
ಬೆಂಗಳೂರು(ಜೂ.16): ಪ್ರತಿ ದಿನ ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಾರೆ ಎಂದು ಸಿಟ್ಟಿಗೆದ್ದು ತನ್ನ ತಂದೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದ ಮಗನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಗೋಪಾಲಪುರದ ಗಂಗರಾಜು (55) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಮೃತನ ಹಿರಿಯ ಮಗ ಚೇತನ್‌ನನ್ನು ಬಂಧಿಸಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆ ಹೊರಗೆ ರಾತ್ರಿ ಮಲಗಿದ್ದ ತಂದೆ ತಲೆ ಮೇಲೆ ಗುರುವಾರ ನಸುಕಿನ 4.50ರ ಸುಮಾರಿಗೆ ಕಲ್ಲು ಎತ್ತಿ ಹಾಕಿ ಚೇತನ್ ಕೊಲೆ ಮಾಡಿದ್ದ. ಕೃತ್ಯದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಡಿದು ಬಂದು ಏನೂ ಅರಿಯದ 2 ವರ್ಷದ ಕಂದಮ್ಮನನ್ನೇ ಕೊಂದು ಹಾಕಿದ ಪಾಪಿ ತಂದೆ!
ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಗೋಪಾಲಪುರದಲ್ಲಿ ಮೃತ ಗಂಗರಾಜು ನೆಲೆಸಿದ್ದರು. ಯಾವುದೇ ಕೆಲಸಕ್ಕೆ ಹೋಗದೆ ಅಲೆಯುತ್ತಿದ್ದ ಅವರು, ವಿಪರೀತ ಮದ್ಯ ವ್ಯಸನಿಯಾಗಿದ್ದರು. ಈ ಮದ್ಯ ಸೇವನೆ ವಿಚಾರವಾಗಿ ಕುಟುಂಬದಲ್ಲಿ ಮನಸ್ತಾಪ ಮೂಡಿತ್ತು. ಪ್ರತಿ ದಿನ ಕಂಠಮಟ್ಟ ಕುಡಿದು ಬಂದು ಮನೆಯಲ್ಲಿ ಗಂಗರಾಜು ಗಲಾಟೆ ಮಾಡುತ್ತಿದ್ದರು. ಇದಕ್ಕೆ ಹಿರಿಯ ಮಗ ಚೇತನ್ ತೀವ್ರ ಆಕ್ಷೇಪಿಸಿದ್ದ. ಹೀಗಿದ್ದರೂ ಗಂಗರಾಜು ನಡವಳಿಕೆಯಲ್ಲಿ ಬದಲಾವಣೆ ಕಾಣಲಿಲ್ಲ.
ಎಂದಿನಂತೆ ಬುಧವಾರ ರಾತ್ರಿ ಸಹ ಮದ್ಯ ಸೇವಿಸಿ ಬಂದು ಮನೆಯಲ್ಲಿ ಗಂಗರಾಜು ಜಗಳ ಮಾಡಿದ್ದು, ಆಗ ತಂದೆ-ಮಗನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದಾದ ಬಳಿಕ ಮನೆಯಿಂದ ಹೊರ ಬಂದು ಗಂಗರಾಜು ಮಲಗಿದ್ದರು. ಆಗ ನಸುಕಿನ 4.50ರ ಸುಮಾರಿಗೆ ತಂದೆ ತಲೆ ಮೇಲೆ ಚೇತನ್ ಕಲ್ಲು ಎತ್ತಿ ಹಾಕಿದ್ದಾನೆ. ಈ ಚೀರಾಟ ಕೇಳಿ ನೆರೆಹೊರೆಯರು ಎಚ್ಚರಗೊಂಡು ಹೊರಬಂದಾಗ ರಕ್ತದ ಮಡುವಿನಲ್ಲಿ ಗಂಗರಾಜು ಮೃತದೇಹ ಕಂಡಿದೆ. ಕೂಡಲೇ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ