
ಬೆಂಗಳೂರು(ಜು.30): ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆಗಳಲ್ಲಿ ಅಕ್ರಮವಾಗಿ ಭಾರಿ ಪ್ರಮಾಣದ ಸ್ಫೋಟಕ ಸಾಮಾಗ್ರಿಗಳನ್ನು ಶೇಖರಿಸಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಸರಘಟ್ಟದ ರಾಘವೇಂದ್ರ ಲೇಔಟ್ ನಿವಾಸಿ ಶ್ರೀನಿವಾಸ (40), ಕಲ್ಲುಗುಡ್ಡದಹಳ್ಳಿ ನಿವಾಸಿ ಶಂಕರ್ (30) ಮತ್ತು ಕುಮಾರ್ (21) ಬಂಧಿತರು. ಸ್ಫೋಟಕಗಳನ್ನು ಅಕ್ರಮವಾಗಿ ಶೇಖರಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿ 16 ಕೆ.ಜಿ. ಇದ್ದಿಲು ಪುಡಿ, 10 ಕೆ.ಜಿ. ಸಲ್ಫರ್ ಪೌಡರ್, 2 ಕೆ.ಜಿ. ಸ್ಫೋಟಕ ಜೆಲ್, 59 ಕೆ.ಜಿ. ಪೊಟ್ಯಾಶಿಯಮ್ ನೈಟ್ರೇಟ್, 1 ಕ್ವಿಂಟಲ್ 10 ಕೆ.ಜಿ. ಇತರೆ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗ್ಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಶಿವಮೊಗ್ಗಕ್ಕೆ ಶಂಕಿತ ಉಗ್ರರ ಕರೆತಂದು ಎನ್‌ಐಎ ಶೋಧ
ಪರವಾನಗಿ ಇಲ್ಲದೆ ಆರೋಪಿ ಶ್ರೀನಿವಾಸ ತನ್ನ ಮನೆಯಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿರುವ ಮಾಹಿತಿ ಮೇರೆಗೆ ದಾಳಿ ಮಾಡಿದಾಗ, ಮನೆಯಲ್ಲಿ ಅಮೋನಿಯಂ ನೈಟ್ರೇಡ್ ಪೇಸ್ಟ್, ಸಲ್ಫರ್ ಪೌಡರ್, ಪೊಟ್ಯಾಶಿಯಮ್ ನೈಟ್ರೇಟ್, ಇದ್ದಲಿನ ಪುಡಿ ಪತ್ತೆಯಾಗಿದೆ. ಕಲ್ಲು ಕ್ವಾರಿಗಳಲ್ಲಿ ಬಂಡೆ ಸ್ಫೋಟಿಸಲು ಸ್ಫೋಟಕ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಮತ್ತೊಂದು ಪ್ರಕರಣಗಳಲ್ಲಿ ಆರೋಪಿಗಳಾದ ಶಂಕರ್ ಮತ್ತು ಕುಮಾರ್ ಎಂಬುವರ ಮನೆಗಳ ಮೇಲೆ ದಾಳಿ ಮಾಡಿದಾಗ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಈ ಆರೋಪಿಗಳನ್ನು ಬಂಧಿಸಿ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಲ್ಲು ಕ್ವಾರಿಗಳಲ್ಲಿ ಸ್ಫೋಟಿಸಲು ಆರೋಪಿಗಳು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಎರಡೂ ಪ್ರಕರಣಗಳಲ್ಲಿ ಯಾವುದೇ ಪರವಾನಗಿ, ಅನುಮತಿ ಪಡೆಯದೆ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದ ಆರೋಪದಡಿ ಆರೋಪಿಗಳ ವಿರುದ್ಧ ಸ್ಫೋಟಕ ಕಾಯ್ದೆಯಡಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.
ಈ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ಎಲ್ಲಿಂದ, ಯಾರಿಂದ ಖರೀದಿಸಿ ತಂದಿದ್ದರು. ಈ ಅಕ್ರಮ ವ್ಯವಹಾರದ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಸೇರಿದಂತೆ ಹೆಚ್ಚಿನ ಮಾಹಿತಿ ಪಡೆಯಲು ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ