ಬೆಂಗಳೂರು: 1800 ವಿದ್ಯಾರ್ಥಿಗಳ ದಾಖಲೆ ಬಳಸಿ 19 ಕೋಟಿ ಸಾಲ ಪಡೆದು ಟೋಪಿ!

By Kannadaprabha NewsFirst Published Jun 2, 2023, 6:14 AM IST
Highlights

ಜಾಹೀರಾತು ನಂಬಿ ಕೋರ್ಸಿಗೆ ಸೇರ್ಪಡೆಯಾದ ಸುಮಾರು 1,800ಕ್ಕೂ ಅಧಿಕ ವಿದ್ಯಾರ್ಥಿಗಳ ಹೆಸರಿನಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗಳಿಂದ ಕೋಟ್ಯಂತರ ರು. ಶೈಕ್ಷಣಿಕ ಸಾಲ ಪಡೆದು ಇತ್ತೀಚೆಗೆ ಕಂಪನಿಯನ್ನೇ ಮುಚ್ಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. 

ಬೆಂಗಳೂರು(ಜೂ.02):  ಡಾಟಾ ಸೈನ್ಸ್‌ ಆಕ್ಟಿಟೆಕ್ಟ್ ಪ್ರೋಗ್ರಾಂ’ ಕೋರ್ಸಿಗೆ ಉಚಿತ ಆನ್‌ಲೈನ್‌ ತರಬೇತಿ ನೀಡುವುದರ ಜತೆಗೆ ಕೆಲಸವನ್ನೂ ಕೊಡಿಸುವುದಾಗಿ ನಂಬಿಸಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಹೆಸರಿನಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗಳಲ್ಲಿ ಕೋಟ್ಯಂತರ ರು. ಸಾಲ ಪಡೆದು ವಂಚಿಸಿದ ಆರೋಪದಡಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಲಘಟ್ಟಪುರ ನಿವಾಸಿ ಕಮಲಾಪುರಂ ಶ್ರೀನಿವಾಸ್‌ ಕಲ್ಯಾಣ್‌ (40) ಬಂಧಿತ. ಆಂಧ್ರಪ್ರದೇಶ ಮೂಲದ ಆರೋಪಿ ಜಯನಗರದ ವಿಜಯರಂಗಂ ಲೇಔಟ್‌ನಲ್ಲಿ ಇಂಡಿಕ್ಯೂಬ್‌ ಸೌತ್‌ ಸಮಿತ್‌ ಕಟ್ಟಡದಲ್ಲಿ ‘ಗೀಕ್‌ಲರ್ನ್‌ ಎಜುಟೆಕ್‌ ಸವೀರ್‍ಸಸ್‌ ಪ್ರೈವೇಟ್‌ ಲಿಮಿಟೆಡ್‌’ ಎಂಬ ಕಂಪನಿ ತೆರೆದಿದ್ದ. ಕಂಪನಿಗೆ ಈತನೇ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿದ್ದ. ಈ ಕಂಪನಿಯ ಅಡಿಯಲ್ಲಿ ಉಚಿತವಾಗಿ ಡೇಟಾ ಸೈನ್ಸ್‌ ಆರ್ಕಿಟೆಕ್ಟ್ ಪ್ರೋಗ್ರಾಂ ಎಂಬ ಹೆಸರಿನಲ್ಲಿ ಕೋರ್ಸಿಗೆ ಆನ್‌ಲೈನ್‌ ತರಬೇತಿ ನೀಡಿ, ಖಾಸಗಿ ಕಂಪನಿಗಳಲ್ಲಿ ಕೆಲಸವನ್ನೂ ತಾವೇ ಕೊಡಿಸುವುದಾಗಿ ಜಾಹೀರಾತು ನೀಡಿದ್ದ.

ಸಿಎಂ ಕಚೇರಿ ಹೆಸರಿನಲ್ಲಿ ವಂಚನೆ ಪ್ರಕರಣ: ವ್ಯಕ್ತಿಗೆ ಜಾಮೀನು

ಈತನ ಜಾಹೀರಾತು ನಂಬಿ ಕೋರ್ಸಿಗೆ ಸೇರ್ಪಡೆಯಾದ ಸುಮಾರು 1,800ಕ್ಕೂ ಅಧಿಕ ವಿದ್ಯಾರ್ಥಿಗಳ ಹೆಸರಿನಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗಳಿಂದ ಕೋಟ್ಯಂತರ ರು. ಶೈಕ್ಷಣಿಕ ಸಾಲ ಪಡೆದು ಇತ್ತೀಚೆಗೆ ಕಂಪನಿಯನ್ನೇ ಮುಚ್ಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಚಿತ ಕೋರ್ಸ್‌, ಉದ್ಯೋಗದ ಆಮಿಷ:

ಕೋರ್ಸ್‌ಗೆ ದಾಖಲಾತಿ ವೇಳೆ ವಿದ್ಯಾರ್ಥಿಗಳ ಹೆಸರಿನಲ್ಲಿ ಖಾಸಗಿ ಫೈನಾನ್ಸ್‌ಗಳಲ್ಲಿ ಸಾಲ ಪಡೆದು, ಕೋರ್ಸ್‌ ಮುಗಿಯುವುದರೊಳಗೆ ಕಂಪನಿಯೇ ಪ್ರತಿ ತಿಂಗಳು ಇಎಂಐ ಪಾವತಿಸಿ ಸಾಲ ತೀರಿಸಲಿದೆ ಎಂದು ನಂಬಿಸಿದ್ದಾನೆ. ಉಚಿತ ಕೋರ್ಸ್‌ ಹಾಗೂ ಉದ್ಯೋಗದ ಆಮೀಷಕ್ಕೆ ಒಳಗಾದ ವಿದ್ಯಾರ್ಥಿಗಳು ಈತನ ಮಾತನ್ನು ನಂಬಿ ತಮ್ಮ ಹೆಸರಿನಲ್ಲಿ ಸಾಲ ಪಡೆದುಕೊಳ್ಳಲು ಸಮ್ಮತಿಸಿದ್ದಾರೆ. ಅದರಂತೆ ಆರೋಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ದಾಖಲೆಗಳನ್ನು ಬಳಸಿಕೊಂಡು ವಿವಿಧ ಖಾಸಗಿ ಫೈನಾನ್ಸ್‌ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಸಾಲ ಪಡೆದಿದ್ದಾನೆ.

ಸ್ಕಾಲರ್‌ಶಿಪ್‌ ಕೊಡುವುದಾಗಿ ನಂಬಿಸಿದ್ದ!

ಆರೋಪಿ ಶ್ರೀನಿವಾಸ್‌ ಕಲ್ಯಾಣ್‌ ಸುಮಾರು 1800ಕ್ಕೂ ಅಧಿಕ ವಿದ್ಯಾರ್ಥಿಗಳ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಖಾಸಗಿ ಫೈನಾನ್ಸ್‌ಗಳಲ್ಲಿ ಅಡಮಾನವಿರಿಸಿ ಸುಮಾರು .19 ಕೋಟಿ ಸಾಲ ಪಡೆದಿದ್ದಾನೆ ಎನ್ನಲಾಗಿದೆ. ಆರೋಪಿಯು ವಿದ್ಯಾರ್ಥಿಗಳ ದಾಖಲಾತಿ ವೇಳೆ ಪ್ರತಿ ತಿಂಗಳು ಕಂಪನಿ ಕಡೆಯಿಂದಲೇ ಸ್ಕಾಲರ್‌ಶಿಪ್‌ ಕೊಡುವುದಾಗಿಯೂ ನಂಬಿಸಿದ್ದಾನೆ. ಬಳಿಕ ಏಕಾಏಕಿ ಕಂಪನಿಯ ಕಚೇರಿ ಮುಚ್ಚಿಕೊಂಡು ಪರಾರಿಯಾಗಿದ್ದ. ಇತ್ತ ಕೋರ್ಸ್‌ ಮುಗಿಯದೇ ಮತ್ತೊಂದೆಡೆ ಸಾಲದ ಇಎಂಐ ಪಾವತಿಸಲಾಗದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ತಲುಪಿಸಿದ್ದಾರೆ. ಆನ್‌ಲೈನ್‌ ಕೋರ್ಸ್‌ಗೆ ಸೇರ್ಪಡೆಯಾಗಿ ವಂಚನೆಗೆ ಒಳಗಾಗಿರುವ ಬೇರೆ ವಿದ್ಯಾರ್ಥಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ದೂರು ಸ್ವೀಕರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!