ಡೆಲ್ಲಿಯ 35 ಪೀಸ್ ಮರ್ಡರ್ ಕೇಸ್‌ನಲ್ಲಿ ಪೊಲೀಸರು ಇಂದು ಶ್ರದ್ಧಾಳ ಕೊಲೆ ಆರೋಪಿಸ ಅಫ್ತಾಬ್ ಅಮಿನ್ ಪೂನಾವಾಲಾನ ಮಂಪರು ಪರೀಕ್ಷೆ ನಡೆಸಲಿದ್ದಾರೆ. ದೆಹಲಿಯ ಅಂಬೇಡ್ಕರ್ ಕಾಲೇಜಿನಲ್ಲಿ ಈ ಪರೀಕ್ಷೆ ನಡೆಯಲಿದೆ. ಈ ಸಮಯದಲ್ಲಿ ಅಫ್ತಾಬ್‌ಗೆ ಚುಚ್ಚುಮದ್ದನ್ನು ನೀಡಲಾಗುತ್ತದೆ ಮತ್ತು ಅರೆ ಪ್ರಜ್ಞಾವಸ್ಥೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. 50ಕ್ಕೂ ಹೆಚ್ಚು ಪ್ರಶ್ನೆಗಳ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ನವದೆಹಲಿ (ನ.21): ದೆಹಲಿಯ ಅತ್ಯಂತ ಕುಖ್ಯಾತ 35 ಪೀಸ್ ಮರ್ಡರ್ ಕೇಸ್ ಪ್ರಕರಣದಲ್ಲಿ ಇಂದು ಆರೋಪಿ ಅಫ್ತಾಬ್ ಅಮಿನ್ ಪೂನಾವಾಲಾನ ಮಂಪರು ಪರೀಕ್ಷೆ ನಡೆಯಲಿದೆ. ಗೆಳತಿ ಶ್ರದ್ಧಾ ವಾಕರ್‌ಳನ್ನು ಕೊಂದು 35 ತುಂಡುಗಳನ್ನಾಗಿ ಕತ್ತರಿಸಿದ್ದ ಅಫ್ತಾಬ್ ಪೂನಾವಾಲಾ, ಈ ತುಂಡುಗಳನ್ನು ಫ್ರಿಡ್ಜ್‌ನಲ್ಲಿ ಇರಿಸಿದ್ದ. ಪ್ರತಿದಿನವೂ ಒಂದೊಂದು ತುಂಡುಗಳನ್ನು ವಿವಿಧ ಪ್ರದೇಶಗಳಲ್ಲಿ ಎಸೆದುಬರುತ್ತಿದ್ದ. ಈ ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ ದೇಶದ ಗಮನ ಸೆಳೆದಿದೆ. ಇದರ ನಡುವೆ ಅಫ್ತಾನ್ ಪೂನಾವಾಲಾ ದಿನಕ್ಕೆ ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವುದು ತನಿಖೆಗೆ ದೊಡ್ಡ ಮಟ್ಟದ ಅಡ್ಡಿಯಾಗಿದೆ. ಆ ಕಾರಣಕ್ಕಾಗಿ ಪೊಲೀಸರು ಸೋಮವಾರ ಅಫ್ತಾಬ್ ಪೂನಾವಾಲಾನ ಮಂಪರು ಪರೀಕ್ಷೆಯನ್ನು ನಡೆಸಲಿದ್ದಾರೆ. ಈಗಾಗಲೇ ಶ್ರದ್ಧಾಳ ಕೊಲೆ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದರು. ಸೂಕ್ತ ಹಾಗೂ ಸ್ಪಷ್ಟವಾದ ದಾಖಲೆಗಳು ಅದಕ್ಕೆ ಸಿಕ್ಕಿಲ್ಲ. ಇದೇ ದಾಖಲೆಗಳನ್ನು ಹಿಡಿದು ಕೋರ್ಟ್‌ಗೆ ಹೋದಲ್ಲಿ ಶ್ರದ್ಧಾಳ ಸಾವಿಗೆ ನ್ಯಾಯ ದೊರಕುವ ಸಾಧ್ಯತೆ ಕೂಡ ಕಡಿಮೆ. ಆ ಕಾರಣಕ್ಕಾ ಇಂದು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಅಫ್ತಾಬ್‌ನ ಮಂಪರು ಪರೀಕ್ಷೆ ನಡೆಯಲಿದೆ.
ಅಫ್ತಾಬ್‌ಗೆ ಮಂಪರು ಪರೀಕ್ಷೆ ಏಕೆ: ಶ್ರದ್ಧಾಳ ಕೊಲೆ ಪ್ರಕರಣದಲ್ಲಿ ಆಕೆಯ ದೇಹದ ಕೆಲವು ಮೂಳೆಗಳ ಹೊರತಾಗಿ ಬೇರೇನೂ ಪೊಲೀಸರಿಗೆ ಸಿಕ್ಕಿಲ್ಲ. ಅಫ್ತಾಭ್ ಅಮಿನ್ ತಾನು ಕೊಂದಿರುವುದಾಗಿ ಹೇಳಿದ್ದರೂ, ಕೋರ್ಟ್ ಅದಕ್ಕಾಗಿ ಸ್ಪಷ್ಟ ಸಾಕ್ಷ್ಯವನ್ನು ಕೇಳುತ್ತದೆ. ಇದರ ನಡುವೆ ಆತ ಪದೇ ಪದೇ ತನ್ನ ಹೇಳಿಕೆಯನ್ನು ಬದಲಾವಣೆ ಮಾಡುತ್ತಿದ್ದಾನೆ. ಇದು ತನಿಖೆಗೂ ಕೂಡ ಅಡ್ಡಿಯಾಗಿದೆ. ನ್ಯಾಯಾಲಯದಿಂದ ನಾರ್ಕೋ ಪರೀಕ್ಷೆಯ ಅನುಮೋದನೆಗಾಗಿ, ಅಫ್ತಾಬ್ ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಿದ್ದಾನೆ ಮತ್ತು ತನಿಖೆಗೆ ಸಹಾಯ ಮಾಡುತ್ತಿಲ್ಲ, ಇದಕ್ಕಾಗಿ ನಾರ್ಕೋ ಪರೀಕ್ಷೆ ಅಗತ್ಯ ಎಂದು ಪೊಲೀಸರು ವಾದಿಸಿದ್ದರು. ಪೊಲೀಸರ ಮನವಿಯ ಮೇರೆಗೆ ಕಳೆದ ವಾರ ಗುರುವಾರ ಸಾಕೇತ್ ನ್ಯಾಯಾಲಯ ಅಫ್ತಾಬ್ ನ ನಾರ್ಕೋ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು. ಅಫ್ತಾಬ್ ಕೂಡ ಈ ಪರೀಕ್ಷೆಗೆ ಒಪ್ಪಿಗೆ ನೀಡಿದ್ದರು. ಮಂಪರು ಪರೀಕ್ಷೆಗೆ ಆರೋಪಿಯ ಒಪ್ಪಿಗೆ ಕೂಡ ಮುಖ್ಯವಾಗಿದೆ.
ಎಲ್ಲಿ ನಡೆಯಲಿದೆ ಪರೀಕ್ಷೆ: ದೆಹಲಿಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮಂಪರು ಪರೀಕ್ಷೆ ನಡೆಯಲಿದೆ. ವೇಳೆ ತನಿಖೆ ನಡೆಸುತ್ತಿರುವ ಪೊಲೀಸರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು ಮಾತ್ರವೇ ಇರಲಿದ್ದಾರೆ. ಈ ನಾರ್ಕೋ ಪರೀಕ್ಷೆಯನ್ನು ರೋಹಿಣಿಯಲ್ಲಿರುವ ಫೋರೆನ್ಸಿಕ್ ಸೈನ್ಸ್ ಲ್ಯಾಬ್ ಮಾಡುತ್ತದೆ. ಈ ಸಮಯದಲ್ಲಿ, 4 ರಿಂದ 5 ವಿಧಿವಿಜ್ಞಾನಿಗಳು ಉಪಸ್ಥಿತರಿರುತ್ತಾರೆ. ಇದರ ವೀಡಿಯೋ ರೆಕಾರ್ಡಿಂಗ್ ಕೂಡ ಎಫ್‌ಎಸ್‌ಎಲ್ ಮಾತ್ರವೇ ಮಾಡುತ್ತದೆ. ಎಲ್ಲ ಸೌಲಭ್ಯಗಳು ಇರುವುದರಿಂದ ಆಸ್ಪತ್ರೆಯಲ್ಲಿ ಈ ಪರೀಕ್ಷೆ ಮಾಡಲಾಗುತ್ತದೆ. ಪರೀಕ್ಷೆಯ ಸಮಯದಲ್ಲಿ ಕೆಲವು ತುರ್ತು ಪರಿಸ್ಥಿತಿ ಸಂಭವಿಸಿದಲ್ಲಿ, ಆಸ್ಪತ್ರೆಯಲ್ಲಿಯೇ ಆತನಿಗೆ ಚಿಕಿತ್ಸೆ ನೀಡಲಾಗುತ್ತದೆ.
ಯಾವ ಪ್ರಶ್ನೆಗಳನ್ನು ಕೇಳುತ್ತಾರೆ: ಶ್ರದ್ದಾಳನ್ನು ಈ ರೀತಿಯಲ್ಲಿ ಕೊಲೆ ಮಾಡಿದ್ದೇಕೆ? ಇಬ್ಬರ ನಡುವೆ ಆಗಾಗ ನಡೆಯುತ್ತಿದ್ದ ಗಲಾಟೆಗೆ ಕಾರಣವೇನು? ಯಾವ ಆಯುಧದಿಂದ ಆಕೆಯನ್ನು ಕೊಂದಿದ್ದು? ಯಾವಾಗ ಕೊಲೆಯ ಪ್ಲ್ಯಾನ್ ಮಾಡಿದ್ದು? ಶ್ರದ್ಧಾಳ ತಲೆಬುರುಡೆ ಎಲ್ಲಿದೆ? ಆಕೆಯ ದೇಹದ ಉಳಿದ ಭಾಗಗಳು ಎಲ್ಲಿದೆ? ಆಕೆಯ ದೇಹವನ್ನು ಕತ್ತರಿಸಿದ ಆಯುಧ ಎಲ್ಲಿದೆ? ಶ್ರದ್ಧಾಳ ಬಟ್ಟೆಗಳು ಹಾಗೂ ಮೊಬೈಲ್ ಎಲ್ಲಿದೆ? ಎನ್ನುವ ಪ್ರಶ್ನೆಗಳನ್ನು ಮುಖ್ಯವಾಗಿ ಅಫ್ತಾಬ್‌ಗೆ ಕೇಳಲಾಗುತ್ತದೆ. ಒಟ್ಟಾರೆ 50 ಪ್ರಶ್ನೆಗಳನ್ನು ಪೊಲೀಸರು ಸಿದ್ಧ ಮಾಡಿದ್ದಾರೆ.
ಶ್ರದ್ಧಾಳ ತಲೆಬರುಡೆಗಾಗಿ ಕೊಳದಲ್ಲಿ ಶೋಧ, ಮೆಹ್ರೌಲಿ ಅರಣ್ಯದಿಂದ ಈವರೆಗೂ 17 ಮೂಳೆಗಳು ಪತ್ತೆ!
ಮಂಪರು ಪರೀಕ್ಷೆಗೆ ಮುನ್ನ ಏನು ಮಾಡುತ್ತಾರೆ: ಎಫ್‌ಎಸ್‌ಎಲ್ ಟೀಮ್‌ಗೆ ಮೊದಲು ದೆಹಲಿ ಪೊಲೀಸರಿಂದ ಮನವಿ ಹೋಗುತ್ತದೆ. ಅವರು ಸ್ಥಳಕ್ಕೆ ಬಂದ ಬಳಿಕವೇ ಪರೀಕ್ಷೆ ಆರಂಭವಾಗುತ್ತದೆ. ಇದರ ವಿಡಿಯೋಗ್ರಾಫಿ ಕೂಡ ಎಫ್‌ಎಸ್‌ಎಲ್ ಟೀಮ್ ಮಾಡುತ್ತದೆ. ಪೊಲೀಸರಿಗೆ ಯಾವುದೇ ಹಸ್ತಕ್ಷೇಪ ಇರುವುದಿಲ್ಲ. ಮಂಪರು ಪರೀಕ್ಷೆಗೂ ಮುನ್ನ ಅಫ್ತಾಬ್‌ನ ವೈದ್ಯಕೀಯ ಪರೀಕ್ಷೆ ಕೂಡ ನಡೆಯಲಿದೆ. ಯಾವುದಾದರೂ ದೊಡ್ಡ ಕಾಯಿಲೆಯಿಂದ ಆತ ಬಳಲುತ್ತಿದ್ದಾನೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಹಾಗೇನಾದರೂ ಮಾನಸಿಕ, ಅಂಗಾಂಗ ಸಂಬಂಧಿತ ಅಥವಾ ಕ್ಯಾನ್ಸರ್ ರೀತಿಯ ಕಾಯಿಲೆ ಇದ್ದಲ್ಲಿ ಮಂಪರು ಪರೀಕ್ಷೆ ಮಾಡೋದಿಲ್ಲ.
ಆಫ್ತಾಬ್ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಬಯಸಿದ್ದ ಶ್ರದ್ಧಾ, ವ್ಯಾಟ್ಸ್ಆ್ಯಪ್ ಚಾಟ್ ಬಹಿರಂಗ!
ಮಂಪರು ಪರೀಕ್ಷ ಹೇಗೆ ಮಾಡ್ತಾರೆ: ಇಂಜೆಕ್ಷನ್‌ನಲ್ಲಿ ಸೈಕೋಆಕ್ಟಿವ್ ಡ್ರಗ್ ಅನ್ನು ಬೆರೆಸಲಾಗುತ್ತದೆ, ಇದನ್ನು 'ಸತ್ಯ ಔಷಧ' ಎಂದೂ ಕರೆಯಲಾಗುತ್ತದೆ. ಇದರಲ್ಲಿ ಸೋಡಿಯಂ ಪೆಂಟೋಥಾಲ್ ಎಂಬ ರಾಸಾಯನಿಕ ಇರುತ್ತದೆ. ಇದು ರಕ್ತನಾಳಕ್ಕೆ ಸೇರಿದ ತಕ್ಷಣ ಕೆಲವು ನಿಮಿಷಗಳಿಂದ ದೀರ್ಘಕಾಲದವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿರುತ್ತಾನೆ. ಪ್ರಜ್ಞಾಹೀನತೆಯಿಂದ ಎದ್ದ ನಂತರ ಅವನು ಅರ್ಧ ಪ್ರಜ್ಞಾಹೀನ ಸ್ಥಿತಿಗೆ ಕೂಡ ಹೋಗಬಹುದು.ಈ ಸ್ಥಿತಿಯಲ್ಲಿ ಅವನು ಎಲ್ಲಾ ಸತ್ಯವನ್ನು ಹೇಳುತ್ತಾನೆ. ಈ ಪರೀಕ್ಷೆಗೆ ನೀಡುವ ಔಷಧಿ ತುಂಬಾ ಅಪಾಯಕಾರಿ. ಸ್ವಲ್ಪ ತಪ್ಪಿದರೆ ಸಾವು ಕೂಡ ಸಂಭವಿಸಬಹುದು, ಕೋಮಾಕ್ಕೆ ಕೂಡ ಹೋಗಬಹುದು. ಅಥವಾ ಜೀವನ ಪರ್ಯಂತ ಅಂಗವಿಕಲನಾಗಬಹುದು.
ಆರೋಪಿ ಸುಳ್ಳು ಹೇಳಿದರೆ ಗೊತ್ತಾಗೋದು ಹೇಗೆ: ಅರ್ಧ ಪ್ರಜ್ಞಾಹೀನ ಸ್ಥಿತಿಯಲ್ಲಿ ಆರೋಪಿ ಏನೇ ಮಾತನಾಡಿದರೂ ಅದು ಬಹುತೇಕ ಸತ್ಯ ಎಂದೇ ನಂಬಲಾಗುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ, ಚಾಣಾಕ್ಷ ಅಪರಾಧಿಗಳು ಇಂಥ ಸ್ಥಿತಿಯಲ್ಲೂ ಸುಳ್ಳು ಹೇಳುತ್ತಾರೆ. ನಿಥಾರಿ ಪ್ರಕರಣದ ಆರೋಪಿಗಳಿಗೆ ನಾರ್ಕೋ ಪರೀಕ್ಷೆಯನ್ನೂ ನಡೆಸಲಾಗಿತ್ತು, ಆದರೆ ಏನೂ ಸ್ಪಷ್ಟವಾಗಿರಲಿಲ್ಲ 2007 ರಲ್ಲಿ, ಹೈದರಾಬಾದ್ ಅವಳಿ ಸ್ಫೋಟದಲ್ಲಿ ಅಬ್ದುಲ್ ಕರೀಂ ಮತ್ತು ಇಮ್ರಾನ್‌ಗೆ ಅದೇ ಪರೀಕ್ಷೆಯನ್ನು ನಡೆಸಲಾಯಿತು, ಆದರೆ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಹೊರಬಂದಿರಲಿಲ್ಲ.
ಪೊಲೀಸರಿಗೆ ಹೇಗೆ ಸಹಾಯವಾಗುತ್ತದೆ: ಮಂಪರು ಪರೀಕ್ಷೆಯಲ್ಲಿ ಅಫ್ತಾಬ್ ಕೆಲ ಮಾಹಿತಿ ನೀಡಬಹುದು ಎನ್ನುವ ಭರವಸೆ ಪೊಲೀಸರಿಗೆ ಇದೆ. ಇಲ್ಲಿಯವರೆಗೆ ಅಫ್ತಾಬ್ ಹೆಚ್ಚಿನ ಮಾಹಿತಿಯನ್ನು ಪೊಲೀಸರಿಗೆ ಹೇಳಿಲ್ಲ. ಪ್ರತಿ ಬಾರಿ ಹೇಳಿಕೆ ನೀಡಿದಾಗಲೂ ಪೊಲೀಸರ ದಾರಿ ತಪ್ಪಿಸುತ್ತಿದ್ದಾನೆ. ಅದಕ್ಕಾಗಿ ಪೊಲೀಸರು 50ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರ ಪಡೆಯುವ ಇರಾದೆಯಲ್ಲಿದ್ದಾರೆ.
ಕೋರ್ಟ್‌ನಲ್ಲಿ ಈ ಹೇಳಿಕೆ ಮಾನ್ಯವೇ?: ಮಂಪರು ಪರೀಕ್ಷೆಯಲ್ಲಿ ಆರೋಪಿ ಹೇಳಿದ ಯಾವುದೇ ಮಾತುಗಳು ಕೂಡ ಕೋರ್ಟ್ ಮಾನ್ಯ ಮಾಡುವುದಿಲ್ಲ. ಮಂಪರು ಪರೀಕ್ಷೆಯಲ್ಲಿ ಅಫ್ತಾಬ್ ಸತ್ಯವನ್ನೇ ಹೇಳಿದರೂ, ಕೋರ್ಟ್ ಇದನ್ನು ಸಾಕ್ಷ್ಯ ಎಂದು ಪರಿಗಣನೆ ಮಾಡೋದಿಲ್ಲ. ಅಫ್ತಾಬ್ ಹೇಳಿದ ಮಾತುಗಳನ್ನು ಆಲಿಸಿ, ಪೊಲೀಸರು ಸಾಕ್ಷ್ಯವನ್ನು ಸಂಗ್ರಹಣೆ ಮಾಡಬೇಕು. ಇದನ್ನು ಕೋರ್ಟ್ ಸಾಕ್ಷಿ ಎನ್ನುತ್ತದೆ. ಕೆಲವೊಂದು ಸಂದರ್ಭದಲ್ಲಿ ಮಂಪರು ಪರೀಕ್ಷೆಯ ಹೇಳಿಕೆಯನ್ನು ಕೋರ್ಟ್ ಸಾಕ್ಷಿಯಾಗಿ ಪರಿಣಿಸುವ ಅವಕಾಶವೂ ಇದೆ.
ಎಷ್ಟು ಬಾರಿ ಮಂಪರು ಪರೀಕ್ಷೆ ನಡೆದಿದೆ: ಭಾರತದಲ್ಲಿ ಹಲವು ಬಾರಿ ಮಂಪರು ಪರೀಕ್ಷೆ ನಡೆದಿದೆ. ಮುಂಬೈ ದಾಳಿ ಪ್ರಕರಣದಲ್ಲಿ ಅಜ್ಮಲ್ ಕಸಬ್, ನಿಥಾರಿ ಘಟನೆಯಲ್ಲಿ ಮಂಪರು ಪರೀಕ್ಷೆ ನಡೆಸಲಾಗಿತ್ತು.