಹುಲ್‌ ಗಾಂಧಿ ನಕಲಿ ಸಹಿ ಮಾಡಿದ್ದ ಸಂತೋಷ್‌..!

ಇನ್ನೂ ಪ್ರತ್ಯೇಕ ಪ್ರಕರಣದಲ್ಲಿ ಕೋಲಾರ ತಹಶೀಲ್ದಾರ್ ನಾಗರಾಜ್ ವಿರುದ್ದ ಎಸಿಬಿಗೆ ದೂರು ನೀಡಲಾಗಿದೆ. ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿ ಮಾರ್ಕಂಡಪುರ ಗ್ರಾಮದ ಎರಡು ಕುಟುಂಬಕ್ಕೆ ಸೇರಿದ ಜಮೀನು ವಿವಾದ ನ್ಯಾಯಾಲಯದಲ್ಲಿದೆ. ಆದ್ರೆ ತಹಶೀಲ್ದಾರ್ 10 ಲಕ್ಷ ಹಣ ಪಡೆದು ನಕಲಿ ವಂಶ ವೃಕ್ಷ ಮಾಡಿ ಅಕ್ರಮವಾಗಿ ಒಂದೆ ಕುಟುಂಬಕ್ಕೆ 8 ಎಕರೆ ಜಮೀನನ್ನ ಖಾತೆ ಮಾಡಿಕೊಟ್ಟಿದ್ದಾರೆ ಎಂದು ರಂಗನಾಥ್ ಹಾಗೂ ಮಂಜುನಾಥ್ ಎಂಬುವವರು ದೂರು ನೀಡಿದ್ದಾರೆ. 

ಮಾತ್ರವಲ್ಲದೆ ಸಹಿ ನಕಲು ಪ್ರಕರಣವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸರು ವರಿಷ್ಠಾಧಿಕಾರಿ ಖುದ್ದು ಪ್ರಕರಣದ ತನಿಖೆಯನ್ನ ಎಎಸ್ಪಿ ಸಚಿನ್ ಘೋರ್ಪಡೆ ಸೂಚಿಸಿದ್ದಾರೆ. ಅದರಂತೆ ಸದ್ಯ ಎಎಸ್ಪಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ವಿಚಾರಣೆ ನಡೆಸಿದ್ದು ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ಭ್ರಷ್ಟ ಅಧಿಕಾರಿಗಳಿಗೆ ಕೆಲ ಏಜೆಂಟರ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ. ಅದರಂತೆ ಸಿಸಿ ಟಿವಿ ಸಾಕ್ಷ್ಯ ನಾಶ ಮಾಡಿರುವ ಸಂಬಂಧ ತಹಶೀಲ್ದಾರ್ ನಾಗರಾಜ್ ಸಹ ವಿಚಾರಣೆಗೊಳಪಡುವ ಸಾಧ್ಯತೆ ಹೆಚ್ಚಾಗಿದೆ. ಪರಿಣಾಮ ತಹಶೀಲ್ದಾರ್ ನಾಗರಾಜ್ ಗೆ ನೋಟೀಸ್ ನೀಡಲಾಗಿದ್ದು, ಮತ್ತಷ್ಟು ಸಿಬ್ಬಂದಿಯನ್ನ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಪೊಲಿಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ: ತಹಸೀಲ್ದಾರರ ನಕಲಿ ಸಹಿ ಬಳಸಿ 75 ಲಕ್ಷ ವಂಚನೆ

ಒಟ್ಟಿನಲ್ಲಿ ಸರ್ಕಾರಿ ಕೆಲಸ ದೇವರ ಕೆಲಸದಂತೆ ಮಾಡಬೇಕಿರುವ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಹಣದಾಸೆಗೆ ಸರ್ಕಾರಿ ಜಮೀನುಗಳನ್ನ ನುಂಗುತ್ತಿರುವುದು ನಿಜಕ್ಕೂ ವಿಪರ್ಯಾಸ. ಇಂತಹ ಅಧಿಕಾರಿಗಳ ಕಳ್ಳಾಟಕ್ಕೆ ಹಿರಿಯ ಅಧಿಕಾರಿಗಳು ಬ್ರೇಕ್ ಹಾಕಬೇಕು ಇಲ್ಲವಾದಲ್ಲಿ ಸರ್ಕಾರಿ ಕಚೇರಿಗಳನ್ನ ಮಾರಾಟ ಮಾಡುವ ಯಾವುದೆ ಅನುಮಾನವಿಲ್ಲ.

click me!