ಶಂಕಿತ ಉಗ್ರ ಮಾಜ್ ತಂದೆಗೆ ಹೈಕೋರ್ಟ್‌ನಿಂದ 10 ಸಾವಿರ ರೂ. ದಂಡ

By Kannadaprabha NewsFirst Published Sep 21, 2022, 1:34 PM IST
Highlights
  • ಶಂಕಿತ ಉಗ್ರ ಪುತ್ರನ ಬಂಧನ ಗೊತ್ತಿದ್ದರೂ ಹೇಬಿಯಸ್‌ ಹಾಕಿದ ತಂದೆಗೆ ದಂಡ
  • ಮಗನ ಬಂಧನದ ಬಗ್ಗೆ ಗೊತ್ತಿದ್ದರೂ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದ ವ್ಯಕ್ತಿ

ಬೆಂಗಳೂರು (ಸೆ.21) : ಭಯೋತ್ಪಾದನೆ ಕೃತ್ಯ ಆರೋಪ ಸಂಬಂಧ ವಿಚಾರಣೆಗಾಗಿ ತಮ್ಮ ಮಗನನ್ನು ಪೊಲೀಸರು ಕರೆದೊಯ್ದಿರುವ ವಿಚಾರ ತಿಳಿದಿದ್ದರೂ ಮಗನನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸರ್ಕಾರ ಮತ್ತು ಪೊಲೀಸರಿಗೆ ಆದೇಶಿಸುವಂತೆ ಕೋರಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಹೈಕೋರ್ಚ್‌ 10 ಸಾವಿರ ರು. ದಂಡ ವಿಧಿಸಿದೆ. ಮಂಗಳೂರಿನಲ್ಲಿ ನೆಲೆಸಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಮುನೀರ್‌ ಅಹ್ಮದ್‌ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಮಾಡಿದೆ. ಮಂಗಳೂರಿನ ಮನೆಯಲ್ಲಿದ್ದ ತಮ್ಮ ಪುತ್ರ ಮಾಝ್‌ಗೆ ಸೆ.14ರಂದು ಮಧ್ಯಾಹ್ನ 1.30ಕ್ಕೆ ಕರೆ ಮಾಡಿದ ಕೆಲ ಅಪರಿಚಿತರು ಮನೆ ಕೆಳಗೆ ಬಂದು ಪಾರ್ಸಲ್‌ ಪಡೆಯುವಂತೆ ತಿಳಿಸಿದ್ದರು. ಅದರಂತೆ ಪಾರ್ಸಲ್‌ ಪಡೆಯಲು ತೆರಳಿದ ಮಾಝ್‌ ಹಿಂದಿರುಗಿಲ್ಲ ಎಂದು ಮುನೀರ್‌ ಅಹ್ಮದ್‌ ಮಂಗಳೂರು ಪೂರ್ವ ಪೊಲೀಸ್‌ ಠಾಣೆಗೆ ಸೆ.17ರಂದು ಇ-ಮೇಲ್‌ ಮೂಲಕ ದೂರು ಸಲ್ಲಿಸಿದ್ದರು. ನಂತರ ಸೆ.19ರಂದು ಹೈಕೋರ್ಚ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ದಾಖಲಿಸಿದ್ದರು.

NewsHour ಶಿವಮೊಗ್ಗದಲ್ಲಿ ಐಸಿಸ್ ಶಂಕಿತ ಉಗ್ರರ ಬಂಧನ, ಬೆಚ್ಚಿ ಬೀಳಿಸುತ್ತಿದೆ ಭಯೋತ್ಪಾದಕರ ಹಿನ್ನಲೆ!

ಸರ್ಕಾರಿ ವಕೀಲರಿಂದ ಮೆಮೊ:

ಅರ್ಜಿ ಮಂಗಳವಾರ ವಿಚಾರಣೆಗೆ ಬಂದಾಗ ಸರ್ಕಾರಿ ವಕೀಲ ಪಿ.ತೇಜೇಶ್‌ ಮೆಮೊ ಸಲ್ಲಿಸಿ, ಅರ್ಜಿದಾರ ತನ್ನ ಪುತ್ರನ ಕಾಣೆ ಸಂಬಂಧ ಮಂಗಳೂರು ಪೂರ್ವ ಠಾಣೆ ಪೊಲೀಸರು 2022ರ ಸೆ.19ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ತೀರ್ಥಹಳ್ಳಿ ಠಾಣಾ ಪೊಲೀಸರು ಅರ್ಜಿದಾರನ ಪುತ್ರನನ್ನು ಕರೆದೊಯ್ದು ವಿಚಾರಣೆ ನಡೆಸಿದ್ದರು. ಬಳಿಕ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೆ.20ರ ಮಧ್ಯರಾತ್ರಿ 12.30ಕ್ಕೆ ಬಂಧಿಸಿದ್ದರು. ಬೆಳಗ್ಗೆ ಸಂಬಂಧಪಟ್ಟಮ್ಯಾಜಿಸ್ಪ್ರೇಟ್‌ ಕೋರ್ಚ್‌ಗೆ ಹಾಜರುಪಡಿಸಿದ್ದಾರೆ ಎಂದು ತಿಳಿಸಿ ಎಫ್‌ಐಆರ್‌ ಅನ್ನು ಕೋರ್ಚ್‌ಗೆ ಸಲ್ಲಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ತೀರ್ಥಹಳ್ಳಿ ಠಾಣಾ ಪೊಲೀಸರು ವಿಚಾರಣೆಗಾಗಿ ತಮ್ಮ ಪುತ್ರನ್ನು ಕರೆದೊಯ್ದಿರುವ ವಿಚಾರ ಅರ್ಜಿದಾರರಿಗೆ ತಿಳಿದಿದ್ದರೂ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ. ಸೆ.20ರಂದು ಮಧ್ಯರಾತ್ರಿಯೇ ಮಾಜ್‌ನನ್ನು ಬಂಧಿಸಿರುವ ವಿಚಾರವನ್ನು ಪೊಲೀಸರು ಅರ್ಜಿದಾರರಿಗೆ ತಿಳಿಸಿದ್ದಾರೆ. ಅರ್ಜಿ ವಿಚಾರಣೆಗೆ ಬಂದಾಗ ಆ ಮಾಹಿತಿಯನ್ನು ಅರ್ಜಿದಾರರು ಕೋರ್ಚ್‌ ಗಮನಕ್ಕೆ ತಂದಿಲ್ಲ. ಸತ್ಯಾಂಶ ತಿಳಿದರೂ ಅರ್ಜಿ ಹಿಂಪಡೆಯುವುದಕ್ಕೆ ಮುಂದಾಗಲಿಲ್ಲ. ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆ ಪ್ರಯತ್ನ ಇದಾಗಿದ್ದು, ದಂಡ ವಿಧಿಸಲು ಅರ್ಹ ಪ್ರಕರಣ ಎಂದು ಈ ಆದೇಶ ಮಾಡಿದೆ.

ಭಯೋತ್ಪಾದಕನ ಶವವನ್ನು ಹೊರತೆಗೆಯುವ ಮನವಿ ವಜಾ ಮಾಡಿದ ಸುಪ್ರೀಂ ಕೋರ್ಟ್‌!

ಎಫ್‌ಐಆರ್‌ನಲ್ಲಿ ಏನಿದೆ:

ನಿಷೇಧಿತ ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌ಐಎಸ್‌) ಭಯೋತ್ಪಾದಕ ಕೃತ್ಯ ಮುಂದುವರಿಸಲು ಒಳಸಂಚು ಮಾಡಿ ದೇಶದ ಐಕ್ಯತೆ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಲು ಉದ್ದೇಶಿಸಿದ ಹಾಗೂ ಸಾರ್ವಜನಿಕ ಆಸ್ತಿ ಮತ್ತು ಪ್ರಾಣಕ್ಕೆ ಅಪಾಯವಾಗುವ ಸ್ಫೋಟಕಗಳನ್ನು ಕಾನೂನುಬಾಹಿರವಾಗಿ ಇಟ್ಟುಕೊಂಡ ಮತ್ತು ಭಾರತದ ರಾಷ್ಟ್ರಧ್ವಜವನ್ನು ಸುಟ್ಟಿದ ಆರೋಪ ಸಂಬಂಧ ಭದ್ರಾವತಿ ಉಪ ವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷಕ ಜಿತೇಂದ್ರ ಕುಮಾರ್‌ ದಯಾಮಾ ದಾಖಲಿಸಿದ ದೂರು ಆಧರಿಸಿ ಮಾಝ್‌ನನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಆತ ಎರಡನೇ ಆರೋಪಿಯಾಗಿದ್ದಾನೆ.

click me!