ತಾನು ಸಚಿವರ ಆಪ್ತ ಎಂದು ನಂಬಿಸಿ ಪಶು ಇಲಾಖೆಯಲ್ಲಿ ಕೆಲಸದ ಆಮಿಷ ಒಡ್ಡಿ 63ಕ್ಕೂ ಹೆಚ್ಚು ಜನರಿಗೆ ವಂಚಿಸಿ 25 ಲಕ್ಷ ಸುಲಿಗೆಗೈದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಪಶುಸಂಗೋಪನೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಸುಮಾರು 63 ಮಂದಿ ಉದ್ಯೋಗಾಂಕ್ಷಿಗಳಿಂದ 25 ಲಕ್ಷ ವಸೂಲಿ ಮಾಡಿ ವಂಚಿಸಿದ್ದ ಅನುದಾನಿತ ಖಾಸಗಿ ಶಾಲೆಯ ಚಾಲಾಕಿ ಶಿಕ್ಷಕನೊಬ್ಬನನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆಯ ಜ್ಞಾನದೇವ್ ಜಾಧವ್ ಬಂಧಿತನಾಗಿದ್ದು, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಹೆಸರಿನಲ್ಲಿ ನೇಮಕಾತಿ ಆದೇಶವನ್ನು ಸಹ ಹಣ ಕೊಟ್ಟಅಭ್ಯರ್ಥಿಗಳಿಗೆ ಆತ ನೀಡಿದ್ದ. ಅಂತೆಯೇ ಇಲಾಖೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅಭ್ಯರ್ಥಿಗಳಿಗೆ ಈತನವಂಚನೆ ಬಗ್ಗೆ ಗೊತ್ತಾಗಿದೆ. ಈ ಸಂಬಂಧ ರಾಜ್ಯ ಪಶು ಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ (ಆಡಳಿತ) ಎನ್.ರಮೇಶ್ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತನಗೆ ಪಶುಸಂಗೋಪನೆ ಇಲಾಖೆ ಮಂತ್ರಿ ಪ್ರಭು ಚವ್ಹಾಣ್ ಆಪ್ತರು. ನಾನು ಅವರ ಬಳಿ ಕೆಲಸ ಮಾಡಿದ್ದೇನೆ. ಸಚಿವರಿಗೆ ನಾನು ಕನ್ನಡ ಶಿಕ್ಷಕನಾಗಿದ್ದೆ ಎಂದು ಹೇಳಿ ಉದ್ಯೋಗಾಂಕ್ಷಿ ಯುವಕರಿಗೆ ಗಾಳ ಹಾಕಿದ್ದ ಜಾಧವ್, ನಿಮಗೆ ಪಶುಸಂಗೋಪನೆ ಇಲಾಖೆಯಲ್ಲಿ ನೌಕರಿ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಅಲ್ಲದೆ ಪಶು ಸಂಗೋಪನೆ ಇಲಾಖೆಯು ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ), ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹಾಗೂ ಡಿ ದರ್ಜೆ ಸೇರಿದಂತೆ 93 ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ ಎಂದು ಹೇಳಿದ್ದ ಆರೋಪಿ, ಇಲಾಖೆಯೇ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ ಎನ್ನುವಂತೆ ನಕಲಿ ದಾಖಲೆ ಸೃಷ್ಟಿಸಿ ಅರ್ಜಿಗಳನ್ನು ವಿತರಿಸಿದ್ದ.
DHFL Scam; ದೇಶದ ಅತಿದೊಡ್ಡ ಬ್ಯಾಂಕ್ ವಂಚನೆ ಆರೋಪಿ ಮನೆಯಲ್ಲಿ ಅಗಸ್ಟಾಹೆಲಿಕಾಪ್ಟರ್ ಸಿಬಿಐ ವಶಕ್ಕೆ!
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ 63 ಮಂದಿಯನ್ನು ಆಯ್ಕೆ ಮಾಡಿದ ಆರೋಪಿ, ತಲಾ 2 ರಿಂದ 4 ಲಕ್ಷ ರೂ.ನಂತೆ ಸುಮಾರು 25 ಲಕ್ಷ ವಸೂಲಿ ಮಾಡಿ ನೇಮಕಾತಿ ಆದೇಶ ಸಹ ಕೊಟ್ಟಿದ್ದ. ಇದಕ್ಕಾಗಿ ಪಶುಸಂಗೋಪನೆ ಇಲಾಖೆ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ಮೊಹರು ಹಾಗೂ ಸಹಿಯನ್ನು ಸಹ ನಕಲು ಮಾಡಿ ದಾಖಲೆಗಳನ್ನು ಆತ ಸೃಷ್ಟಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪ್ರತಿ ಹಂತದಲ್ಲೂ ಅಭ್ಯರ್ಥಿಗಳಿಗೆ ವಂಚನೆ ಗೊತ್ತಾಗದಂತೆ ಜಾಗರೂಕತೆ ವಹಿಸಿದ್ದ ಆರೋಪಿ, ಇಡೀ ನೇಮಕಾತಿ ಪ್ರಕ್ರಿಯೆಯೂ ಥೇಟ್ ಸರ್ಕಾರಿ ನೇಮಕಾತಿಯಂತೆ ನಾಜೂಕಾಗಿ ನಡೆಸಿದ್ದ. ನೇಮಕಾತಿ ಆಯ್ಕೆ ಪಟ್ಟಿ ಪ್ರಕಟಗೊಂಡ ಬಳಿಕ ಆಕ್ಷೇಪಗಳಿದ್ದರೆ ಜುಲೈ 30 ರವರೆಗೆ ಅರ್ಜಿ ಸಲ್ಲಿಸುವಂತೆ ಸಹ ಪಶು ಸಂಗೋಪನೆ ಇಲಾಖೆಯ ಹೆಸರಿನಲ್ಲಿ ಆತ ಪ್ರಕಟಿಸಿದ್ದ. ಹೀಗೆ ಆಯ್ಕೆಗೊಂಡ ಕೆಲವರು ಇಲಾಖೆಯನ್ನು ಸಂಪರ್ಕಿಸಿದಾಗ ವಂಚನೆ ಜಾಲ ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಜಂಟಿ ನಿರ್ದೇಶಕರು, ಸಂಜಯನಗರ ಠಾಣೆಗೆ ದೂರು ದಾಖಲಿಸಿದರು. ಅಂತೆಯೇ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್ ಕರೆಗಳ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಾಹನ ಸಾಗಿಸುವುದಾಗಿ ಹಣ ಪಡೆದು ವಂಚನೆ: ಖತರ್ನಾಕ್ ಖದೀಮರ ಸೆರೆ
ಮನೆ ಕಟ್ಟಲು ವಂಚನೆ
ಬಾಗಲಕೋಟೆಯಲ್ಲಿ ಹೊಸ ಮನೆ ಕಟ್ಟುತ್ತಿದ್ದೆ. ಇದಕ್ಕೆ ನಾನು ಉಳಿಸಿದ್ದ ಹಣವೆಲ್ಲಾ ಖರ್ಚು ಆಯಿತು. ಇನ್ನು ಹಣದ ಅಗತ್ಯವಿದ್ದ ಕಾರಣ ಸರ್ಕಾರಿ ನೌಕರಿ ಹೆಸರಿನಲ್ಲಿ ಜನರಿಗೆ ವಂಚಿಸಲು ಸಂಚು ರೂಪಿಸಿದೆ ಎಂದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಸಚಿವರ ಬಳಿ ದಾಖಲೆ ಕಳವು
2019ರಲ್ಲಿ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಸಚಿವರಾದ ಬಳಿಕ ಅವರ ಪರಿಚಿತರ ಮೂಲಕ ಸಚಿವರಿಗೆ ಜಾಧವ್ ಸಂಪರ್ಕಕ್ಕೆ ಬಂದಿದ್ದ. ಆಗ ವಿಶೇಷ ಕರ್ತವ್ಯದ ಮೇರೆಗೆ ಸಚಿವರ ಆಪ್ತ ಶಾಖೆಗೆ ಜಾಧವ್ ವರ್ಗಾವಣೆಯಾಗಿತ್ತು. ಆ ವೇಳೆ ಸಚಿವರಿಗೆ ಜಾಧವ್ ಕನ್ನಡ ಕಲಿಸುತ್ತಿದ್ದ ಎನ್ನಲಾಗಿದೆ. ಆ ಸಂದರ್ಭದಲ್ಲಿ ಪಶು ಸಂಗೋಪನೆ ಇಲಾಖೆಯ ನೇಮಕಾತಿ ಪ್ರಕ್ರಿಯೆ ತಿಳಿದುಕೊಂಡಿದ್ದು ಮಾತ್ರವಲ್ಲದೆ ಕೆಲ ದಾಖಲೆಗಳನ್ನು ಕದ್ದು ನಕಲು ಮಾಡಿಕೊಂಡಿದ್ದ. 2020ರಲ್ಲಿ ಆತನನ್ನು ಸಚಿವರ ಆಪ್ತ ಶಾಖೆಯಿಂದ ಮಾತೃ ಇಲಾಖೆಗೆ ಕಳುಹಿಸಲಾಗಿತ್ತು ಎಂದು ಮೂಲಗಳು ಹೇಳಿವೆ.