Bengaluru: ಟಾಕಿಂಗ್‌ ಟಾಮ್‌ ಬಳಸಿ ಡ್ರಗ್ಸ್‌ ಕಳ್ಳಸಾಗಣೆ: ಮೂವರ ಬಂಧನ

By Govindaraj S  |  First Published Nov 18, 2022, 12:21 PM IST

ಟಾಕಿಂಗ್‌ ಟಾಮ್‌ ಮಾದರಿಯ ಆಟಿಕೆ ಗೊಂಬೆಗಳಲ್ಲಿ ಡ್ರಗ್ಸ್‌ ತುಂಬಿ ಗ್ರಾಹಕರಿಗೆ ಪೂರೈಸುತ್ತಿದ್ದ ಎಂಬಿಎ ಪದವೀಧರ ಸೇರಿದಂತೆ ಮೂವರು ಚಾಲಾಕಿ ಪೆಡ್ಲರ್‌ಗಳು ವೈಟ್‌ಫೀಲ್ಡ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.


ಬೆಂಗಳೂರು (ನ.18): ಟಾಕಿಂಗ್‌ ಟಾಮ್‌ ಮಾದರಿಯ ಆಟಿಕೆ ಗೊಂಬೆಗಳಲ್ಲಿ ಡ್ರಗ್ಸ್‌ ತುಂಬಿ ಗ್ರಾಹಕರಿಗೆ ಪೂರೈಸುತ್ತಿದ್ದ ಎಂಬಿಎ ಪದವೀಧರ ಸೇರಿದಂತೆ ಮೂವರು ಚಾಲಾಕಿ ಪೆಡ್ಲರ್‌ಗಳು ವೈಟ್‌ಫೀಲ್ಡ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುನೇಶ್ವರ್‌ ಲೇಔಟ್‌ ನಿವಾಸಿಗಳಾದ ಪವೀಶ್‌, ಅಭಿಜಿತ್‌ ಹಾಗೂ ಸೈಫ್‌ವುದ್ದೀನ್‌ ಬಂಧಿತರಾಗಿದ್ದು, ಆರೋಪಿಗಳಿಂದ 15 ಲಕ್ಷ ಮೌಲ್ಯದ 138 ಗ್ರಾಂ ತೂಕದ ಮೇಥಾಕೋಲಿನ್‌, ಎಂಡಿಎಂಎ, 4 ಮೊಬೈಲ್‌, ಆಟಿಕೆ ಗೊಂಬೆಗಳು ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ. 

ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಪ್ರಮುಖ ಆರೋಪಿ ಕೇರಳ ಮೂಲದ ಚಿಯಾ ಪತ್ತೆಗೆ ತನಿಖೆ ಮುಂದುವರೆದಿದೆ. ಇತ್ತೀಚೆಗೆ ಪಟ್ಟಂದೂರು ಅಗ್ರಹಾರದ ಐಟಿಪಿಎಲ್‌ ಬ್ಯಾಕ್‌ಗೇಟ್‌ ಸಮೀಪ ಡಿಟಿಡಿಸಿ ಎಕ್ಸ್‌ಪ್ರೆಸ್‌ ಕೊರಿಯರ್‌ ಸವೀರ್ಸ್‌ ಬಳಿ ಡ್ರಗ್ಸ್‌ ಸಾಗಾಣಿಕೆಗೆ ದುಷ್ಕರ್ಮಿಗಳು ಯತ್ನಿಸಿರುವ ಬಗ್ಗೆ ವೈಟ್‌ಫೀಲ್ಡ್‌ ಠಾಣೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಇನ್‌ಸ್ಪೆಕ್ಟರ್‌ ಶಾಂತಮಲ್ಲಪ್ಪ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಎ.ವಿ.ನವೀನ್‌ ಕುಮಾರ್‌ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಕೌಟುಂಬಿಕ ಕಲಹ: ಮಾವನ ಮನೆಗೆ ಬಂದಿದ್ದ ಅಳಿಯನಿಂದ ಮಗಳ ಮೇಲೆ ಹಲ್ಲೆ

ಹಣದಾಸೆಗೆ ಡ್ರಗ್ಸ್‌ ದಂಧೆ: ಆರೋಪಿಗಳಾದ ಎಂಬಿಎ ಪದವೀಧರ ಪವೀಶ್‌, ಐಟಿಐ ಓದಿರುವ ಅಭಿಜಿತ್‌ ಹಾಗೂ ಪದವೀಧರ ಸೈಫುವುದ್ದೀನ್‌ ಮೂಲತಃ ಕೇರಳ ರಾಜ್ಯದ ತ್ರಿಶೂರ್‌ ಜಿಲ್ಲೆಯವರಾಗಿದ್ದು, ಆರು ತಿಂಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಒಂದೇ ರಾಜ್ಯದವರಾಗಿದ್ದರಿಂದ ಪರಸ್ಪರ ಪರಿಚಯವಾಗಿ ಆತ್ಮೀಯತೆ ಮೂಡಿದೆ. ಮೊದಲು ಡ್ರಗ್ಸ್‌ ವ್ಯಸನಿಗಳಾಗಿದ್ದ ಇವರಿಗೆ ಕೇರಳ ಮೂಲದ ಪೆಡ್ಲರ್‌ ಚಿಯಾ ಸಂಪರ್ಕವಾಗಿದೆ. ಬಳಿಕ ಆತನ ಒಡನಾಟದಲ್ಲಿ ಹಣದಾಸೆಗೆ ಡ್ರಗ್ಸ್‌ ದಂಧೆಗೆ ಈ ಮೂವರು ಸಾಥ್‌ ಕೊಟ್ಟಿದ್ದಾರೆ. ಅಂತೆಯೇ ಚಿಯಾ ಸೇರಿದಂತೆ ಕೇರಳ ರಾಜ್ಯದ ಹಾಗೂ ನೈಜೀರಿಯಾ ದೇಶದ ಪೆಡ್ಲರ್‌ಗಳಿಂದ ಡ್ರಗ್ಸ್‌ ಖರೀದಿಸಿ ಪವೀಶ್‌, ಅಭಿಜಿತ್‌ ಹಾಗೂ ಸೈಫ್‌ವುದ್ದೀನ್‌, ದುಬಾರಿ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಅಕ್ರಮವಾಗಿ ಪಾಸ್ ಪೋರ್ಟ್ ಮಾಡಿಸಿದ್ದ ನೇಪಾಳ ಪ್ರಜೆ ಬಂಧನ

ಪೊಲೀಸರಿಗೆ ತಿಳಿಯದಂತೆ ಗ್ರಾಹಕರಿಗೆ ಆಟಿಕೆ ಗೊಂಬೆಗಳಲ್ಲಿ ಅಡಗಿಸಿಟ್ಟು ಹಾಗೂ ಕೊರಿಯರ್‌ ಬಾಕ್ಸ್‌ಗಳ ಮೂಲಕ ಡ್ರಗ್ಸ್‌ ಪೂರೈಸುತ್ತಿದ್ದರು. ಇನ್ನು ಗ್ರಾಹಕರನ್ನು ನೇರವಾಗಿ ಭೇಟಿಯಾಗದೆ ಆನ್‌ಲೈನ್‌ ಮೂಲಕವೇ ವ್ಯವಹರಿಸುತ್ತಿದ್ದರು. ಇತ್ತೀಚೆಗೆ ಈ ದಂಧೆಗೆ ಮಾಹಿತಿ ಸಿಕ್ಕಿತು. ಅಂತೆಯೇ ಪಟ್ಟಂದೂರು ಅಗ್ರಹಾರದ ಐಟಿಪಿಎಲ್‌ ಬ್ಯಾಕ್‌ಗೇಟ್‌ ಸಮೀಪ ಡಿಟಿಡಿಸಿ ಎಕ್ಸ್‌ಪ್ರೆಸ್‌ ಕೊರಿಯರ್‌ ಸವೀರ್‍ಸ್‌ ಕೇಂದ್ರಕ್ಕೆ ಟಾಕಿಂಗ್‌ ಟಾಮ್‌ ಬೆಕ್ಕಿನ ಬೊಂಬೆಯೊಳಗೆ ಮಾದಕವಸ್ತು ಇಟ್ಟು, ಅದನ್ನು ಒಂದು ಬಾಕ್ಸ್‌ನಲ್ಲಿ ಹಾಕಿಕೊಂಡು ಕೊರಿಯರ್‌ ಮಾಡಲು ಆರೋಪಿಗಳು ಬಂದಿದ್ದಾಗ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

click me!