* ಮೂವರನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು
* ನಕಲಿ ಬೇಲ್ ಮಾಡಿಸಲು 20 ಲಕ್ಷ ಹಣ ಕೊಡಿ ಎಂದ ಆರೋಪಿಗಳು
* ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವ ಸಿಸಿಬಿ
ಬೆಂಗಳೂರು(ಮೇ.26): ರಾಜಧಾನಿಯ ಖಾಸಗಿ ಕಾಲೇಜಿನಲ್ಲಿ ತಮ್ಮ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ವೈದ್ಯನಿಗೆ ನಂಬಿಸಿ 66 ಲಕ್ಷ ಪಡೆದ ವಂಚಕರು ಸೀಟು ಕೊಡಿಸದೆ ಹಣ ವಾಪಸ್ ನೀಡದೆ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಮತ್ತೆ 50 ಲಕ್ಷ ಪಡೆದು ವಂಚಿಸಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಕಲಬುರಗಿಯ ಆಳಂದದಲ್ಲಿ ವೈದ್ಯ ವೃತ್ತಿ ಮಾಡುತ್ತಿರುವ ಶಂಕರ್ ಬಾಬುರಾವ್ ನೀಡಿದ ದೂರಿನ ಮೇರೆಗೆ ನಾಗರಾಜ್ ಹಾಗೂ ಮಧು ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲಬುರಗಿಯಲ್ಲಿ ಕ್ಲೀನಿಕ್ ಇಟ್ಟುಕೊಂಡಿರುವ ಶಂಕರ್ ಮಗನಿಗೆ ರಾಜಧಾನಿಯ ಕಾಲೇಜೊಂದರಲ್ಲಿ ಎಂಬಿಬಿಎಸ್ ಸೀಟಿ ಪಡೆಯಲು ಓಡಾಟ ನಡೆಸಿದ್ದ. ಹಲವು ಸಲ ತಿರುಗಾಡಿದರೂ ಸೀಟು ಸಿಕ್ಕಿರಲಿಲ್ಲ. ಈ ವೇಳೆ ಎಂಟು ವರ್ಷಗಳಿಂದ ಪರಿಚಿತನಾಗಿದ್ದ ಆರೋಪಿ ನಾಗರಾಜ್ ತಮ್ಮ ಮಗನಿಗೆ ಸೀಟು ಕೊಡಿಸುತ್ತೇನೆ. ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಪರಿಚಯಸ್ಥರಿದ್ದಾರೆ ಎಂದು ಶಂಕರ್ ಗೆ ಹೇಳಿದ್ದ. ಪರಿಚಯಸ್ಥರಾಗಿದ್ದರಿಂದ ನಂಬಿಕೆ ಮೇರೆಗೆ ಕಳೆದ ವರ್ಷ ಹಂತ ಹಂತವಾಗಿ 66 ಲಕ್ಷ ಕೊಟ್ಟಿದ್ದರು. ಬಳಿಕ ಎಂಬಿಎಸ್ ಸೀಟು ಕೊಡಿಸದೆ ಹಣ ನೀಡದೆ ನಾಗರಾಜ್ ಆಟ ಆಡಿಸಿದ್ದ. ಕೆಲ ತಿಂಗಳ ಬಳಿಕ ಹಣ ನೀಡುವುದಾಗಿ ನಗರಕ್ಕೆ ಶಂಕರ್ ನನ್ನು ಆರೋಪಿ ಕರೆಯಿಸಿಕೊಂಡಿದ್ದ.
undefined
Honey Trapping: ನಿತ್ರಾಣ ಶಿರಸ್ತೇದಾರ್ ವಿಡಿಯೋ ಮಾಡಿ ಬೇಡಿಕೆ ಇಟ್ಟ ನಿಖಿತಾ!
ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ ಆರೋಪಿಗಳು
ಗಾಂಧಿನಗರದ ಲಾಡ್ಜ್ ನಲ್ಲಿ ಪ್ರತ್ಯೇಕ ರೂಮ್ ಬುಕ್ ಮಾಡಿದ್ದ ಶಂಕರ್, ಮಧ್ಯರಾತ್ರಿ ಆರೋಪಿಯ ಅಣತಿಯಂತೆ ಇಬ್ಬರು ಯುವತಿಯರು ಶಂಕರ್ ಉಳಿದುಕೊಂಡಿದ್ದ ರೂಮಿಗೆ ನುಗ್ಗಿದ್ದಾರೆ. ಬಳಿಕ ಆತನ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ನಕಲಿ ಪೊಲೀಸರು ರೂಮ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವೇಶ್ಯಾವಾಟಿಕೆ ಜಾಲ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು ರೈಡ್ ಮಾಡಲಾಗಿದೆ ಎಂದಿದ್ದಾರೆ. ಪಕ್ಕದ ರೂಮಿನಲ್ಲಿ ವಾಸ್ತವ್ಯ ಹೂಡಿದ್ದ ನಾಗರಾಜ್ ಹುಡುಗಿಯರು ಇರುವ ಶಂಕರ್ ಪೋಟೊವನ್ನು ಕ್ಲಿಕಿಸಿಕೊಂಡಿದ್ದಾನೆ. ಬಳಿಕ ಶಂಕರ್ ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ರೈಡ್ ಮಾಡಿರುವ ಪೊಲೀಸರಿಗೆ ಪ್ರಕರಣ ದಾಖಲಿಸಿಕೊಳ್ಳದಿರಲು 50 ಲಕ್ಷಕ್ಕೆ ಡೀಲ್ ಮಾಡಿಕೊಂಡಿರುವುದಾಗಿ ಹೇಳಿ ಹಣ ನೀಡುವಂತೆ ಆರೋಪಿಯು ಶಂಕರ್ ಗೆ ತಾಕೀತು ಮಾಡಿದ್ದಾನೆ. ಹಣ ನೀಡದೆ ಹೋದರೆ ನಿನ್ನನ್ನ ಬಂಧಿಸುತ್ತಾರೆ.ಆಗ ನಿನ್ನ ಮಾನ-ಮಾರ್ಯಾದ ಹೋಗಲಿದೆ ಎಂದು ಬೆದರಿಸಿದ್ದಾರೆ. ಮರ್ಯಾದೆಗೆ ಅಂಜಿದ ಶಂಕರ್ ಊರಿಗೆ ಹೋಗಿ ಹಣ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಕಲಬುರಗಿಗೆ ತೆರಳಿ ಮನೆ ಪತ್ರದ ಆಧಾರದ ಮೇಲೆ ಖಾಸಗಿ ಬ್ಯಾಂಕ್ ನಲ್ಲಿ 50 ಲಕ್ಷ ಹಣ ಸಾಲ ಪಡೆದು ಆರೋಪಿಗಳ ಕೈಗೆ ಇಟ್ಟಿದ್ದಾರೆ.
ನಕಲಿ ಬೇಲ್ ಮಾಡಿಸಲು 20 ಲಕ್ಷ ಹಣ ಕೊಡಿ ಎಂದ ಆರೋಪಿಗಳು
50 ಲಕ್ಷ ಪಡೆದು ಆರೋಪಿಗಳು ಕೆಲ ದಿನಗಳು ಸುಮ್ಮನಿದ್ದು ಬಳಿಕ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾರೆ. ದಾಳಿ ವೇಳೆ ಬಂಧಿತರಾಗಿರುವ ಯುವತಿಯರಿಗೆ ಬೇಲ್ ಕೊಡಿಸಲು 20 ಹಣ ಕೊಡುವಂತೆ ತಾಕೀತು ಮಾಡಿದ್ದಾರೆ. ಹಣ ನೀಡದಿದ್ದರೆ ಯುವತಿಯರ ಸಮೇತ ನಿನ್ನ ಮನೆಗೆ ಬಂದು ಮಾನಮಾರ್ಯಾದೆ ಹರಾಜು ಹಾಕುವೆ ಎಂದು ವಂಚಕರು ಬೆದರಿಸಿದ್ದಾರೆ. ಇದರಿಂದ ಕಂಗಲಾದ ಶಂಕರ್ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು ಪ್ರಕರಣವನ್ನ ಸಿಸಿಬಿ ಹಸ್ತಾಂತರಿಸಿದ್ದರು. ಇದೀಗ ಮೂವರನ್ನು ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ಹೆಚ್ಚಿನ ತನಿಖೆ ನಡೆಸುತ್ತಿದೆ.