BMTC conductor fraud: ನಿಗಮಕ್ಕೆ ಸಾರಿಗೆ ಸಿಬ್ಬಂದಿಯಿಂದಲೇ ಕನ್ನ; ಕಂಡಕ್ಟರ್‌ಗಳ QR Code ಕಳ್ಳಾಟ ಬಯಲು!

Published : Jan 20, 2026, 05:36 PM IST
BMTC Fraud Conductor s Ticket Scam Exposed Corporation Incurring Huge Losses

ಸಾರಾಂಶ

ಬಿಎಂಟಿಸಿ ಕಂಡಕ್ಟರ್‌ಗಳು ಅಧಿಕೃತ ಯುಪಿಐ ಸ್ಕ್ಯಾನರ್‌ಗಳನ್ನು ಬದಲಿಸಿ ತಮ್ಮ ವೈಯಕ್ತಿಕ ಕ್ಯೂಆರ್ ಕೋಡ್ ಬಳಸಿ ಹಣ ಲಪಟಾಯಿಸುತ್ತಿದ್ದಾರೆ. ಇದರ ಜೊತೆಗೆ, ಶಕ್ತಿ ಯೋಜನೆಯ ಉಚಿತ ಟಿಕೆಟ್‌ಗಳನ್ನು ಕನ್ನಡ ಬಾರದ ಮಹಿಳೆಯರಿಗೆ ನೀಡಿ ಅವರಿಂದಲೂ ಹಣ ವಸೂಲಿ ಮಾಡುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. 

ಬೆಂಗಳೂರು (ಜ.20): ಶಕ್ತಿ ಯೋಜನೆಯಿಂದಾಗಿ ಸಿಂಗಾರವ್ವನ ಸಾರಿಗೆ ಎಂದೇ ಖ್ಯಾತಿಯಾಗಿರುವ ಬಿಎಂಟಿಸಿ ನಿಗಮಕ್ಕೆ ಸ್ವತಃ ಸಂಸ್ಥೆಯ ಕೆಲ ಕಂಡಕ್ಟರ್‌ಗಳೇ ಚಳ್ಳೆಹಣ್ಣು ತಿನ್ನಿಸುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸ್ಕ್ಯಾನರ್ ವಂಚನೆ ಮತ್ತು ಶಕ್ತಿ ಯೋಜನೆಯ ದುರ್ಬಳಕೆಯ ಬಗ್ಗೆ ಉನ್ನತ ಮಟ್ಟದ ತನಿಖೆ ಆರಂಭವಾಗಿದ್ದು, ಸಾರಿಗೆ ಸಚಿವರು ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.

ಸಂಸ್ಥೆಯ ಸ್ಕ್ಯಾನರ್ ಕಿತ್ತು ತಮ್ಮದೇ ಸ್ಕ್ಯಾನರ್ ಬಳಕೆ!

ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಬಿಎಂಟಿಸಿ ಬಸ್‌ಗಳಲ್ಲಿ ಅಧಿಕೃತ ಯುಪಿಐ (UPI) ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ಕೆಲ ಕಿಲಾಡಿ ಕಂಡಕ್ಟರ್‌ಗಳು ಈ ಅಧಿಕೃತ ಸ್ಕ್ಯಾನರ್‌ಗಳನ್ನೇ ಕಿತ್ತುಹಾಕಿ, ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಿದ್ದಾರೆ. ಪ್ರಯಾಣಿಕರು ಸ್ಕ್ಯಾನ್ ಮಾಡಿ ಹಣ ಪಾವತಿಸಿದರೆ ಅದು ನೇರವಾಗಿ ಕಂಡಕ್ಟರ್‌ಗಳ ಜೇಬಿಗೆ ಸೇರುತ್ತಿದೆ. ಕೆಲವರ ಅಕೌಂಟ್ ಪರಿಶೀಲಿಸಿದಾಗ ಅಕ್ರಮವಾಗಿ 50 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹವಾಗಿರುವುದು ಪತ್ತೆಯಾಗಿದೆ.

ಶಕ್ತಿ ಯೋಜನೆ ಹೆಸರಲ್ಲಿ ಅನ್ಯಭಾಷಿಕರಿಗೆ ವಂಚನೆ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವಿದೆ. ಈ ಫ್ರೀ ಟಿಕೆಟ್‌ಗಳ ಮೇಲೆ ಕನ್ನಡದಲ್ಲಿ ಮಾತ್ರ 'ಉಚಿತ ಟಿಕೆಟ್' ಎಂದು ಮುದ್ರಿಸಲಾಗಿದೆ. ಆದರೆ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಂಡಕ್ಟರ್‌ಗಳು, ಕನ್ನಡ ಬಾರದ ನಾರ್ತ್ ಇಂಡಿಯನ್ ಹಾಗೂ ಇತರ ಅನ್ಯಭಾಷಿಕ ಮಹಿಳೆಯರಿಗೆ ಶಕ್ತಿ ಯೋಜನೆಯ ಫ್ರೀ ಟಿಕೆಟ್ ನೀಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಪ್ರಯಾಣಿಕರಿಗೆ ಫ್ರೀ ಟಿಕೆಟ್ ಸಿಗುತ್ತಿದೆ ಎಂಬ ಅರಿವಿರುವುದಿಲ್ಲ, ಇತ್ತ ಪ್ರಯಾಣಿಕರು ನೀಡಿದ ಹಣ ನೇರವಾಗಿ ಕಂಡಕ್ಟರ್ ಜೇಬಿಗೆ ಸೇರುತ್ತಿದೆ.

ಮೂವರು ಕಂಡಕ್ಟರ್‌ಗಳ ಅಮಾನತು

ನಕಲಿ ಸ್ಕ್ಯಾನರ್ ಅಳವಡಿಸಿ ವಂಚನೆ ಮಾಡುತ್ತಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಸಂಸ್ಥೆ, ಈಗಾಗಲೇ ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಮೂವರು ಕಂಡಕ್ಟರ್‌ಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ. ಈ ವಂಚನೆ ಜಾಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ (MD) ವರದಿ ನೀಡಲಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಉನ್ನತ ಮಟ್ಟದ ತನಿಖೆಗೆ ಸಚಿವರ ಸೂಚನೆ

ಸರ್ಕಾರಿ ಸಾರಿಗೆ ಸಂಸ್ಥೆಗೆ ನಷ್ಟ ಉಂಟುಮಾಡುತ್ತಿರುವ ಈ ವ್ಯವಸ್ಥಿತ ಜಾಲದ ಬಗ್ಗೆ ಸಾರಿಗೆ ಸಚಿವರು ಗರಂ ಆಗಿದ್ದಾರೆ. ಕೂಡಲೇ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶಕ್ತಿ ಯೋಜನೆ ಮಿಸ್ಯೂಸ್ ಮತ್ತು ನಕಲಿ ಸ್ಕ್ಯಾನರ್ ಪ್ರಕರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೋಲಾರ: ಗೊಂಬೆಯ ಮೇಲೆ ಮಾಟ ಮಂತ್ರ ಪ್ರಯೋಗಿಸಿ ದೇಗುಲದಲ್ಲಿ ಭಯಾನಕ ಬೆಚ್ಚಿ ಬೀಳಿಸೋ ಪೂಜೆ ಮಾಡಿದ ಪೂಜಾರಿ ಹತ್ಯೆ!
ಬೆಳಗಾವಿ ಹಿಂಡಲಗಾ ಜೈಲಲ್ಲಿ ಖೈದಿಗಳ ನಡುವೆ ಹೊಡೆದಾಟ: ಮಾತಾಡೋಕೆ ಫೋನ್ ಸಿಗಲಿಲ್ಲ ಅಂತ ತಲೆ ಜಜ್ಜಿಬಿಟ್ಟ!