ಆಟೋ ಚಾಲಕನ ಮನೆಯಲ್ಲಿ ದರೋಡೆ ಮಾಡಿಸಿದ ಗೆಳೆಯ: ಮೂವರ ಬಂಧನ

By Kannadaprabha NewsFirst Published May 29, 2023, 6:35 AM IST
Highlights

ತಡರಾತ್ರಿ ಆಟೋ ಚಾಲಕರೊಬ್ಬರ ಮನೆ ನುಗ್ಗಿ ಕುತ್ತಿಗೆಗೆ ಡ್ಯಾಗರ್‌ ಇರಿಸಿ ಬೆದರಿಸಿ ನಗದು ಹಾಗೂ ಚಿನ್ನಾಭರಣ ದರೋಡೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಮೇ.29): ತಡರಾತ್ರಿ ಆಟೋ ಚಾಲಕರೊಬ್ಬರ ಮನೆ ನುಗ್ಗಿ ಕುತ್ತಿಗೆಗೆ ಡ್ಯಾಗರ್‌ ಇರಿಸಿ ಬೆದರಿಸಿ ನಗದು ಹಾಗೂ ಚಿನ್ನಾಭರಣ ದರೋಡೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯದ ಸಣ್ಣಕ್ಕಿ ಬೈಲು ನಿವಾಸಿ ಪ್ರೀತನ್‌ ಅಲಿಯಾಸ್‌ ಅಪ್ಪು(21), ರಂಜಿತ್‌ (22) ಹಾಗೂ ವಿಜಯ್‌ ಕುಮಾರ್‌(19) ಬಂಧಿತರು. ಪ್ರಕರಣದ ಪ್ರಮುಖ ಆರೋಪಿ, ಟೆಕ್ಕಿ ಪ್ರವೀಣ್‌, ಅಲ್ತಾಫ್‌, ಭರತ್‌, ಮನೋಜ್‌ ಅಲಿಯಾಸ್‌ ಜರಿ ತಲೆಮರೆಸಿಕೊಂಡಿದ್ದಾರೆ.

ಜತೆಯಲ್ಲೇ ಇದ್ದು ದರೋಡೆ ಮಾಡಿಸಿದ: ಆಟೋ ಚಾಲಕ ನಾಗೇಶ್‌ ಮತ್ತು ಆರೋಪಿ ಪ್ರೀತನ್‌ ಪರಸ್ಪರ ಪರಿಚಿತರು. ನೆಲ ಮಹಡಿಯಲ್ಲಿ ಪ್ರೀತನ್‌ ವಾಸವಿದ್ದರೆ, ಮೊದಲ ಮಹಡಿಯಲ್ಲಿ ನಾಗೇಶ್‌ ಕುಟುಂಬದೊಂದಿಗೆ ವಾಸವಿದ್ದರು. ಮನೆಯಲ್ಲಿ ಪತ್ನಿ ಇಲ್ಲದಿದ್ದಾಗ ನಾಗೇಶ್‌ ಮತ್ತು ಪ್ರೀತನ್‌ ಪಾರ್ಟಿ ಮಾಡುತ್ತಿದ್ದರು. ‘ಜೂನ್‌ಗೆ ಶಾಲೆ ಪ್ರಾರಂಭವಾಗಲಿದ್ದು, ಮಗನನ್ನು ಶಾಲೆಗೆ ದಾಖಲಿಸಬೇಕು. ಸದ್ಯಕ್ಕೆ .50 ಸಾವಿರ ಹೊಂದಿಸಿ ಮನೆಯಲ್ಲಿ ಇರಿಸಿದ್ದೇನೆ. ಉಳಿಕೆ ಹಣವನ್ನು ಹೊಂದಿಸಬೇಕು’ ಎಂದು ಪ್ರೀತನ್‌ಗೆ ನಾಗೇಶ್‌ ಹೇಳಿದ್ದರು.

ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಫ್ಲೈ ಓವರ್ ಮೇಲಿಂದ ಬಿದ್ದು ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವು

ನಾಗೇಶ್‌ ಮನೆಯಲ್ಲಿ ಹಣ ಇರುವ ವಿಚಾರ ತಿಳಿದುಕೊಂಡಿದ್ದ ಪ್ರೀತನ್‌, ಸ್ನೇಹಿತರಾದ ಪ್ರವೀಣ್‌ ಹಾಗೂ ಇತರೆ ಆರೋಪಿಗಳಿಗೆ ಹೇಳಿದ್ದ. ಹಣದ ವಿಚಾರ ಗೊತ್ತಾದ ಬಳಿಕ ಪ್ರವೀಣ್‌ ಇತರರೊಂದಿಗೆ ಚರ್ಚಿಸಿ ದರೋಡೆಗೆ ಸಂಚು ರೂಪಿಸಿದ್ದ. ಅದರಂತೆ ಮೇ 26ರಂದು ರಾತ್ರಿ ನಾಗೇಶ್‌ ಮನೆಯಲ್ಲೇ ಪ್ರೀತನ್‌ ಮಲಗಿದ್ದ. ಪೂರ್ವನಿರ್ಧರಿತ ಸಂಚಿನಂತೆ ತಡರಾತ್ರಿ ಮೂವರು ಮುಸುಕುಧಾರಿಗಳು ನಾಗೇಶ್‌ ಮನೆ ಬಾಗಿಲು ತಟ್ಟಿದ್ದಾರೆ.

ಈ ವೇಳೆ ನಾಗೇಶ್‌ ಬಾಗಿಲು ತೆರೆದಾಗ ಏಕಾಏಕಿ ಒಳಗೆ ನುಗ್ಗಿ ನಾಗೇಶ್‌ನನ್ನು ಬಿಗಿಯಾಗಿ ಹಿಡಿದುಕೊಂಡು ಆವಾಜ್‌ ಹಾಕಿದ್ದಾರೆ. ಪ್ರೀತನ್‌ ಜಗಳ ಬಿಡುಸುವವನಂತೆ ನಟಿಸಿದ್ದಾನೆ. ಈ ವೇಳೆ ಮೂವರು ಮುಸುಕುಧಾರಿಗಳು ಡ್ಯಾಗರ್‌ ತೆಗೆದು ನಾಗೇಶ್‌ ಕುತ್ತಿಗೆ ಇರಿಸಿ ಹಣ ಎಲ್ಲಿ ಇರಿಸಿದ್ದೀಯಾ ಎಂದು ಕೇಳಿದ್ದಾರೆ. ನಾಗೇಶ್‌ ಹಣದ ಇರಿಸಿರುವ ಜಾಗ ಹೇಳಲು ನಿರಾಕರಿಸಿದಾಗ ಕಲ್ಲಿನಿಂದ ಭುಜ ಹಾಗೂ ಕೈಗಳಿಗೆ ಹಲ್ಲೆ ಮಾಡಿದ್ದಾರೆ. ಡ್ಯಾಗರ್‌ ಹಿಡಿದು ಬೆದರಿಸಿದ ಪರಿಣಾಮ ಬೀರುವಿನಲ್ಲಿ ಹಣ ಇರುವುದಾಗಿ ನಾಗೇಶ್‌ ಹೇಳಿದ್ದಾರೆ. ಈ ವೇಳೆ ಆರೋಪಿಗಳು ಬೀರು ತೆರೆದು ಹಣ ಹಾಗೂ ಚಿನ್ನಾಭರಣ ದೋಚಿದ್ದಾರೆ. ನಾಗೇಶ್‌ನ ಎರಡು ಮೊಬೈಲ್‌ ಫೋನ್‌ ಕಿತ್ತುಕೊಂಡು ಹೊರಗಿನಿಂದ ಬಾಗಿಲಿಗೆ ಚಿಲಕ ಹಾಕಿಕೊಂಡು ಪರಾರಿಯಾಗಿದ್ದರು.

ಪ್ರೀತನ್‌ ಮೊಬೈಲ್‌ ಬಿಟ್ಟು ಹೋದ ದುಷ್ಕರ್ಮಿಗಳು: ದುಷ್ಕರ್ಮಿಗಳು ಪ್ರೀತನ್‌ನ ಮೊಬೈಲ್‌ ಕಿತ್ತುಕೊಂಡಿರಲಿಲ್ಲ. ಹೀಗಾಗಿ ಪ್ರೀತನ್‌ ನೆಲ ಮಹಡಿಯಲ್ಲಿದ್ದ ತಾಯಿಗೆ ಕರೆ ಮಾಡಿ ಕರೆಸಿಕೊಂಡು ಚಿಲಕ ತೆಗೆಸಿದ್ದಾನೆ. ಬಳಿಕ ನಾಗೇಶ್‌ ಘಟನೆ ಸಂಬಂಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಉತ್ಸಾಹದಲ್ಲಿ ತನಿಖೆ ಬಗ್ಗೆ ಕೇಳಿ ಸಿಕ್ಕಿಬಿದ್ದ: ಪ್ರಕರಣ ದಾಖಲಿಸಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ತನಿಖೆ ಆರಂಭಿಸಿದಾಗ ಘಟನಾ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ವಿಜಯ್‌ ಯಾವುದೇ ಅನುಮಾನಬಾರದಂತೆ ವರ್ತಿಸುತ್ತಿದ್ದ. ಎರಡು-ಮೂರು ಬಾರಿ ಪೊಲೀಸರು ನಾಗೇಶ್‌ ಮನೆ ಬಳಿ ಹೋದಾಗ, ಸ್ವಯಂ ಪ್ರೇರಿತನಾಗಿ ವಿಜಯ್‌ ಪೊಲೀಸರ ಬಳಿ ತೆರಳಿ ತನಿಖೆ ಬಗ್ಗೆ ವಿಚಾರಿಸುತ್ತಿದ್ದ. ಈತನ ಆಸಕ್ತಿ ಹಾಗೂ ನಡವಳಿಕೆ ಬಗ್ಗೆ ಅನುಮಾನಗೊಂಡ ಪೊಲೀಸರು ವಿಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದರೋಡೆ ಪ್ರಕರಣ ಬಯಲಾಗಿದೆ. ನಾಗೇಶ್‌ ಜತೆಯಲ್ಲಿದ್ದ ಪ್ರೀತನ್‌ ಸಹ ಈ ದರೋಡೆ ಸಂಚಿನಲ್ಲಿ ಇದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಳಿಕ ಆತನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಇಡೀ ಸಂಚಿನ ರಹಸ್ಯ ಬಯಲಾಗಿದೆ.

Bengaluru: ಏರಿಯಾದಲ್ಲಿ ಹವಾ ಸೃಷ್ಟಿಸಲು ಕೊಲೆ ಮಾಡಿದ್ದ ಮೂವರ ಸೆರೆ

ಸಂಚುಕೋರ ಟೆಕ್ಕಿ!: ಪ್ರಕರಣದಲ್ಲಿ ಪ್ರಮುಖ ಆರೋಪಿ ಪ್ರವೀಣ್‌ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌. ರಜೆ ದಿನಗಳಲ್ಲಿ ಏರಿಯಾದಲ್ಲಿ ಪ್ರವೀಣ್‌ ಮತ್ತು ಉಳಿದ ಆರೋಪಿಗಳು ಕ್ರಿಕೆಟ್‌ ಆಡುತ್ತಿದ್ದರು. ಕ್ರಿಕೆಟ್‌ ಆಡುವಾಗ ಪ್ರೀತನ್‌, ನಾಗೇಶ್‌ ಮನೆಯಲ್ಲಿ ಹಣ ಇರುವ ವಿಚಾರ ತಿಳಿಸಿದಾಗ ದರೋಡೆಗೆ ಯೋಜನೆ ರೂಪಿಸಿದ್ದೇ ಈ ಪ್ರವೀಣ್‌. ಸದ್ಯ ಪ್ರವೀಣ್‌ ಸೇರಿದಂತೆ ನಾಲ್ವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳು ಇದೇ ರೀತಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ.

click me!