
ಬೆಂಗಳೂರು(ಏ.14): ರಾಜಧಾನಿಯಲ್ಲಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿದ್ದ ಮಹಿಳೆ ಸೇರಿದಂತೆ ಮೂವರು ಕುಖ್ಯಾತ ಅಂತರ್ ರಾಜ್ಯ ಖದೀಮರನ್ನು ಪ್ರತ್ಯೇಕವಾಗಿ ಸೆರೆ ಹಿಡಿದು 1 ಕೋಟಿ ರು ಮೌಲ್ಯದ 2 ಕೆಜಿ ಚಿನ್ನವನ್ನು ಸಿಸಿಬಿ ಜಪ್ತಿ ಮಾಡಿದೆ.
ತಮಿಳುನಾಡು ವೆಲ್ಲೂರಿನ ಜಯಂತಿ, ಗುಜರಾತ್‌ನ ಸೂರತ್ ನಗರದ ‘ಚೆಡ್ಡಿ ಗ್ಯಾಂಗ್’ನ ಮುಜಾಬಾಯ್ ಹಾಗೂ ಕೆಂಗೇರಿಯ ಅಮ್ಜದ್ ಖಾನ್ ಬಂಧಿತರಾಗಿದ್ದು, ಇತ್ತೀಚಿಗೆ ನಗರದಲ್ಲಿ ನಡೆದಿದ್ದ ಮನೆಗಳ್ಳತನ ಕೃತ್ಯಗಳ ಬಗ್ಗೆ ಸಿಸಿಬಿ ತನಿಖೆಯ ವೇಳೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಬೆರಳಚ್ಚು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಹೊರ ರಾಜ್ಯಗಳ ಆರೋಪಿಗಳನ್ನು ಇನ್ಸ್‌ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದ ತಂಡ ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ವಂಚನೆ ಕೇಸ್: ಫ್ರೀಡಂ ಆ್ಯಪ್ ಸಿಇಒ ಸುಧೀರ್ ಬಂಧನ
ತಮಿಳುನಾಡಿನ ಜಯಂತಿ ವೃತ್ತಿಪರ ಕ್ರಿಮಿನಲ್ ಆಗಿದ್ದು, ಮನೆಗಳ್ಳತನಕ್ಕೆ ಆಕೆ ಕುಖ್ಯಾತಿ ಪಡೆದಿದ್ದಾಳೆ. 2016ರಿಂದ ಹೆಬ್ಬಾಳ, ಆರ್.ಟಿ.ನಗರ, ಬಾಣಸವಾಡಿ ಹಾಗೂ ತಮಿಳುನಾಡಿನಲ್ಲಿ ಜಯಂತಿ ಮೇಲೆ ಪ್ರಕರಣಗಳು ದಾಖಲಾಗಿವೆ.
ಹಲವು ಬಾರಿ ಜೈಲಿಗೆ ಸಹ ಹೋಗಿ ಬಂದರು ಆಕೆ ಚಾಳಿ ಬಿಟ್ಟಿರಲಿಲ್ಲ. ಹಗಲು ನಗರದ ತನ್ನ ಚಿಕ್ಕ ಮಗುವಿನೊಂದಿಗೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಹಾಕುತ್ತಿದ್ದಳು. ಬೆಳಗ್ಗೆ ಮನೆಗೆ ಬೀಗ ಹಾಕಿ ಮಕ್ಕಳನ್ನು ಪೋಷಕರು ಶಾಲೆಗೆ ಬಿಡಲು ಹೋಗಿದ್ದಾಗಲೇ ಹೆಚ್ಚು ಆಕೆ ಕಳ್ಳತನ ಮಾಡಿದ್ದಳು. ಈ ಘಟನಾ ಸ್ಥಳದಲ್ಲಿ ಪತ್ತೆಯಾದ ಬೆರಳು ಮುದ್ರೆ ಆಧರಿಸಿ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ತನ್ನ ಪತಿ ಬಾಬು ಹಾಗೂ 8 ಮಕ್ಕಳ ಜತೆ ಜಯಂತಿ ನೆಲೆಸಿದ್ದಳು. ಕಳ್ಳತನಕ್ಕೆ ಪತ್ನಿಗೆ ಪತಿ ಸಹ ಸಾಥ್ ಕೊಟ್ಟಿದ್ದ. ಆರೋಪಿಯಿಂದ 350 ಗ್ರಾಂ ಚಿನ್ನ ಜಪ್ತಿಯಾಗಿದೆ ಎಂದು ಸಿಸಿಬಿ ಹೇಳಿದೆ.
ಮೋಜು ಮಸ್ತಿಗೆ ಮನೆಗಳ್ಳತನ: ದಶಕಗಳಿಂದ ಪಾತಕ ಲೋಕದಲ್ಲಿ ಅಮ್ಜದ್ ಸಕ್ರಿಯವಾಗಿದ್ದು, ಆತನ ಮೇಲೆ ಕೊಲೆ, ಡಕಾಯಿತಿ ಹಾಗೂ ಮನೆಗಳ್ಳತನ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಆತ ಜೈಲೂಟ ಸವಿದಿದ್ದಾನೆ. 2018ರಲ್ಲಿ ಮಾಗಡಿ ರಸ್ತೆ ಠಾಣೆ ಪೊಲೀಸರು ಡಕಾಯಿತಿ ಪ್ರಕರಣದಲ್ಲಿ ಜೈಲಿಗೆ ಕಳುಹಿಸಿದ್ದರು. ನಂತರ ಜೈಲಿನಿಂದ ಹೊರ ಬಂದ ಆತ, ಮೋಜಿನ ಜೀವನ ನಡೆಸಲು ಮನೆಗಳ್ಳತಕ್ಕಿಳಿದಿದ್ದ. ಆರೋಪಿಯಿಂದ 650 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದಲ್ಲಿ ಈ ಚೆಡ್ಡಿಗ್ಯಾಂಗ್ ಕಳ್ಳತನ ಎಸಗಿತ್ತು. ಕೆಲವು ದಿನಗಳ ಹಿಂದೆ ಗುಜರಾತ್‌ನಿಂದ ರೈಲಿನ ಮೂಲಕ ಯಶವಂತಪುರಕ್ಕೆ ಬಂದು ರೈಲ್ವೆ ನಿಲ್ದಾಣದ ಸಮೀಪ ಬಿಡಾರ ಹೂಡಿತ್ತು. ಇವರು ಹಗಲು ವೇಳೆ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ಕಳ್ಳತನ ಮಾಡುತ್ತಿದ್ದರು. ಕೃತ್ಯ ಎಸಗಿದ ಬಳಿಕ ಮತ್ತೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಮರಳಿ ಅಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಹೀಗೆ ಎರಡ್ಮೂರು ಮೂರು ಮನೆಗಳನ್ನು ಕಳ್ಳತನ ಮಾಡಿ ನಂತರ ಊರಿಗೆ ಮರಳುತ್ತಿದ್ದರು. ಆರೋಪಿಗಳಿಂದ 1 ಕೆಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
Belagavi: ವನ್ಯಜೀವಿಗಳ ಅಂಗಾಂಗ ಸಾಗಾಟ : ಓರ್ವನ ಬಂಧನ
ಗುಜರಾತ್‌ನಲ್ಲಿ ಸೆರೆಸಿಕ್ಕ ಖದೀಮ
ಕುಖ್ಯಾತ ಮನೆಗಳ್ಳ ಮುಜಾಬಾಯ್ ಮೂಲತಃ ಗುಜರಾತ್ ರಾಜ್ಯದ ಸೂರತ್ ನಗರದವನಾಗಿದ್ದು, ತನ್ನ ಅಣ್ಣ ಹಾಗೂ ಇಬ್ಬರು ಸ್ನೇಹಿತರ ಜತೆ ಸೇರಿ ಮನೆಗಳ್ಳತನಕ್ಕಾಗಿ ಆತ ‘ಚೆಡ್ಡಿ ಗ್ಯಾಂಗ್’ ಕಟ್ಟಿಕೊಂಡಿದ್ದ.
ಮನೆಗಳ್ಳತನ ಎಸಗಿದ ಬಳಿಕ ಓಡಲು ಅನುಕೂಲವಾಗಲಿದೆ ಎಂದು ಪ್ಯಾಂಟ್ ಅನ್ನು ಚೆಡ್ಡಿ ರೀತಿ ಮಂಡಿವರೆಗೆ ಮಡಚಿಕೊಂಡು ಅವರು ತಲೆಗೆ ಶರ್ಚ್ ಸುತ್ತಿಕೊಂಡು ಕೃತ್ಯ ಎಸಗುತ್ತಿದ್ದರು. ಇದಕ್ಕಾಗಿ ಮುಜಾಬಾಯ್ ಗ್ಯಾಂಗ್‌ಗೆ ‘ಚೆಡ್ಡಿ ಗ್ಯಾಂಗ್’ಎಂದು ಹೆಸರು ಬಂದಿತ್ತು. ಇತ್ತೀಚಿಗೆ ನೆಲಮಂಗಲ ಹಾಗೂ ಜ್ಞಾನಭಾರತಿ ಸಮೀಪ ಮನೆಗಳಿಗೆ ಕನ್ನ ಹಾಕಿದ್ದರು. ಈ ಕೃತ್ಯಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಚೆಡ್ಡಿ ಗ್ಯಾಂಗ್ ಬಗ್ಗೆ ಸುಳಿವು ಸಿಕ್ಕಿತು. ಅಷ್ಟರಲ್ಲಿ ನಗರ ತೊರೆದು ಗುಜರಾತ್‌ಗೆ ಹೋಗಿದ್ದರು. ಕೊನೆಗೆ ಸೂರತ್ ನಗರದ ಪೊಲೀಸರ ಸಹಕಾರದಲ್ಲಿ ಮುಜಾಬಾಯ್‌ನನ್ನು ಬಂಧಿಸಲಾಯಿತು. ದಾಳಿ ವೇಳೆ ಆತನ ಸೋದರ ಹಾಗೂ ಸಹಚರರು ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ