ಮಂಗಳೂರು ವಿವಿ ಕಾಲೇಜಲ್ಲಿ ವಿದ್ಯಾರ್ಥಿಗಳ ಹೊಡೆದಾಟ

By Kannadaprabha News  |  First Published Jun 11, 2022, 11:54 AM IST

*  ಕಾಲೇಜಲ್ಲಿ ಹಿಜಾಬ್‌, ಸಾವರ್ಕರ್‌ ಫೋಟೋ ವಿವಾದ
*  2 ಗುಂಪು ನಡುವೆ ನಡೆದ ಹೊಡೆದಾಟ, ಐವರಿಗೆ ಗಾಯ
*  ಕಾಲೇಜಲ್ಲಿ ಸಂಘರ್ಷದ ವಾತಾವರಣ, ರಜೆ ಘೋಷಣೆ
 


ಮಂಗಳೂರು(ಜೂ.11): ಕೆಲ ದಿನಗಳಿಂದ ಹಿಜಾಬ್‌, ಸಾವರ್ಕರ್‌ ಫೋಟೋ ವಿಚಾರದಿಂದ ವಿವಾದಕ್ಕೆ ಈಡಾಗಿರುವ ಮಂಗಳೂರು ವಿವಿ ಕಾಲೇಜಿನಲ್ಲಿ ಶುಕ್ರವಾರ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದ್ದು, ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.

ಮಧ್ಯಾಹ್ನ ಸುಮಾರು 12.45ರ ವೇಳೆಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ನಾಲ್ಕೈದು ವಿದ್ಯಾರ್ಥಿಗಳಿಗೆ ಅಲ್ಪ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಪ್ರಾಂಶುಪಾಲರು ಮಧ್ಯಾಹ್ನ ಬಳಿಕ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಕಾಲೇಜಿನ ತರಗತಿಯೊಂದರಲ್ಲಿ ಸಾವರ್ಕರ್‌ ಫೋಟೋ ಹಾಕಿದ ವಿಚಾರದ ಹಿನ್ನೆಲೆಯಲ್ಲಿ ಈ ಮಾರಾಮಾರಿ ನಡೆದಿದೆ.

Tap to resize

Latest Videos

ಮಂಗ್ಳೂರು ವಿವಿ ಕಾಲೇಜು ವಿವಾದ: ನೋಟಿಸ್‌ಗೆ ಉತ್ತರಿಸದ ಹಿಜಾಬ್‌ ವಿದ್ಯಾರ್ಥಿನಿಯರು

ಸೋಮವಾರ ಸಂಜೆ ಇಬ್ಬರು ವಿದ್ಯಾರ್ಥಿಗಳು ಸಾವರ್ಕರ್‌ ಫೋಟೋವನ್ನು ಕರಿಹಲಗೆ ಮೇಲ್ಭಾಗದಲ್ಲಿ ಹಾಕಿದ್ದು, ಇದನ್ನು ಕಂಡ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಅದರಂತೆ ಮರುದಿನ ಬೆಳಗ್ಗೆ ಅನಧಿಕೃತವಾಗಿ ಹಾಕಿದ್ದ ಫೋಟೋವನ್ನು ಪ್ರಾಂಶುಪಾಲರು ತೆಗೆಸಿದ್ದರು. ಹೀಗಾಗಿ ಪ್ರಾಂಶುಪಾಲರಿಗೆ ದೂರು ನೀಡಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಈ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.

ಊಟದ ವೇಳೆ ಗಲಾಟೆ: ವಿವಿ ಕಾಲೇಜಿನಲ್ಲಿ ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆಯಿದ್ದು, ಅದರಂತೆ ವಿದ್ಯಾರ್ಥಿಗಳು ಊಟ ಮಾಡಿ ಹೊರಗೆ ತಟ್ಟೆತೊಳೆಯುವ ವೇಳೆ ಪ್ರಾಂಶುಪಾಲರಿಗೆ ದೂರು ನೀಡಿದ ವಿಚಾರದ ಕುರಿತು ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಸುಮಾರು ಏಳೆಂಟು ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಹೊರಗಿನಿಂದಲೂ ಕೆಲವರು ಬಂದು ಹೊಡೆದಾಟದಲ್ಲಿ ಭಾಗಿಯಾದರು ಎಂದು ಆರೋಪಿಸಲಾಗಿದೆ.

ಹೊಡೆದಾಟದಲ್ಲಿ ಒಂದು ಗುಂಪಿನ ಮೂವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಪಾಂಡೇಶ್ವರ ಠಾಣೆಗೆ ದೂರು ಕೂಡ ನೀಡಲಾಗಿದೆ. ಈ ಮಧ್ಯೆ, ಇನ್ನೊಂದು ಗುಂಪಿನ ಇಬ್ಬರು ಗಾಯಗೊಂಡಿರುವುದಾಗಿ ಪ್ರತಿದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರ ತನಿಖೆ ಮುಂದುವರಿದಿದೆ.

click me!