ಬೆಳಗಾವಿ: ಮಗು ಅಪಹರಣ ಕೇಸ್‌, ಆರು ಆರೋಪಿಗಳ ಬಂಧನ

By Kannadaprabha News  |  First Published Aug 19, 2022, 12:27 PM IST

ಮಗು ಅಪಹರಣ ಪ್ರಕರಣದಲ್ಲಿ ತಂದೆಯ ಮಿತ್ರ ಹಾಗೂ ಕ್ಷೌರಿಕ ಅಂಗಡಿಯವ ಈ ಪ್ರಕರಣದ ರೂವಾರಿಗಳು


ಸಂಕೇಶ್ವರ(ಆ.19):  ಅಪ್ರಾಪ್ತ ಮಗುವನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಭಾಗಿಯಾದ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂಜೀವ್‌ ಪಾಟೀಲ ಮಾಹಿತಿ ನೀಡಿದ್ದಾರೆ  ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೆ ತಿಂಗಳು ದಿ. 2ರಂದು ಪಟ್ಟಣದ ಮಾಳಿಗಲ್ಲಿ ನಿವಾಸಿ ಭಾಸ್ಕರ್‌ ರಾವ್‌ ಪ್ರಕಾಶ ಕಾಕಡೆ ಎಂಬುವರು, ತಮ್ಮ 14 ವರ್ಷದ ಮಗು ಟ್ಯೂಶನ್‌ ಮುಗಿಸಿ ಬರುವಾಗ ಅಪರಿಚಿತರು ಮಗುವನ್ನು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದರು. ಪ್ರಕರಣದ ಕುರಿತು ತಕ್ಷಣವೇ ಕಾರ್ಯೋನ್ಮುಖರಾದ ಪೊಲೀಸರು ಸಂಕೇಶ್ವರ ಸುತ್ತಲೂ ನಾಕಾ ಬಂದಿ ಮಾಡಿ ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪರಿಣಾಮ ಅಪಹರಿಸಿದ ದಿನವೇ ಮಗುವನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈಗ ಪ್ರಕರಣದ ಕಾರ್ಯಾಚರಣೆ ನಡೆಸಿ, ಅಪಹರಣ ಪ್ರಕರಣದಲ್ಲಿ ಭಾಗಿಯಾದ ಆರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಮಗುವನ್ನು ಅಪಹರಿಸಿದ್ದ ಆರೋಪಿಗಳು 5 ಲಕ್ಷ ಹಣ ನೀಡುವಂತೆ ಮಗುವಿನ ತಂದೆ ಬಳಿ ಇಟ್ಟಿದ್ದರು. ಆದರೆ, ಪೊಲೀಸರು ಎಚ್ಚೆತ್ತುಕೊಂಡಿದ್ದರಿಂದ ಆರೋಪಿಗಳು ಮಗುವನ್ನು ಹೊನ್ನಿಹಳ್ಳಿ ಕ್ರಾಸ್‌ ಬಳಿ ಬಿಟ್ಟು ಪರಾರಿಯಾಗಿದ್ದರು. ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Tap to resize

Latest Videos

ಆನ್ಲೈನ್ ಗೇಮ್ ಮೂಲಕ ಕೋಟ್ಯಂತರ ರೂ. ಹಣ ಗೆದ್ದಿದ್ದ, 1 ಕೋಟಿ‌ ನೀಡುವಂತೆ ಸ್ನೇಹಿತರಿಂದಲೇ ಕಿಡ್ನಾಪ್‌..!

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬೆಳಗಾವಿ, ಡಿಎಸ್‌ಪಿ ಗೋಕಾಕ ಹಾಗೂ ಯಮಕನಮರಡಿ ಪಿಐ ಮಾರ್ಗದರ್ಶನದಲ್ಲಿ, ಸಂಕೇಶ್ವರ ಪಿಎಸ್‌ಐ ಗಣಪತಿ ಕೊಂಗನೊಳಿ ನೇತೃತ್ವದಲ್ಲಿ, ಸಿಬ್ಬಂದಿಯಾದ ಬಿ.ಕೆ. ನಾಗನೂರಿ, ಎಂ.ಎಂ. ಜಂಬಗಿ, ಬಿ.ಎಸ್‌. ಕಪರಟ್ಟಿಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು .

ಮಗುವಿನ ತಂದೆ ಮಿತ್ರನೇ ರೂವಾರಿ!

ಇನ್ನು ಮಗು ಅಪಹರಣ ಪ್ರಕರಣದಲ್ಲಿ ತಂದೆಯ ಮಿತ್ರ ಹಾಗೂ ಕ್ಷೌರಿಕ ಅಂಗಡಿಯವ ಈ ಪ್ರಕರಣದ ರೂವಾರಿಗಳಾಗಿದ್ದಾರೆ ಎನ್ನಲಾಗಿದೆ. ಅಪಹರಣಕ್ಕೊಳಗಾಗಿದ್ದ ಮಗುವಿನ ತಂದೆ ಬಳಿ ಹಣ ಇರುವುದನ್ನು ಬಲ್ಲವರು ಮತ್ತು ಹತ್ತಿರದವರೇ ಈ ಅಪಹರಣದ ರೂಪರೇಷ ಹೆಣೆದಿದ್ದು, ಸಂಕೇಶ್ವರ ಪೊಲೀಸರ ಸಮಯ ಪ್ರಜ್ಞೆಯಿಂದ ಅಪಹರಣ ವಿಫಲವಾಗಿದ್ದು, ಪೊಲೀಸರು ಬೆನ್ನುಬಿದ್ದ ಮಾಹಿತಿ ತಿಳಿದ ಖದೀಮರು ಅಪಹರಿಸಿದ್ದ ಮಗುವನ್ನು ಹೊನ್ನಿಹಳ್ಳಿ ಕ್ರಾಸ್‌ ಬಳಿ ಅಪಹರಿಸಿದ ದಿನವೇ ಬಿಟ್ಟು ಪರಾರಿಯಾಗಿದ್ದರು. ಮಿಸೆ ಚಿಗುರದ ಆರೋಪಿಗಳಿಗೆ ಸಂಕೇಶ್ವರ ಪೊಲೀಸರು ಬಲೆ ಬಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .

ಆರೋಪಿಗಳು

ಅಪಹರಣದಲ್ಲಿ ಭಾಗಿಯಾದ ಪಟ್ಟಣದ ಗೋರಕ್ಷಣ ಮಾಳ ನಿವಾಸಿ ಪ್ರಸಾದ ಅಲಿಯಾಸ ಬಬ್ಲು ಸಂಜಯ ರಾವುತ್‌ (20),ನದಿಗಲ್ಲಿಯ ನಿವಾಸಿ ದೀಪಕ ಶಾಮಸಿಂಗ್‌ ಬಿಲಾವರ (21), ಬೆಳಗಾವಿ ವಂಟಮೂರಿ ಕಾಲನಿ ನಿವಾಸಿ ಸುಲ್ತಾನ ಅಲಿಯಾಸ್‌ ರಾಜು ಹುಸೇನ್‌ ಮುಜಾವರ್‌ (19), ಬೆಳಗಾವಿ ರಾಮತಿರ್ಥ ನಗರದ ರಮೇಶ ಯಲ್ಲಪ್ಪ ಬಿಚಗತ್ತಿ (19), ನಿಪ್ಪಾಣಿ ಡಾಲರ್ಸ್‌ ಕಾಲೋನಿ ನಿವಾಸಿ ಸೌರಭ ದಗಡು ತಳವಾರ (22) ಹಾಗೂ ನಿಪ್ಪಾಣಿ ವಿನಾಯಕ ಫಂಡರಿನಾಥ ಪಾಂಡವ (23) ಬಂಧಿತ ಆರೋಪಿಗಳಾಗಿದ್ದಾರೆ .
 

click me!