ಚಾಕು ತೋರಿಸಿ ಮೊಬೈಲ್‌,ಚಿನ್ನಾಭರಣ ದೋಚುತ್ತಿದ್ದವರ ಹೆಡೆಮುರಿ ಕಟ್ಟಿದ ಪೊಲೀಸರು

By Kannadaprabha NewsFirst Published Sep 30, 2020, 8:06 AM IST
Highlights

22 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್‌, ಬೈಕ್‌ ಜಪ್ತಿ| ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಜಾಲ ಬೀಸಿದ ಪೊಲೀಸರು| 

ಬೆಂಗಳೂರು(ಸೆ.30): ನಗರದಲ್ಲಿ ಏಕಾಂಗಿಯಾಗಿ ಓಡಾಡುವ ಸಾರ್ವಜನಿಕರಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ಮೊಬೈಲ್‌ ಹಾಗೂ ಚಿನ್ನಾಭರಣ ದೋಚುತ್ತಿದ್ದ ಮೂವರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಜೆ.ಜೆ.ನಗರದ ಅಫ್ಜಲ್‌ ಪಾಷ, ಅಫ್ರಿದ್‌ ಖಾನ್‌ ಹಾಗೂ ಆಂಧ್ರಪ್ರದೇಶದ ಪ್ರವೀಣ್‌ ಕುಮಾರ್‌ ಬಂಧಿತರು. ಆರೋಪಿಗಳಿಂದ 22.95 ಲಕ್ಷ ಮೌಲ್ಯ ಚಿನ್ನಾಭರಣ, ದ್ವಿಚಕ್ರ ವಾಹನ ಹಾಗೂ 43 ಮೊಬೈಲ್‌ ಜಪ್ತಿ ಮಾಡಲಾಗಿದೆ. ಸೆ.13ರಂದು ಕೆಂಪೇಗೌಡ ರಸ್ತೆಯಲ್ಲಿರುವ ಎಫ್‌ಕೆಸಿಸಿ ಕಚೇರಿ ಮುಂದೆ ವ್ಯಕ್ತಿಯೊಬ್ಬರು ಮಾತನಾಡುತ್ತಿದ್ದರು. ಆಗ ಸ್ಕೂಟರ್‌ನಲ್ಲಿ ಬಂದ ಅಫ್ಜಲ್‌ ಪಾಷ, ಆ ವ್ಯಕ್ತಿಗೆ ಚಾಕು ತೋರಿಸಿ ಬೆದರಿಕೆ ಮೊಬೈಲ್‌ ದೋಚಿದ್ದ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಉಪ್ಪಾರಪೇಟೆ ಇನ್‌ಸ್ಪೆಕ್ಟರ್‌ ಶಿವಸ್ವಾಮಿ ತಂಡವು, ಪಾಷಾನನ್ನು ವಶಕ್ಕೆ ಪಡೆದಿದೆ. ಬಳಿಕ ಆತ ನೀಡಿದ ಸುಳಿವಿನ ಮೇರೆಗೆ ಸಹಚರ ಖಾನ್‌ ಹಾಗೂ ಕದ್ದ ಮಾಲು ಸ್ವೀಕರಿಸುತ್ತಿದ್ದ ಪ್ರವೀಣ್‌ ಸಿಕ್ಕಿಬಿದ್ದಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಉಪನ್ಯಾಸಕನಿಂದ ಡ್ರಗ್ಸ್‌ ದಂಧೆ: 76 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ವೃತ್ತಿಪರ ಕಳ್ಳರು:

ಜೆ.ಜೆ.ನಗರದ ಅಫ್ಜಲ್‌ ವೃತ್ತಿಪರ ಮೊಬೈಲ್‌ ಕಳ್ಳನಾಗಿದ್ದಾನೆ. ದೋಚಿದ ಮೊಬೈಲ್‌ ಹಾಗೂ ಚಿನ್ನಾಭರಣಗಳನ್ನು ಹೈದಾರಬಾದ್‌ನಲ್ಲಿ ಪ್ರವೀಣ್‌ ಕುಮಾರ್‌ಗೆ ಮಾರುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳಿಂದ ಉಪ್ಪಾರಪೇಟೆ ಠಾಣೆಯ ಏಳು, ಜ್ಞಾನಭಾರತಿ ಠಾಣೆ 2, ಬ್ಯಾಟರಾಯನಪುರ, ಚಾಮರಾಜಪೇಟೆ ಮತ್ತು ರಾಜಗೋಪಾಲ ನಗರ ಠಾಣೆಗಳ ತಲಾ ಒಂದೊಂದು ಕಳವು ಪ್ರಕರಣಗಳು ಪತ್ತೆಯಾಗಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 22.95 ಲಕ್ಷ ಬೆಲೆ ಬಾಳುವ 337 ಗ್ರಾಂ ಚಿನ್ನಾಭರಣ, 1.15 ಲಕ್ಷ ನಗದು, 3 ದ್ವಿಚಕ್ರ ವಾಹನಗಳು ಹಾಗೂ 43 ಮೊಬೈಲ್‌ ಜಪ್ತಿಯಾಗಿವೆ. ಈ ಕಾರ್ಯಾಚರಣೆಯಲ್ಲಿ ತಲೆಮರೆಸಿಕೊಂಡಿರುವ ಮತ್ತೆ ಕೆಲವು ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

click me!