ಭದ್ರಾವತಿಯಲ್ಲಿ ದಂಪತಿಗಳ ಅನುಮಾನಾಸ್ಪದ ಸಾವು: ವೈದ್ಯರು ನೀಡಿದ ಇಂಜೆಕ್ಷನ್ ಪ್ರಾಣಕ್ಕೆ ಕುತ್ತು ತಂದಿತೇ?

Published : Jan 20, 2026, 08:01 PM IST
Suspicious Death in Bhadravathi Couple Dies After Injection Doctor Under Probe

ಸಾರಾಂಶ

ಭದ್ರಾವತಿಯ ಭೂತನಗುಡಿ ಬಡಾವಣೆಯಲ್ಲಿ ವಯೋವೃದ್ಧ ದಂಪತಿಗಳಾದ ಚಂದ್ರಪ್ಪ ಮತ್ತು ಜಯಮ್ಮ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ರಾತ್ರಿ ಮಲಗಿದ್ದವರು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದು, ವೈದ್ಯರು ನೀಡಿದರೆನ್ನಲಾದ ಇಂಜೆಕ್ಷನ್ ಸಾವಿಗೆ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. 

ಭದ್ರಾವತಿ (ಜ.20): ನಗರದ ಭೂತನಗುಡಿ ಬಡಾವಣೆಯಲ್ಲಿ ವಯೋವೃದ್ಧ ದಂಪತಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ರಾತ್ರಿ ಮಲಗಿದ್ದವರು ಬೆಳಿಗ್ಗೆ ಹೆಣವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ರಾತ್ರಿ ಮಲಗಿದವರು ಬೆಳಗ್ಗೆ ಏಳಲೇ ಇಲ್ಲ:

ಭೂತನಗುಡಿಯ ನಿವಾಸಿಗಳಾದ ಚಂದ್ರಪ್ಪ (68) ಮತ್ತು ಜಯಮ್ಮ (65) ಸಾವನ್ನಪ್ಪಿದ ದಂಪತಿಗಳು. ಈ ದಂಪತಿಗೆ ಮೂವರು ಗಂಡು ಮಕ್ಕಳಿದ್ದು, ಎಲ್ಲರೂ ಮದುವೆಯಾಗಿ ಬೇರೆ ವಾಸವಾಗಿದ್ದಾರೆ. ಅತ್ಯಂತ ಅನೂನ್ಯವಾಗಿದ್ದ ಈ ದಂಪತಿಗಳು ತಮ್ಮ ಮನೆಯಲ್ಲಿ ವಾಸವಿದ್ದರು. ಪ್ರತಿದಿನದಂತೆ ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಕರೆ ಸ್ವೀಕರಿಸದಿದ್ದಾಗ ಬಯಲಾದ ಸಾವು

ಇಂದು ಬೆಳಿಗ್ಗೆ ಮಕ್ಕಳು ತಮ್ಮ ಪೋಷಕರಿಗೆ ಫೋನ್ ಮಾಡಿದಾಗ ದಂಪತಿಗಳು ಕರೆ ಸ್ವೀಕರಿಸಿಲ್ಲ. ಇದರಿಂದ ಆತಂಕಗೊಂಡ ಮಕ್ಕಳು ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರು ಮನೆಗೆ ಹೋಗಿ ಪರಿಶೀಲಿಸಿದಾಗ ದಂಪತಿಗಳಿಬ್ಬರೂ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮನೆಯ ಬೆಡ್‌ರೂಮ್‌ನಲ್ಲಿ ಚಂದ್ರಪ್ಪ ಅವರ ಶವ ಪತ್ತೆಯಾದರೆ, ಹಾಲ್‌ನಲ್ಲಿ ಪತ್ನಿ ಜಯಮ್ಮ ಅವರ ಶವ ಬಿದ್ದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವೈದ್ಯರು ನೀಡಿದ ಇಂಜೆಕ್ಷನ್ ದಂಪತಿಗಳ ಪ್ರಾಣಕ್ಕೆ ಕುತ್ತು ತಂದಿತೇ?

ಮೃತ ದಂಪತಿಗಳು ಬಿಪಿ ಮತ್ತು ಶುಗರ್ ಕಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ ಚಿಕಿತ್ಸೆ ನೀಡಲು ಪ್ರತಿದಿನ ವೈದ್ಯರೊಬ್ಬರು ಮನೆಗೆ ಬರುತ್ತಿದ್ದರು. ಅದರಂತೆ ನಿನ್ನೆ ಮಧ್ಯಾಹ್ನ ವೈದ್ಯರು ಬಂದು ದಂಪತಿಗಳಿಗೆ ಇಂಜೆಕ್ಷನ್ ನೀಡಿ ಹೋಗಿದ್ದರು ಎನ್ನಲಾಗಿದೆ. ಇಂಜೆಕ್ಷನ್ ನೀಡಿದ ನಂತರ ದಂಪತಿಗಳು ಎದ್ದೇಳಲೇ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ವೈದ್ಯರು ನೀಡಿದ ಚಿಕಿತ್ಸೆಯಲ್ಲಿ ಏನಾದರೂ ವ್ಯತ್ಯಾಸವಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಪೊಲೀಸ್ ತನಿಖೆ ಚುರುಕು

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಭದ್ರಾವತಿ ಹಳೆನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ಏನೆಂಬುದು ತಿಳಿದುಬರಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೋಲಾರ: ಗೊಂಬೆಯ ಮೇಲೆ ಮಾಟ ಮಂತ್ರ ಪ್ರಯೋಗಿಸಿ ದೇಗುಲದಲ್ಲಿ ಭಯಾನಕ ಬೆಚ್ಚಿ ಬೀಳಿಸೋ ಪೂಜೆ ಮಾಡಿದ ಪೂಜಾರಿ ಹತ್ಯೆ!
BMTC conductor fraud: ನಿಗಮಕ್ಕೆ ಸಾರಿಗೆ ಸಿಬ್ಬಂದಿಯಿಂದಲೇ ಕನ್ನ; ಕಂಡಕ್ಟರ್‌ಗಳ QR Code ಕಳ್ಳಾಟ ಬಯಲು!