
ಬೆಂಗಳೂರು (ನ.21): ಮಗಳಿಗೆ ನಗರದ ಪ್ರತಿಷ್ಠಿತ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ ದುಷ್ಕರ್ಮಿಯೊಬ್ಬ ಇಸ್ರೋ ಸಂಸ್ಥೆಯ ವಿಜ್ಞಾನಿಯಿಂದ 18 ಲಕ್ಷ ಪಡೆದು ವಂಚಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಮುಂಬೈ ನಗರದ ಸಿಜಿಎಸ್ ಕಾಲೋನಿ ನಿವಾಸಿ ಚಿದಾನಂದ ಶಿವಪ್ಪ ಮಗ್ದುಮ್ (48) ವಂಚನೆಗೆ ಒಳಗಾದ ಇಸ್ರೋ ವಿಜ್ಞಾನಿ. ಚಿದಾನಂದ ಅವರು ನೀಡಿದ ದೂರಿನ ಮೇರೆಗೆ ಅರುಣ್ ದಾಸ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಉಪ್ಪಾರಪೇಟೆ ಠಾಣೆ ಪೊಲೀಸರು, ವಂಚಕನ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಮೂಲದ ಚಿದಾನಂದ ಅವರು ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಪುತ್ರಿ ಎಂಬಿಬಿಎಸ್ ಕೋರ್ಸ್‌ಗೆ ಸೇರಲು ಸಿದ್ಧತೆ ನಡೆಸುತ್ತಿದ್ದಳು. ಈ ನಡುವೆ ಎರಡು ತಿಂಗಳ ಹಿಂದೆ ಆರೋಪಿ ಅರುಣ್ ದಾಸ್ ಎಂಬಾತ ಚಿದಾನಂದ ಅವರ ಮೊಬೈಲ್‌ಗೆ ಕರೆ ಮಾಡಿದ್ದು, ತಾನು ಕನ್ಸಲ್ಟೆಂಟ್ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡು ತಮ್ಮ ಮಗಳಿಗೆ ಎಂಬಿಬಿಎಸ್‌ಗೆ ಸೀಟು ಕೊಡಿಸುವುದಾಗಿ ನಂಬಿಸಿದ್ದಾನೆ.
ಸಿದ್ದು ಅವಧಿಯ ಚಿಲುಮೆ ವ್ಯವಹಾರವೂ ತನಿಖೆ: ಸಿಎಂ ಬೊಮ್ಮಾಯಿ
ವಿಜ್ಞಾನಿಯ ಮನೆಗೆ 2 ಬಾರಿ ಭೇಟಿ: ಇದಾದ ಕೆಲ ದಿನಗಳ ಬಳಿಕ ಮುಂಬೈನಲ್ಲಿರುವ ಚಿದಾನಂದ ಅವರ ಮನೆಗೆ ಎರಡು ಬಾರಿ ಭೇಟಿ ನೀಡಿ ಮಗಳ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಿದ್ದಾನೆ. ನಂತರ ‘ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜ್‌ನಲ್ಲಿ ತಮ್ಮ ಮಗಳಿಗೆ ಎಂಬಿಬಿಎಸ್ ಸೀಟು ಕೊಡಿಸುತ್ತೇನೆ, ಇದಕ್ಕೆ .10 ಲಕ್ಷ ಕಾಲೇಜು ಶುಲ್ಕ ಮತ್ತು .18 ಲಕ್ಷ ಡೊನೇಶನ್ ಕೊಡಬೇಕು’ ಎಂದು ಹೇಳಿದ್ದಾನೆ.
ಆರೋಪಿ ಅರುಣ್‌ದಾಸ್ ನ.10ರಂದು ಚಿದಾನಂದ ಅವರ ಮೊಬೈಲ್‌ಗೆ ಕರೆ ಮಾಡಿ, ನ.12ರಂದು ಕಾಲೇಜಿಗೆ ತಮ್ಮ ಮಗಳನ್ನು ದಾಖಲು ಮಾಡಲಾಗುವುದು. .18 ಲಕ್ಷ ಹಣ ತೆಗೆದುಕೊಂಡು ಬೆಂಗಳೂರಿಗೆ ಬನ್ನಿ ಎಂದು ಹೇಳಿದ್ದಾನೆ. ಈತನ ಮಾತು ನಂಬಿದ ಚಿದಾನಂದ ಅವರು ಮಗಳು ಹಾಗೂ ತಮ್ಮ ಸಂಬಂಧಿಕ ನಿಂಗಪ್ಪ ಕಮಟೆ ಎಂಬುವವರ ಜತೆಗೆ .18 ಲಕ್ಷ ಹಣ ತೆಗೆದುಕೊಂಡು ನ.12ರಂದು ಬೆಂಗಳೂರಿಗೆ ಬಂದಿದ್ದಾರೆ. ಗಾಂಧಿನಗರದ ಚೇತನ್ ಇಂಟರ್ ನ್ಯಾಷನಲ್ ಹೋಟೆಲ್ ರೂಮ್ ಸಂಖ್ಯೆ 106ರಲ್ಲಿ ಮಧ್ಯಾಹ್ನ 12.45ರ ಸುಮಾರಿಗೆ ಆರೋಪಿ ಅರುಣ್‌ದಾಸ್‌ನನ್ನು ಭೇಟಿ ಮಾಡಿದ್ದಾರೆ.
ತಾಕತ್ತಿದ್ದರೆ ಬನ್ನಿ ನೋಡೋಣ, ನಾವೇನ್ ಬಳೆ ತೊಡ್ಕೊಂಡಿದ್ದೀವಾ: ಸಚಿವ ಶ್ರೀರಾಮುಲು
ಟ್ರಸ್ಟ್‌ಗೆ ಹಣ ಪಾವತಿ ನೆಪದಲ್ಲಿ ಎಸ್ಕೇಪ್: ನಂತರ ಚಿದಾನಂದ ಅವರಿಂದ 18 ಲಕ್ಷ ಪಡೆದ ಅರುಣ್ ದಾಸ್, ಫೆಡರಲ್ ಬ್ಯಾಂಕ್‌ನ ಒಂದು ಚೆಕ್ಕನ್ನು ಚಿದಾನಂದ ಅವರಿಗೆ ನೀಡಿದ್ದಾನೆ. ವಿಜಯ ನಗರಕ್ಕೆ ತೆರಳಿ ಈ ಹಣವನ್ನು ಟ್ರಸ್ಟ್‌ಗೆ ಪಾವತಿಸಿ ಬರುವುದಾಗಿ ಹೇಳಿ ಹೋಟೆಲ್‌ನಿಂದ ಕಾಲ್ಕಿತ್ತಿದ್ದಾನೆ. ಮಧ್ಯಾಹ್ನ 2 ಗಂಟೆಯಾದರೂ ಆರೋಪಿ ವಾಪಸ್ ಬರಲಿಲ್ಲ. ಆತನ ಮೊಬೈಲ್‌ಗೆ ಚಿದಾನಂದ ಅವರು ಕರೆ ಮಾಡಿದ್ದು, ಸ್ವಿಚ್ ಆಫ್ ಬಂದಿದೆ. ಹತ್ತಾರು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ನಂತರ ತಾವು ವಂಚನೆಗೆ ಒಳಗಾಗಿರುವುದು ಚಿದಾನಂದ ಅವರಿಗೆ ಮನವರಿಕೆಯಾಗಿದೆ. ಬಳಿಕ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ