ಆಸ್ತಿಗಾಗಿ ಬೈಕ್‌ಗೆ ಕಾರು ಗುದ್ದಿಸಿ ತಂದೆಯನ್ನೇ ಕೊಂದ ಪಾಪಿ ಮಗ..!

By Kannadaprabha NewsFirst Published Mar 19, 2021, 7:14 AM IST
Highlights

1 ಎಕರೆ ಜಾಗ ತಮ್ಮ ಹೆಸರಿಗೆ ಗಿಫ್ಟ್‌ ಡೀಡ್‌ ಮಾಡಿಕೊಂಡಿದ್ದ ಪತ್ನಿ, ಇಬ್ಬರು ಮಕ್ಕಳು| ಈ ವಿಚಾರ ತಿಳಿದು ಕೋರ್ಟ್‌ ಮೆಟ್ಟಿಲೇರಿದ್ದ ತಂದೆ| 6 ಲಕ್ಷಕ್ಕೆ ಸುಪಾರಿ| ದ್ವಿಚಕ್ರವಾಹನಕ್ಕೆ ಸ್ಕಾರ್ಪಿಯೋ ಗುದ್ದಿಸಿ ಪರಾರಿ| ಹಂತಕನ ಸೆರೆ, ತಾಯಿ, ಮಕ್ಕಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರು| 

ಬೆಂಗಳೂರು(ಮಾ.19):  ಆಸ್ತಿ ವಿಚಾರಕ್ಕೆ ಪತ್ನಿ ಮತ್ತು ಮಕ್ಕಳು ಸೇರಿ ತಂದೆಯ ಕೊಲೆ ಮಾಡಿಸಿದ ಬಳಿಕ ಸಿನಿಮೀಯ ರೀತಿಯಲ್ಲಿ ಅಪಘಾತವೆಂದು ಬಿಂಬಿಸಲು ಹೋಗಿ ಇದೀಗ ವೈಟ್‌ಫೀಲ್ಡ್‌ ಸಂಚಾರ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ವೈಟ್‌ಫೀಲ್ಡ್‌ ನಿವಾಸಿ ಕೊಲೆ ಸುಪಾರಿ ಪಡೆದಿದ್ದ ಅನಿಲ್‌ ಕುಮಾರ್‌ (38) ಬಂಧಿತ. ಸುಬ್ಬರಾಯಪ್ಪ (58) ಕೊಲೆಯಾದವರು.

ಪ್ರಕರಣ ವರ್ತೂರು ಠಾಣೆಗೆ (ಕಾನೂನು ಮತ್ತು ಸುವ್ಯವಸ್ಥೆಯ) ವರ್ಗಾವಣೆಗೊಂಡ ಬಳಿಕ ಇತರ ಆರೋಪಿಗಳಾದ ಮೃತರ ಪತ್ನಿ ಯಶೋಧಮ್ಮ, ಮಕ್ಕಳಾದ ದೇವರಾಜ್‌ ಹಾಗೂ ಭರತ್‌ನನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯಾದ ಸುಬ್ಬಾರಾವ್‌ ಅವರು ವರ್ತೂರು ಬಳಿ ಒಂದು ಎಕರೆ ಜಮೀನು ಹೊಂದಿದ್ದರು. ಆಸ್ತಿಯನ್ನು ಮಕ್ಕಳಿಗೆ ಹಂಚಿರಲಿಲ್ಲ. ಈ ವಿಚಾರವಾಗಿ ಮಕ್ಕಳು ಮತ್ತು ತಂದೆ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಸುಬ್ಬರಾವ್‌ ಅವರ ಗಮನಕ್ಕೆ ಬಾರದೇ ಪತ್ನಿ ಯಶೋಧಮ್ಮ ಹಾಗೂ ಮಕ್ಕಳಾದ ಭರತ್‌, ದೇವರಾಜ್‌ ಜಮೀನನ್ನು ತಮ್ಮ ಹೆಸರಿಗೆ ಗಿಫ್ಟ್‌ ಡೀಡ್‌ ಮಾಡಿಕೊಂಡಿದ್ದರು. ಈ ವಿಚಾರ ತಿಳಿದ ಸುಬ್ಬರಾವ್‌ ಪತ್ನಿ ಮತ್ತು ಮಕ್ಕಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಇದರಿಂದ ಆಕ್ರೋಶಗೊಂಡ ಪತ್ನಿ ಮತ್ತು ಮಕ್ಕಳು ಸುಬ್ಬರಾವ್‌ ಹತ್ಯೆಗೆ ಸಂಚು ರೂಪಿಸಿದ್ದರು.

ಜ.21ರಂದು ಗಂಜೂರು ನಿವಾಸಿ ಸುಬ್ಬರಾಯಪ್ಪ ಅವರು ಗಂಜೂರಿ ನರಿಗೆ ಗ್ರಾಮದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಇವರ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಗುದ್ದಿ ಪರಾರಿಯಾಗಿತ್ತು. ಪರಿಣಾಮ ಸುಬ್ಬರಾಯಪ್ಪ ಬಲಗಾಲಿನ ಮೂಳೆ ಮುರಿದು, ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸಂಬಂಧ ವೈಟ್‌ಫೀಲ್ಡ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಘಾತ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಅಪಘಾತವಾಗಿರುವ ರಸ್ತೆಯಲ್ಲಿ ರಸ್ತೆ ಉಬ್ಬುಗಳು ಇದ್ದು, ಅಲ್ಲಿ ಅಪಘಾತವಾಗುವ ಸಂಭವ ಬಹಳ ಕಡಿಮೆ ಎಂಬುದು ತಿಳಿದು ಬಂದಿತ್ತು.

ವಿಶೇಷ ಚೇತನ ಮಗುವನ್ನು ಬಾವಿಗೆ ಎಸೆದ ಪಾಪಿಗಳು, ನಾಲ್ವರು ಅಂದರ್

ಬಳಿಕ ಪೊಲೀಸರು ಸ್ಥಳೀಯರು ಹಾಗೂ ಮೃತರ ಸಂಬಂಧಿಕರ ಹೇಳಿಕೆ ಪಡೆದಾಗ ಜಮೀನು ವ್ಯಾಜ್ಯ ನ್ಯಾಯಾಲಯದಲ್ಲಿ ಇರುವುದು ಗೊತ್ತಾಗಿತ್ತು. ಅಲ್ಲದೆ, ಪತ್ನಿ ಮತ್ತು ಮಕ್ಕಳು ಗೊಂದಲದ ಹೇಳಿಕೆ ನೀಡಿದ್ದರು ಎಂದು ಪೊಲೀಸರು ತಿಳಿಸಿದರು.

ಸಿಕ್ಕಿ ಬಿದ್ದಿದ್ದು ಹೀಗೆ

ಮೃತ ಸುಬ್ಬರಾಯಪ್ಪ ಅವರೆಕಾಳು ವ್ಯಾಪಾರ ಮಾಡುತ್ತಿದ್ದರು. ಅವರೆಕಾಳು ಕೊಳ್ಳುವ ನೆಪದಲ್ಲಿ ಅನಿಲ್‌, ಸುಬ್ಬರಾಯಪ್ಪ ಓಡಾಡುವ ಮಾಹಿತಿ ಸಂಗ್ರಹಿಸಿದ್ದ. ತನಿಖೆ ಕೈಗೊಂಡ ಪೊಲೀಸರು ಆ ಮಾರ್ಗದಲ್ಲಿ ನಂಬರ್‌ ಪ್ಲೇಟ್‌ ಇಲ್ಲದೆ ಸಂಚರಿಸಿದ್ದ ‘ರೇವಾ ಕಾರ್ಸ್‌ ಸೆಲ್ಫ್‌ ಡ್ರೈವಿಂಗ್‌’ ಕಂಪನಿಗೆ ಸೇರಿದ ಸ್ಕಾರ್ಪಿಯೋ ಕಾರನ್ನು ಪತ್ತೆ ಹಚ್ಚಿದ್ದರು. ಅಲ್ಲದೆ, ಕಾರು ಚಾಲನೆ ಮಾಡಿ ಅಪಘಾತವೆಸಗಿದ್ದ ಆರೋಪಿ ಅನಿಲ್‌ ಮೃತರಿಗೆ ಕೊನೆ ಬಾರಿ ಕರೆ ಮಾಡಿದ್ದ. ಇದರ ಆಧಾರದ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 6 ಲಕ್ಷಗಳಿಗೆ ಕೊಲೆಗೆ ಸುಪಾರಿ ಪಡೆದಿದ್ದ ವಿಷಯ ಬಾಯಿ ಬಿಟ್ಟಿದ್ದಾನೆ. ಅಪಘಾತ ಮಾಡಿದ ಬಳಿಕ ಸ್ಕಾರ್ಪಿಯೋ ಕಾರನ್ನು ಮುಳಬಾಗಿಲು ತಾಲೂಕಿನ ತಂಬಳ್ಳಿ ಬಳಿ ಇರುವ ಇಂಪ್ತಿಯಾಜ್‌ ಗ್ಯಾರೇಜ್‌ನಲ್ಲಿ 57 ಸಾವಿರಕ್ಕೆ ದುರಸ್ತಿ ಮಾಡಿಸಿದ್ದಾಗಿ ಸತ್ಯಾಂಶ ಬಾಯ್ಬಿಟ್ಟಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.
 

click me!