ವೆಬ್‌ ಸರಣಿ ನೋಡಿ ಡ್ರಗ್ಸ್‌ ದಂಧೆಗಿಳಿದ ವಿದ್ಯಾರ್ಥಿ..!

By Kannadaprabha NewsFirst Published Sep 30, 2020, 7:13 AM IST
Highlights

ಡಾರ್ಕ್‌ನೆಟ್‌ನಲ್ಲಿ ಬಿಡ್‌ ಕಾಯಿನ್‌ ಬಳಸಿ ನೆದರ್‌ಲ್ಯಾಂಡ್‌ನಿಂದ ಡ್ರಗ್‌ ಖರೀದಿ| ನಾಲ್ವರು ವಿದ್ಯಾರ್ಥಿಗಳ ಕೃತ್ಯ| ಮನೆಗಳ ಮೇಲೆ ದಾಳಿ ಸಹ ಡ್ರಗ್ಸ್‌ ಜಪ್ತಿ| ತನಿಖೆಯಲ್ಲಿ ಬೆಳಕಿಗೆ ಬಂದ ಹಲವು ಸಂಗತಿಗಳು| 

ಬೆಂಗಳೂರು(ಸೆ.30): ಮಾದಕ ಜಗತ್ತಿನ ಕುರಿತ ಪ್ರಸಿದ್ಧ ವೆಬ್‌ ಸರಣಿ ಚಿತ್ರಗಳಿಂದ ಪ್ರಭಾವಿತರಾಗಿ ಡಾರ್ಕ್‌ನೆಟ್‌ ಮೂಲಕ ವಿದೇಶದಿಂದ ಡ್ರಗ್ಸ್‌ ತರಿಸಿಕೊಂಡು ರಾಜ್ಯದಲ್ಲಿ ಮಾರಾಟ ಮಾಡುವ ದಂಧೆ ಶುರು ಮಾಡಿದ್ದ ಪದವಿ ವಿದ್ಯಾರ್ಥಿ ಹಾಗೂ ಆತನ ಮೂವರು ಸ್ನೇಹಿತರು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳದ (ಎನ್‌ಸಿಬಿ) ಬೆಂಗಳೂರು ವಲಯ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕೇರಳ ಮೂಲದ ಫಾಹೀಂ (23), ಕಾರ್ತಿಕ್‌ ಪ್ರಮೋದ್‌(25), ಮಂಗಳೂರಿನ ಎ.ಹಶೀರ್‌ (22) ಮತ್ತು ಎಸ್‌.ಎಸ್‌.ಶೆಟ್ಟಿ(22) ಬಂಧಿತರಾಗಿದ್ದು, ಆರೋಪಿಗಳಿಂದ ಲಕ್ಷಾಂತರ ಮೌಲ್ಯದ 750 ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನೆದರ್‌ಲ್ಯಾಂಡ್‌ನಿಂದ ಅಂಚೆ ಮೂಲಕ ಡ್ರಗ್ಸ್‌ ಪೂರೈಕೆಯಾಗಿದೆ ಎಂಬ ಮಾಹಿತಿ ಸಿಕ್ಕಿತು. ಇದನ್ನು ಆಧರಿಸಿ ತನಿಖೆ ನಡೆಸಿದ ವಿದ್ಯಾರ್ಥಿ ಪೆಡ್ಲರ್‌ಗಳು ಸೆರೆಯಾದರು ಎಂದು ಎನ್‌ಸಿಬಿ ಬೆಂಗಳೂರು ವಲಯದ ನಿರ್ದೇಶಕ ಅಮಿತ್‌ ಘಾವಟೆ ಹೇಳಿದ್ದಾರೆ.

ಡ್ರಗ್ಸ್ ಮಾಫಿಯಾ: ಬಾಲಿವುಡ್ ಟಾಪ್ ಸ್ಟಾರ್‌ಗಳ ಬಂಧನಕ್ಕೆ ಎನ್‌ಸಿಬಿ ಸಿದ್ಧತೆ..!

ಡ್ರಗ್ಸ್‌ ದಂಧೆ ವೆಬ್‌ ಸರಣಿಯಿಂದ ಕಲಿತರು:

ಕೇರಳದ ಫಾಹೀಂ, ಉಡುಪಿಯ ಪ್ರತಿಷ್ಠಿತ ಖಾಸಗಿ ಕಾಲೇಜ್‌ವೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಇತ್ತೀಚೆಗೆ ಮಾದಕ ಲೋಕದ ಕುರಿತು ಆನ್‌ಲೈನ್‌ ವೆಬ್‌ ಸರಣಿ ಪ್ರಸಾರವಾಗಿತ್ತು. ಇದನ್ನು ವೀಕ್ಷಿಸಿದ ಆತ, ವೆಬ್‌ ಸರಣಿಯಿಂದ ಪ್ರೇರಿತರಾಗಿ ಡಾರ್ಕ್ನೆಟ್‌ ಮೂಲಕ ನೆದರ್‌ಲ್ಯಾಂಡ್‌ ಮಾದಕ ವಸ್ತು ಮಾರಾಟ ಜಾಲದ ವ್ಯಕ್ತಿಗಳಿಂದ ಡ್ರಗ್ಸ್‌ ಖರೀದಿರಿಸಿದ್ದ. ಈ ಡ್ರಗ್ಸ್‌ ಖರೀದಿಗೆ ಬಿಟ್‌ ಕಾಯಿನ್‌ (ಕ್ರಿಪ್ಟೋ ಕರೆನ್ಸಿ) ಬಳಕೆಯಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡ್ರಗ್ಸ್‌ ಖರೀದಿಸಿದ ನಂತರ ತನ್ನ ಸಹಪಾಠಿಗಳಿಗೆ ಆತ ಮಾರಾಟ ಮಾಡಿದ್ದ. ಇದಾದ ನಂತರ ಡ್ರಗ್ಸ್‌ ದಂಧೆಗೆ ತನ್ನ ಸ್ನೇಹಿತರನ್ನೇ ಸೇರಿಸಿಕೊಂಡು ಫಾಹೀಂ ತಂಡ ಕಟ್ಟಿದ್ದ. ಇದರಿಂದ ಸುಲಭವಾಗಿ ಹಣ ಸಂಪಾದನೆ ಹಾದಿ ಕಂಡ ಆರೋಪಿಗಳು, ಮಂಗಳೂರು ಸೇರಿದಂತೆ ಕರಾವಳಿ ಭಾಗದಿಂದ ಬೇರೆಡೆ ತಮ್ಮ ದಂಧೆ ವಿಸ್ತರಿಸಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಚೆನ್ನೈ, ದೆಹಲಿ ಹಾಗೂ ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳ ಪ್ರಸಿದ್ಧ ಕಾಲೇಜಿನ ವಿದ್ಯಾರ್ಥಿಗಳಿಗೆ ಡ್ರಗ್ಸ್‌ ಪೂರೈಸುತ್ತಿದ್ದರು ಎಂದು ಹೇಳಿದ್ದಾರೆ.

ಎರಡು ವರ್ಷಗಳಿಂದ ಡ್ರಗ್ಸ್‌ ದಂಧೆ ನಡೆಸುತ್ತಿದ್ದ ಫಾಹೀಂ, ಆರ್ಡರ್‌ ಮಾಡುತ್ತಿದ್ದ ಮಾದಕ ದ್ರವ್ಯವನ್ನು ಆತನ ಸಹಚರರು ಸ್ವೀಕರಿಸುತ್ತಿದ್ದರು. ಫೇಸ್‌ಬುಕ್‌ ಮೂಲಕ ವಿದ್ಯಾರ್ಥಿಗಳು, ಸಾಫ್ಟ್‌ವೇರ್‌ ಇಂಜಿನಿಯರ್‌ಗಳನ್ನು ಪರಿಚಯ ಮಾಡಿಕೊಂಡು ಡ್ರಗ್ಸ್‌ ಸರಬರಾಜು ಮಾಡುತ್ತಿದ್ದರು.

ವಿಳಾಸವಿಲ್ಲದ ಕೊರಿಯರ್‌ ನೀಡಿದ ಸುಳಿವು!

ಜು.30ರಂದು ನೆದರ್‌ಲ್ಯಾಂಡ್‌ನಿಂದ ಭಾರತದ ವಿದೇಶಿ ಅಂಚೆ ಕಚೇರಿಗೆ ಕೊರಿಯರ್‌ ಮೂಲಕ ಡ್ರಗ್ಸ್‌ ಬಂದಿದೆ ಎಂಬ ಮಾಹಿತಿ ಸಿಕ್ಕಿತು. ಆದರೆ ಆ ಪಾರ್ಸಲ್‌ ಸ್ವೀಕರಿಸಬೇಕಿದ್ದ ಸಂಸ್ಥೆ ಅಥವಾ ವ್ಯಕ್ತಿಯ ಹೆಸರು, ವಿಳಾಸ ನಮೂದಾಗಿರಲಿಲ್ಲ. ಕೊನೆಗೆ ಪಾರ್ಸಲ್‌ ಜಪ್ತಿ ಮಾಡಿ ತನಿಖೆ ನಡೆಸಲಾಯಿತು. ಮೊಬೈಲ್‌ ಕರೆಗಳು, ಇ-ಮೇಲ್‌ ಸೇರಿದಂತೆ ತಾಂತ್ರಿಕ ಮಾಹಿತಿಯನ್ನು ಪರಿಶೀಲಿಸಿದಾಗ ಪ್ರಮೋದ್‌ ಬಗ್ಗೆ ಸುಳಿವು ಸಿಕ್ಕಿತು. ಕೂಡಲೇ ಆತನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಮಾಸ್ಟರ್‌ಮೈಂಡ್‌ ಫಾಹೀಂ ಹೆಸರು ಬಹಿರಂಗಪಡಿಸಿದ. ಬಳಿಕ ಇನ್ನುಳಿದವರು ಬಂಧಿತರಾದರು ಎಂದು ಎನ್‌ಸಿಬಿ ಬೆಂಗಳೂರು ವಲಯ ನಿರ್ದೇಶಕ ಅಮಿತ್‌ ಘಾವಟೆ ತಿಳಿಸಿದ್ದಾರೆ.

ವೆಬ್‌ಸರಣಿ ನೋಡಿ ಡ್ರಗ್ಸ್‌ ಖರೀದಿ ಕಲಿತ ಬಗ್ಗೆ ವಿಚಾರಣೆ ವೇಳೆ ಫಾಹೀಂ ಹೇಳಿದ್ದಾನೆ. ಆರೋಪಿಗಳ ಮನೆಗಳ ಮೇಲೆ ದಾಳಿ ಸಹ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ಹಲವು ಸಂಗತಿಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ ಎಂದು ಎನ್‌ಸಿಬಿ ಬೆಂಗಳೂರು ವಲಯ ನಿರ್ದೇಶಕ ಅಮಿತ್‌ ಘಾವಟೆ ತಿಳಿಸಿದ್ದಾರೆ.
 

click me!