ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿ ನಡೆದ ಘಟನೆ
ಬೈಲಹೊಂಗಲ(ನ.23): ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಎಂ.ಜಿ. ಕಾಲೋನಿಯ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿ ಮಂಗಳವಾರ ನಡೆದಿದೆ. ಸವದತ್ತಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಪರಶುರಾಮ ಯಲ್ಲಪ್ಪ ಕೊನೇರಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಈತನು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ದ್ವಿತೀಯ ಪಿಯುಸಿ ಓದುತ್ತಿದ್ದನು. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ತನ್ನ ಕೊಠಡಿಯ ಬಾಗಿಲು ಮುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತನೊಂದಿಗೆ 8 ಜನ ವಿದ್ಯಾರ್ಥಿಗಳು ಒಂದೇ ಕೋಣೆಯಲ್ಲಿ ಇದ್ದರು. ಆದರೆ, ಎಲ್ಲರೂ ಕಾಲೇಜಿಗೆ ಹೋದ ಸಂದರ್ಭದಲ್ಲಿ ನೇಣು ಹಾಕಿಕೊಂಡಿದ್ದಾನೆ.
ಸಾಲ ಬಾಧೆ ತಾಳಲಾರದೇ ಹಾವೇರಿ ರೈತ ಆತ್ಮಹತ್ಯೆ
ನನಗೆ ಕಲಾವಿಭಾಗದ ಆಸಕ್ತಿ ಇದೆ. ವಾಣಿಜ್ಯ ವಿಭಾಗದಲ್ಲಿ ಆಸಕ್ತಿ ಇಲ್ಲದಿದ್ದರು ನಮ್ಮ ಪಾಲಕರು ವಾಣಿಜ್ಯ ವಿಭಾಗವನ್ನೇ ಕಲಿಯಲು ಹೇಳುತ್ತಿದ್ದಾರೆ ಎಂದು ಗೆಳೆಯರ ಮುಂದೆ ನೋವಿನಿಂದ ಹೇಳಿಕೊಳ್ಳುತ್ತಿದ್ದನಂತೆ. ಅಲ್ಲದೇ ಪ್ರಥಮ ಪಿಯುಸಿಯಲ್ಲಿ ಫೇಲ್ ಆಗಿ ನಂತರ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಾಸ್ ಮಾಡಿದ್ದನೆಂದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಉಳವಪ್ಪ ಸಾತೇನಹಳ್ಳಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಬಿ. ಯಮನೂರ ಭೇಟಿ ನೀಡಿ ಸಿಸಿಟಿವಿ ಪರಿಶೀಲಿಸಿ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.