ತನಗೆ ಮದ್ಯ ಸೇವನೆಗೆ ಪಿಂಚಣಿ ಹಣ ಕೊಡಲು ನಿರಾಕರಿಸಿದ ಕಾರಣಕ್ಕೆ ತಾಯಿ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಂದು ಪರಾರಿಯಾಗಿದ್ದ ಕಿಡಿಗೇಡಿ ಮಗನೊಬ್ಬನನ್ನು ಬಾಗಲಗುಂಟೆ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬೆಂಗಳೂರು (ಏ.12): ತನಗೆ ಮದ್ಯ ಸೇವನೆಗೆ ಪಿಂಚಣಿ ಹಣ ಕೊಡಲು ನಿರಾಕರಿಸಿದ ಕಾರಣಕ್ಕೆ ತಾಯಿ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಂದು ಪರಾರಿಯಾಗಿದ್ದ ಕಿಡಿಗೇಡಿ ಮಗನೊಬ್ಬನನ್ನು ಬಾಗಲಗುಂಟೆ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮುನೇಶ್ವರ ಬಡಾವಣೆ ನಿವಾಸಿ ಮಹೇಂದ್ರ ಸಿಂಗ್ ಬಂಧಿತನಾಗಿದ್ದು, ಮನೆಯಲ್ಲಿ ಗುರುವಾರ ರಾತ್ರಿ ತನ್ನ ತಾಯಿ ಶಾಂತಾ ಬಾಯಿ (80) ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಆರೋಪಿ ಕಾಲ್ಕಿತ್ತಿದ್ದ. ಈ ಬಗ್ಗೆ ಮೃತರ ಪುತ್ರಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮೃತ ಶಾಂತಾ ಬಾಯಿ ಅವರು, ಹಲವು ವರ್ಷಗಳಿಂದ ಬಾಗಲಗುಂಟೆ ಸಮೀಪದ ಮುನೇಶ್ವರ ಬಡಾವಣೆಯಲ್ಲಿ ಕುಟುಂಬದ ಜತೆ ನೆಲೆಸಿದ್ದರು. ವಿಪರೀತ ಮದ್ಯ ವ್ಯಸನಿಯಾಗಿದ್ದ ಆತ, ಯಾವುದೇ ಕೆಲಸಕ್ಕೆ ಹೋಗದೆ ಅಲೆಯುತ್ತಿದ್ದ. ಈ ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಮಹೇಂದ್ರ ‘ಡಿ’ ದರ್ಜೆ ನೌಕರನಾಗಿದ್ದ. ಇನ್ನು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಏಳು ವರ್ಷಗಳ ಹಿಂದೆ ಆತನಿಂದ ಪತ್ನಿ ಹಾಗೂ ಮಗ ದೂರವಾಗಿದ್ದರು. ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಡಿ ಗ್ರೂಪ್ ನೌಕರಾಗಿದ್ದ ತಂದೆ ನಿಧನದ ಬಳಿಕ ಆತನ ತಾಯಿ ಶಾಂತಾ ಬಾಯಿ ಅವರಿಗೆ ಮಾಸಿಕ ₹13 ಸಾವಿರ ಪಿಂಚಣೆ ಬರುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿ ಕೊಂದ ಪತ್ನಿ ಬಂಧನ: ಮಾತುಕತೆಗೆ ಕರೆದು ಹತ್ಯೆ
ಪ್ರತಿ ತಿಂಗಳು ಹಣಕ್ಕೆ ತಾಯಿಗೆ ಕಿರುಕುಳ: ಪ್ರತಿ ತಿಂಗಳು ಪಿಂಚಣಿ ಹಣ ಕೊಡುವಂತೆ ತಾಯಿಯನ್ನು ಆತ ಪೀಡಿಸುತ್ತಿದ್ದ. ಈ ಹಣ ಕೊಡಲು ನಿರಾಕರಿಸಿದಾಗ ತಾಯಿ ಮೇಲೆ ಮಹೇಂದ್ರ ಸಿಂಗ್ ಗಲಾಟೆ ಮಾಡುತ್ತಿದ್ದ. ಅಂತೆಯೇ ಗುರುವಾರ ರಾತ್ರಿ ಮದ್ಯ ಸೇವನೆ ಹಣಕ್ಕಾಗಿ ತಾಯಿ ಬಳಿ ಆತ ಒತ್ತಾಯಿಸಿದ್ದಾನೆ. ಆದರೆ ಹಣ ಕೊಡಲು ಅವರು ಒಪ್ಪದೆ ಹೋದಾಗ ಗಲಾಟೆ ಮಾಡಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಶಾಂತಾ ಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಚೀರಾಟದ ಸದ್ದು ಕೇಳಿ ಸ್ಥಳೀಯರು ಜಮಾಯಿಸಿದ್ದಾರೆ. ಆದರೆ ಅಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ. ಬಳಿಕ ವಿಷಯ ತಿಳಿದು ಪೊಲೀಸರಿಗೆ ಮೃತರ ಮಗಳು ದೂರು ನೀಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.