ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಒಂಟಿ ಮಹಿಳೆಯರ ಸರ ಕಿತ್ತು ಪರಾರಿ ಆಗುತ್ತಿದ್ದ ರೌಡಿಶೀಟರ್ ಸೆರೆ

By Kannadaprabha News  |  First Published Dec 8, 2023, 7:01 PM IST

ತುಮಕೂರು ಜಿಲ್ಲೆಯ ತಿಪಟೂರು ಮೂಲದ ಅಭಿಜಿತ್‌ ಅಲಿಯಾಸ್‌ ಜೀತು, ಸಲ್ಮಾನ್‌ ಅಲಿಯಾಸ್‌ ಹೆಬ್ಬೆಟ್ಟು, ರಾಕೇಶ್‌ ಅಲಿಯಾಸ್‌ ರವಿ ಬಂಧಿತರು. ಆರೋಪಿಗಳಿಂದ ₹3.70 ಲಕ್ಷ ಮೌಲ್ಯದ 68 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಿದ ಪೊಲೀಸರು. 


ಬೆಂಗಳೂರು(ಡಿ.08):  ವಿಳಾಸ ಕೇಳುವ ನೆಪದಲ್ಲಿ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಹಿಂಬಾಲಿಸಿ ಸರಗಳವು ಮಾಡುತ್ತಿದ್ದ ರೌಡಿ ಶೀಟರ್‌ ಸೇರಿ ಮೂವರು ಖತರ್ನಾಕ್‌ ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಮೂಲದ ಅಭಿಜಿತ್‌ ಅಲಿಯಾಸ್‌ ಜೀತು(32), ಸಲ್ಮಾನ್‌ ಅಲಿಯಾಸ್‌ ಹೆಬ್ಬೆಟ್ಟು(20), ರಾಕೇಶ್‌ ಅಲಿಯಾಸ್‌ ರವಿ(26) ಬಂಧಿತರು. ಆರೋಪಿಗಳಿಂದ ₹3.70 ಲಕ್ಷ ಮೌಲ್ಯದ 68 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಮಹಿಳೆಯೊಬ್ಬರು ಕೆಲಸ ಮುಗಿಸಿಕೊಂಡು ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಕೆಂಪಾಪುರ ಪೈಪ್‌ಲೈನ್‌ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಆಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದು ವಿಳಾಸ ಕೇಳುಪ ನೆಪದಲ್ಲಿ ಏಕಾಏಕಿ ಕೊರಳಿಗೆ ಕೈ ಹಾಕಿ ಚಿನ್ನ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

undefined

ಯಾದಗಿರಿ ಟು ಶಿವಮೊಗ್ಗ ಕಳ್ಳರ ಲಿಂಕ್ ಬೇಧಿಸಿದ ಯಾದಗಿರಿ ಪೋಲಿಸರು: 80 ಕೆಜಿ ಶ್ರೀಗಂಧ ಜಪ್ತಿ

ತಿಪಟೂರು ಮೂಲದ ಬಂಧಿತ ಮೂವರು ಆರೋಪಿಗಳು ಸ್ನೇಹಿತರಾಗಿದ್ದು, ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ಅಭಿಜಿತ್‌ ತಿಪಟೂರು ಟೌನ್‌ ಠಾಣೆ ರೌಡಿ ಶೀಟರ್‌ ಆಗಿದ್ದಾನೆ. ಈ ಹಿಂದೆ ಹೊನ್ನವಳ್ಳಿ, ಗುಬ್ಬಿ, ಗಂಡಸಿ, ತಿಪಟೂರು ಟೌನ್‌ ಠಾಣೆ ವ್ಯಾಪ್ತಿಯಲ್ಲಿ ಕನ್ನಗಳವು, ಪೋಕ್ಸೋ ಪ್ರಕರಣಗಳಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ ಬಂದಿದ್ದಾನೆ. ಮತ್ತೊಬ್ಬ ಆರೋಪಿ ಅಲ್ಮಾನ್‌ ತಿಪಟೂರು ಟೌನ್‌ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿರುವುದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳ ಬಂಧನದಿಂದ ಸೋಲದೇವನಹಳ್ಲಿ, ನಂದಿನಿ ಲೇಔಟ್‌, ಸುಬ್ರಹ್ಮಣ್ಯನಗರ, ರಾಜಾಜಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ತಲಾ ಒಂದು ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು: ಲೇಡಿ ಎಸ್‌ಐ ಬಟ್ಟೆ ಬಿಚ್ಚಿಸುವೆ ಎಂದ ಹೋಟೆಲ್‌ ಮಾಲೀಕ..!

ಸಂಬಂಧಿಕರ ಬೈಕ್‌ ಪಡೆದು ಕೃತ್ಯ

ಆರೋಪಿ ಅಭಿಜಿತ್‌ ಕ್ರಿಕೆಟ್‌ ಬೆಟ್ಟಿಂಗ್‌ ಜೂಜಾಡಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಈ ಸಾಲ ತೀರಿಸಲು ಉಳಿದ ಆರೋಪಿಗಳ ಜತೆಗೆ ಸೇರಿಕೊಂಡು ಸರಗಳ್ಳತನಕ್ಕೆ ಇಳಿದಿದ್ದ. ಆರೋಪಿಗಳು ತಿಪಟೂರಿನಿಂದ ಬೆಂಗಳೂರಿಗೆ ಬಂದು ಸೋಲದೇವನಹಳ್ಳಿ ಮತ್ತು ಪೀಣ್ಯದಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಮನೆ ಹುಡುಕಬೇಕು ಎಂದು ಸಂಬಂಧಿಕರ ಬಳಿ ಹೇಳಿ ಅವರ ದ್ವಿಚಕ್ರ ವಾಹನ ಪಡೆದು ನಗರದ ವಿವಿಧೆಡೆ ಸುತ್ತಾಡಿ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಹಿಂಬಾಲಿಸಿ ವಿಳಾಸ ಕೇಳುವ ನೆಪದಲ್ಲಿ ಏಕಾಏಕಿ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕಿತ್ತು ಪರಾರಿಯಾಗುತ್ತಿದ್ದರು.

ತಿಪಟೂರಲ್ಲಿ ವಿಲೇವಾರಿ

ಸುಲಿಗೆ ಬಳಿಕ ಆರೋಪಿಗಳು ಸಂಬಂಧಿಕರ ಮನೆಗೆ ತೆರಳಿ ದ್ವಿಚಕ್ರ ವಾಹನ ವಾಪಾಸ್‌ ನೀಡಿ, ಮಾರನೇ ದಿನ ತಿಪಟೂರಿಗೆ ತೆರಳಿ ಕದ್ದಿರುವ ಚಿನ್ನಾಭರಣ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು. ಬಳಿಕ ಸಮವಾಗಿ ಆ ಹಣ ಹಂಚಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!