ಸಾಕ್ಷ್ಯ ಇಲ್ಲದಿದ್ರೂ ಕೊಲೆ ಕೇಸಲ್ಲಿ 13 ವರ್ಷ ಜೈಲಲ್ಲಿದ್ದವನಿಗೆ ಬಿಡುಗಡೆ ಭಾಗ್ಯ

By Kannadaprabha News  |  First Published May 26, 2022, 4:53 AM IST

*  ಹೈಕೋರ್ಟ್‌ನಿಂದ ಜೀವಾವಧಿ ಶಿಕ್ಷೆ ರದ್ದು
*  ಕೊಲೆ ಆರೋಪಿ ಬಿಡುಗಡೆ
*  ಸಾಕ್ಷ್ಯವಿಲ್ಲ ಎಂಬ ಕಾರಣಕ್ಕೆ ದರೋಡೆ ಆರೋಪದಿಂದ ಆರೋಪಿ ಖುಲಾಸೆ


ಬೆಂಗಳೂರು(ಮೇ.26): ಮಹಿಳೆಯ ಚಿನ್ನಾಭರಣ ದರೋಡೆ ಪ್ರಕರಣದಲ್ಲಿ ಖುಲಾಸೆಗೊಂಡು, ಆಕೆಯ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆ ಇದ್ದರೂ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಳೆದ 13 ವರ್ಷಗಳಿಂದ ಜೈಲಿನಲ್ಲಿದ್ದ ವ್ಯಕ್ತಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಪ್ರಕರಣ ಸಂಬಂಧ ಆರೋಪಿ ಶಿವಪ್ರಸಾದ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಪಡಿಸಿರುವ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಎಸ್‌. ರಾಚಯ್ಯ ಅವರ ವಿಭಾಗೀಯ ಪೀಠ, ಇತರೆ ಯಾವುದೇ ಪ್ರಕರಣಗಳಲ್ಲಿ ಆರೋಪಿ ಬಂಧನದ ಅಗತ್ಯ ಇಲ್ಲವಾದರೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಜೈಲು ಅಧಿಕಾರಿಗಳಿಗೆ ಆದೇಶಿಸಿದೆ.

Tap to resize

Latest Videos

Davanagere: ಕದಿಯಲು ಬಂದ ಕಳ್ಳ ಆಯ ತಪ್ಪಿ ಬಿದ್ದು ಸಾವು!

ದರೋಡೆಯಲ್ಲಿ ಖುಲಾಸೆ, ಕೊಲೆ ಕೇಸಲ್ಲಿ ಶಿಕ್ಷೆ:

2008ರ ಜೂ.27ರ ಬೆಳಗ್ಗೆ ಶಿವಪ್ರಸಾದ್‌ ತನಗೆ ಪರಿಚಯವಿದ್ದ ಬೆಂಗಳೂರಿನ ಎಚ್‌ಆರ್‌ಬಿಆರ್‌ ಬಡಾವಣೆ ನಿವಾಸಿ ತುಳಸಿ (46) ಅವರ ಮನೆಗೆ ನುಗ್ಗಿ ಆಕೆಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಬಳಿಕ ಆಕೆಯ ಒಡವೆ ದೋಚಿದ್ದ ಎಂದು ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ 32ನೇ ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ, ದರೋಡೆ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಆದರೆ, ಕೊಲೆ ಪ್ರಕರಣದಲ್ಲಿ ದೋಷಿಯಾಗಿ ಪರಿಗಣಿಸಿ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಿ 2019ರ ಮಾ.19ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಶಿವಪ್ರಸಾದ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು.

ಗದಗ: ಆಂಟಿ ಮೋಹಕ್ಕೆ ಸಿಲುಕಿದ ರೌಡಿಶೀಟರ್: ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಪಾಲಿಗೆ ವಿಲನ್

ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಚ್‌, ಆರೋಪಿ ದರೋಡೆ ಪ್ರಕರಣದಲ್ಲಿ ಖುಲಾಸೆಯಾಗಿದ್ದಾರೆ. ಆದರೆ, ಪ್ರಾಸಿಕ್ಯೂಷನ್‌ (ಸರ್ಕಾರ) ಮಾತ್ರ ಆ ಆದೇಶವನ್ನು ಪ್ರಶ್ನಿಸಿಲ್ಲ. ಇದರಿಂದ ಆ ಆದೇಶವೇ ಅಂತಿಮವಾದಂತಾಗಿದೆ. ಮಹಿಳೆ ಕೊಲೆಗೈದು ಚಿನ್ನಾಭರಣ ದೋಚಿದ ಪ್ರಕರಣದಲ್ಲಿ ದರೋಡೆ ಆರೋಪದಿಂದ ಆರೋಪಿ ಖುಲಾಸೆಗೊಂಡರೆ, ಕೊಲೆ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯ ಒದಗಿಸುವುದು ಪ್ರಾಸಿಕ್ಯೂಷನ್‌ ಹೊಣೆಯಾಗಿರುತ್ತದೆ. ಆದರೆ, ಈ ಹೊಣೆ ನಿಭಾಯಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ. ಮತ್ತೊಂದೆಡೆ ವಿಚಾರಣಾ ನ್ಯಾಯಾಲಯ ಸಹ ಸಾಕ್ಷ್ಯಾಧಾರ ಕೊರತೆಯಿದ್ದರೂ ಆರೋಪಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದೆ.

ಅಲ್ಲದೆ, ಸಾಕ್ಷ್ಯವಿಲ್ಲ ಎಂಬ ಕಾರಣಕ್ಕೆ ದರೋಡೆ ಆರೋಪದಿಂದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮತ್ತೊಂದೆಡೆ ಲಾಭದ ಉದ್ದೇಶದಿಂದಲೇ ಆರೋಪಿ ಹತ್ಯೆ ಮಾಡಿದ್ದಾನೆ ಎನ್ನುವುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ. ಆದರೂ ಕೊಲೆ ಸಂಬಂಧ ಯಾವುದೇ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೂ ಆತ ಲಾಭಕ್ಕಾಗಿ ಕೊಲೆ ಮಾಡಿದ್ದಾನೆಂಬ ತೀರ್ಮಾನಕ್ಕೆ ಬಂದು ಜೀವಾವಧಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಕ್ರಮ ಸರಿಯಲ್ಲ. ನ್ಯಾಯದಾನ ಹಳಿ ತಪ್ಪದಂತೆ ನೋಡಿಕೊಳ್ಳುವುದು ನ್ಯಾಯಾಲಯಗಳ ಪರಮೋಚ್ಚ ಕರ್ತವ್ಯ. ಇಲ್ಲವಾದರೆ ತಪ್ಪಿತಸ್ಥರು ಖುಲಾಸೆಯಾಗುವ ಹಾಗೂ ಅಮಾಯಕರು ಶಿಕ್ಷೆಗೆ ಗುರಿಯಾಗುವ ಅಪಾಯವಿರುತ್ತದೆ ಎಂದು ಹೈಕೋರ್ಚ್‌ ಅಭಿಪ್ರಾಯಪಟ್ಟಿದೆ.
 

click me!