ನ.19ರಂದು ಮಂಗಳೂರಿಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಂದೇ ಸಂಜೆ ಸ್ಫೋಟ
ಮಂಗಳೂರು(ನ.23): ಸಿಎಂ ಮಂಗಳೂರು ಭೇಟಿಯ ದಿನವೇ ಶಾರೀಕ್, ಬಾಂಬ್ ಸ್ಫೋಟ ನಡೆಸಿದ್ದೇಕೆ ಎಂಬ ಬಗ್ಗೆ ಪೊಲೀಸರಲ್ಲಿ ಜಿಜ್ಞಾಸೆ ಮೂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳೂರಿಗೆ ಭೇಟಿ ನೀಡುವ ದಿನವೇ ನಗರದಲ್ಲಿ ದೊಡ್ಡಮಟ್ಟದ ಸ್ಫೋಟ ನಡೆಸಿ, ಸರ್ಕಾರದ ಗಮನ ಸೆಳೆಯುವ ಗುರಿಯನ್ನು ಶಂಕಿತ ಉಗ್ರ ಶಾರೀಕ್ ಹೊಂದಿದ್ದಿರಬಹುದು ಎನ್ನುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ನ.19ರಂದು ಮುಖ್ಯಮಂತ್ರಿಯವರು ಮಂಗಳೂರಿಗೆ ಭೇಟಿ ನೀಡಿದ್ದರು. ಅವರ ಕಾರ್ಯಕ್ರಮದ ಅವಧಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಇತ್ತು. ಆದರೆ, ಶಾರೀಕ್ ಮಂಗಳೂರಿಗೆ ಬಂದಿಳಿದಿದ್ದು ಸಂಜೆ ವೇಳೆಗೆ. ಹಾಗಾಗಿ, ಈತನಿಗೆ ಸಿಎಂ ಅವರಿಗೆ ಪ್ರಾಣಾಪಾಯ ಒಡ್ಡುವ ಉದ್ದೇಶ ಇರಲಿಲ್ಲ ಎನ್ನಲಾಗಿದೆ. ಆದರೆ, ಸಿಎಂ ಭೇಟಿ ದಿನವೇ ದೊಡ್ಡಮಟ್ಟದ ಸ್ಫೋಟ ನಡೆಸಿ, ಸರ್ಕಾರದ ಗಮನ ಸೆಳೆಯಲು ಯತ್ನಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
MANGALURU BLAST CASE: ಹಿಂದೂ ಸೋಗಿನಲ್ಲಿದ್ದ ಮಂಗಳೂರು ಬಾಂಬರ್!
ಶಾರೀಕ್, 2020ರಲ್ಲಿ ಮಂಗಳೂರಿನ ಬಟ್ಟಗುಡ್ಡೆಯ ಅಪಾರ್ಚ್‌ಮೆಂಟ್ ಗೋಡೆ ಮೇಲೆ ಬರೆದ ಬರಹದಲ್ಲಿ ‘ಸಂಘಿ’ಗಳು ಮತ್ತು ‘ಮನುವಾದಿ’ಗಳನ್ನು ಟಾರ್ಗೆಟ್ ಮಾಡಿದ್ದ. ‘ಡು ನಾಟ್ ಫೋರ್ಸ್ ಅಸ್ ಟು ಇನ್ವೈಟ್ ಲಷ್ಕರೆ ತೊಯ್ಬಾ ಆ್ಯಂಡ್ ತಾಲಿಬಾನ್ ಟು ಡೀಲ್ ವಿದ್ ಸಂಘೀಸ್ ಆಂಡ್ ಮನುವಾದೀಸ್’ ಎಂದು ಬರೆದಿದ್ದ. ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧದ ಮನಸ್ಥಿತಿಯನ್ನು ಅಂದೇ ಪ್ರದರ್ಶಿಸಿದ್ದ.
ಕುಕ್ಕರ್ ಬಾಂಬ್‌ಗಿತ್ತು ಭಾರೀ ಸ್ಫೋಟದ ಸಾಮರ್ಥ್ಯ
ನಗರದ ನಾಗುರಿಯಲ್ಲಿ ನ. 19ರಂದು ಸ್ಫೋಟಗೊಂಡ ಕುಕ್ಕರ್ ಬಾಂಬ್‌ಗೆ ಭಾರೀ ಸ್ಫೋಟ ಉಂಟು ಮಾಡುವ ಶಕ್ತಿಯಿತ್ತು. ಒಂದು ವೇಳೆ, ಭಾರೀ ಜನಸಂದಣಿ ಇರುವ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸಿದ್ದರೆ ಅಪಾರ ಪ್ರಮಾಣದಲ್ಲಿ ಪ್ರಾಣಹಾನಿ ಉಂಟಾಗುವ ಸಾಧ್ಯತೆಯಿತ್ತು ಎನ್ನುವ ಸಂಗತಿ ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗಗೊಂಡಿದೆ.
Mangaluru blast case: ಅಪ್ಪ ದೇಶ ಕಾಯೋ ಸೈನಿಕ, ಮಗ ಉಗ್ರ! ಅಬ್ದುಲ್ ಮತೀನ್‌ಗೆ ಟೆರರ್ ನಂಟು ಬೆಳೆದಿದ್ದೆಲ್ಲಿ?
ಅಂದು ಬೆಳಗ್ಗೆ ಮೈಸೂರಿನಿಂದ ಬಸ್‌ನಲ್ಲಿ ಬಂದಿದ್ದ ಶಾರೀಕ್, ಪಡೀಲ್‌ನಲ್ಲಿ ಇಳಿದು, ಆಟೋ ಹತ್ತಿ, ಪಂಪ್‌ವೆಲ್‌ಗೆ ತೆರಳುತ್ತಿದ್ದ. ಆತನ ಬಳಿ ಇದ್ದ ಕುಕ್ಕರ್ ಮೂರು ಲೀಟರ್ ಸಾಮರ್ಥ್ಯದ್ದಾಗಿತ್ತು. ಅದರೊಳಗೆ ಸ್ಫೋಟಕದ ರಾಸಾಯನಿಕಗಳು, ಡಿಟೊನೇಟರ್, ಸಕ್ರ್ಯೂಟ್ ಎಲ್ಲವೂ ಇತ್ತು. ಆದರೆ, ಡಿಟೋನೇಟರ್‌ನ ಪ್ಲಸ್ ಮತ್ತು ಮೈನಸ್ ಸಂಪರ್ಕವನ್ನು ಸರಿಯಾಗಿ ಕೊಟ್ಟಿರಲಿಲ್ಲ. ಹೀಗಾಗಿ, ಶಾರ್ಚ್ ಸಕ್ರ್ಯೂಟ್ ಉಂಟಾಗಿ, ಮೊದಲೇ ಸ್ಫೋಟ ಸಂಭವಿಸಿತು. ಅಲ್ಲದೆ, ನಿಗದಿತ ರೀತಿಯಲ್ಲಿ ಸ್ಫೋಟ ಸಂಭವಿಸಲಿಲ್ಲ. ಹೀಗಾಗಿ, ಸ್ಫೋಟದ ತೀವ್ರತೆ ಕಡಿಮೆಯಾಗಿತ್ತು ಎನ್ನುವ ಅಂಶ ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗಗೊಂಡಿದೆ.
ಶಾರೀಕ್ ಜೊತೆಗಿದ್ದ ಇನ್ನೊಬ್ಬ ಯುವಕ?
ಸ್ಫೋಟದ ದಿನ ಶಾರೀಕ್ ಜತೆ ಇನ್ನೊಬ್ಬ ಯುವಕ ಇದ್ದ ಎನ್ನುವುದನ್ನು ಸ್ಥಳೀಯರು ಗುರುತಿಸಿದ್ದಾರೆ. ಶಾರೀಕ್ ರಿಕ್ಷಾ ಹತ್ತಿ ಪಂಪ್‌ವೆಲ್ ಕಡೆ ಬಂದರೆ, ಇನ್ನೊಬ್ಬ ಯುವಕ ಎಲ್ಲಿಗೆ ಹೋದ ಎನ್ನುವುದು ನಿಗೂಢವಾಗಿ ಉಳಿದಿದೆ. ಅಂದು ಬೆಳಗ್ಗೆ ಮೈಸೂರಿನಿಂದ ಹೊರಟಿದ್ದ ಶಾರೀಕ್ ಪಡೀಲ್‌ನಲ್ಲಿ ಬಸ್ಸಿನಿಂದ ಇಳಿದಿದ್ದ. ಬಸ್‌ನಲ್ಲಿ ಆತನ ಜೊತೆಗೆ ಆ ಯುವಕ ಬಂದನೇ?, ಅಥವಾ ಶಾರೀಕ್ ಬಸ್ಸಿಳಿದ ಬಳಿಕ ಬಂದು ಆತನೊಂದಿಗೆ ಸೇರಿಕೊಂಡನೇ ಎನ್ನುವುದು ದೃಢಪಟ್ಟಿಲ್ಲ. ಆದರೆ, ಶಾರೀಕ್‌ನ ಫೋಟೊ ಬಹಿರಂಗವಾಗುತ್ತಿದ್ದಂತೆ ಸ್ಥಳೀಯರು ಆತನನ್ನು ಗುರುತಿಸಿದ್ದಾರೆ. ಆತನ ಜತೆ ಇನ್ನೊಬ್ಬ ಇದ್ದ ಎಂಬುದನ್ನು ಹೇಳಿದ್ದಾರೆ.