Shraddha Walker Murder: ಶ್ರದ್ಧಾಳನ್ನು ಕತ್ತರಿಸಲು ಅಫ್ತಾಭ್‌ ಬಳಸಿದ್ದ 5 ಚೂರಿ ಪತ್ತೆ!

By Santosh NaikFirst Published Nov 24, 2022, 7:21 PM IST
Highlights

ದೆಹಲಿಯ ಕುಖ್ಯಾತ 35 ಪೀಸ್‌ ಮರ್ಡರ್‌ ಪ್ರಕರಣದಲ್ಲಿ ಗುರುವಾರ ಪೊಲೀಸರಿಗೆ ಮಹತ್ವದ ದಾಖಲೆ ಸಿಕ್ಕಿದೆ. ಗೆಳತಿ ಶ್ರದ್ಧಾ ವಾಕರ್‌ಳನ್ನು ಕೊಲೆ ಮಾಡಿದ್ದಲ್ಲದೆ, ಆಕೆಯನ್ನು ಕತ್ತರಿಸಲು ಅಫ್ತಾಬ್‌ ಅಮಿನ್‌ ಪೂನಾವಾಲಾ ಬಳಸಿದ್ದ 5 ಚೂರಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
 

ನವದೆಹಲಿ (ನ.24): ಇಡೀ ದೇಶದ ಗಮನ ಸೆಳೆದಿದ್ದ ದೇಶದ ಅತ್ಯಂತ ಕುಖ್ಯಾತ ದೆಹಲಿಯ 35 ಪೀಸ್‌ ಮರ್ಡರ್‌ ಪ್ರಕರಣದಲ್ಲಿ ಗುರುವಾರ ಪೊಲೀಸರಿಗೆ ಮಹತ್ವದ ಸಾಕ್ಷ್ಯ ಸಿಕ್ಕಿದೆ. ಶ್ರದ್ಧಾ ವಾಕರ್‌ಳನ್ನು ಕೊಲೆ ಮಾಡಿದ್ದಲ್ಲದೆ, ಆಕೆಯನ್ನು ಕತ್ತರಿಸಲು ಆರೋಪಿ ಅಫ್ತಾಬ್‌ ಅಮಿನ್‌ ಪೂನಾವಾಲಾ ಸಾಕಷ್ಟು ಚೂರಿಗಳನ್ನು ಬಳಸಿದ್ದ. ಇವುಗಳಲ್ಲಿ ಐದು ಚೂರಿಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಐದು ಚೂರಿಗಳು ದೊರೆತಿದ್ದು, ಇನ್ನೂ ಕೆಲವು ಚೂರಿಗಳ ಶೋಧ ಕಾರ್ಯ ಆರಂಭವಾಗಿದೆ ಎಂದು ದೆಹಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ. ಇದು ದೇಶವನ್ನೇ ಆಘಾತಕ್ಕೆ ನೂಕಿದ್ದ ಕೊಲೆ ಪ್ರಕರಣದ ಹೊಸ ವಿಚಾರಗಳಾಗಿವೆ. ತಲಾ 5-6 ಇಂಚು ಉದ್ದದ ಐದು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಲ್ಲದೆ, ಆಕೆಯನ್ನು ಗರಗಸದಿಂದಲೂ ಆತ ಕೊಯ್ದಿದ್ದ ಅದರ ಹುಡುಕಾಟ ಕೂಡ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆ ಸಾವು ಕಂಡ ಬಳಿಕ ಆಕೆಯನ್ನು ಮೊದಲಿಗೆ ಗರಗಸದಲ್ಲಿ ಅಫ್ತಾಭ್‌ ಕೊಯ್ದಿದ್ದ. ಪ್ರಸ್ತುತ ಈ ಗರಗಸ ನಾಪತ್ತೆಯಾಗಿದೆ. ಸ್ವತಃ ಅಫ್ತಾಬ್‌ ಪೂನಾವಾಲಾ, ಶ್ರದ್ಧಾಳ ದೇಹವನ್ನು ತುಂಡು ಮಾಡಲು ಸಾಕಷ್ಟು ಚೂರಿಗಳನ್ನು ಬಳಸಿದ್ದೆ ಎಂದು ತಿಳಿಸಿದ್ದ ಎಂದು ಸ್ವತಃ ದೆಹಲಿ ಪೊಲೀಸರು ಹೇಳಿದ್ದಾರೆ. 'ಕಳೆದ ಕೆಲವು ದಿನಗಳಲ್ಲಿ ಪೊಲೀಸರು ಶ್ರದ್ಧಾ ವಾಕರ್‌ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಕಂಡುಹಿಡಿಯಲು ಯಶಸ್ವಿಯಾಗಿದ್ದಾರೆ. ಐದು ದೊಡ್ಡ ಚೂರಿಗಳನ್ನು ಪೊಲೀಸರು ಪತ್ತೆ ಮಾಡಿದ್ದು, ಇದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತನಿಖೆಗಾಗಿ ಕಳುಹಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನಲ್ಲೂ ಪೊಲೀಸರ ತನಿಖೆ: ಈ ನಡುವೆ ಅಫ್ತಾಭ್‌ ಪೂನಾವಾಲಾ ಅವರ ಇಡೀ ಕುಟುಂಬ ಮುಂಬೈನ ವಸೈನಲ್ಲಿ ವಾಸವಾಗಿದೆ. ದೆಹಲಿ ಪೊಲೀಸರ ಒಂದು ತಂಡ ಗುರುವಾರ ಮುಂಬೈಗೆ ಆಗಮಿಸಿ ತನಿಖೆ ನಡೆಸಿದೆ. ಮುಂಬೈನ ಭಯಂದರ್‌ ಬಳಿ ಆತ ಶ್ರದ್ಧಾಳ ಮೊಬೈಲ್‌ಅನ್ನು ಎಸೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಡೈವರ್‌ಗಳನ್ನು ಕರೆಸಿದ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಸಿಗರೇಟ್‌ಗಳಿಂದ ಶ್ರದ್ಧಾಳನ್ನು ಸುಟ್ಟಿದ್ದ ಅಫ್ತಾಭ್‌: ಇನ್ನು ಶ್ರದ್ಧಾಳಿಗೆ ಆತ ಎಷ್ಟೆಲ್ಲಾ ಹಿಂಸೆ ಕೊಟ್ಟಿದ್ದ ಎನ್ನುವ ಒಂದೊಂದೆ ಮಾಹಿತಿಗಳು ಬಹಿರಂಗವಾಗಿದೆ. ಶ್ರದ್ಧಾಳ ಸ್ನೇಹಿತ ರಜತ್‌ ಶುಕ್ಲಾ ಎಬಿಪಿಗೆ ಮಾತನಾಡಿದ್ದು, ಅಫ್ತಾಭ್‌ ಆಕೆಯ ದೇಹವನ್ನು ಸಿಗರೇಟ್‌ನಿಂದ ಸುಡುತ್ತಿದ್ದ. ಪ್ರತಿ ಬಾರಿಯೂ ಶ್ರದ್ಧಾ ಆತನ ಹಿಂಸೆಯ ಬಗ್ಗೆ ದೂರು ಹೇಳುತ್ತಿದ್ದಳಾದರೂ, ಆಕೆಗೆ ಪ್ರತಿ ಬಾರಿಯೂ ಅವನು ಸರಿಯಾಗುವ ನಿಟ್ಟಿನಲ್ಲಿ ಇನ್ನೊಂದು ಅವಕಾಶ ನೀಡುವ ಮಾತನಾಡುತ್ತಿದ್ದಳು ಎಂದಿದ್ದಾರೆ.

ಶ್ರದ್ಧಾಳ ತಲೆಬರುಡೆಗಾಗಿ ಕೊಳದಲ್ಲಿ ಶೋಧ, ಮೆಹ್ರೌಲಿ ಅರಣ್ಯದಿಂದ ಈವರೆಗೂ 17 ಮೂಳೆಗಳು ಪತ್ತೆ!

ಪಾಲಿಗ್ರಫಿ ಟೆಸ್ಟ್‌ಗೆ ಒಳಗಾದ ಅಫ್ತಾಬ್‌: ಅಫ್ತಾಬ್‌ನ ಪಾಲಿಗ್ರಾಫ್ ಪರೀಕ್ಷೆ ಕೂಡ ನಡೆಯುತ್ತಿದೆ ಮತ್ತು ಇದರ ಹೆಚ್ಚಿನ ಅವಧಿಗಳು ಕೂಡ ಇರಬಹುದು. ಫೋರೆನ್ಸಿಕ್ ಲ್ಯಾಬ್ ನಿರ್ದೇಶಕಿ ಎಫ್‌ಎಸ್‌ಎಲ್ ನಿರ್ದೇಶಕಿ ದೀಪಾ ವರ್ಮಾ ಈ ಕುರಿತಾಗಿ ಮಾತನಾಡಿದ್ದು, ಗುರುವಾರ ರಾತ್ರಿವರೆಗೂ ಪರೀಕ್ಷೆ ನಡೆಯಬಹುದು. ಅಗತ್ಯವಿದ್ದರೆ, ಪರೀಕ್ಷೆಯನ್ನು ನಾಳೆ ಮುಂದುವರಿಸಬಹುದು. ಇದರ ನಂತರ, ಪಾಲಿಗ್ರಾಫ್ ನಂತರದ ಪರೀಕ್ಷೆಯೂ ಇರುತ್ತದೆ. ನಾರ್ಕೋ ಪರೀಕ್ಷೆಯನ್ನು ಯಾವಾಗ ನಡೆಸಬೇಕು ಎಂಬುದನ್ನು ತಜ್ಞರ ಸಾಮೂಹಿಕ ತಂಡ ನಿರ್ಧರಿಸುತ್ತದೆ ಎಂದು ವರ್ಮಾ ತಿಳಿಸಿದ್ದಾರೆ. 

ಮುಂಜಾನೆ 4 ಗಂಟೆಗೆ ಬ್ಯಾಗ್‌ ಹಿಡಿದು ಹೊರಟಿದ್ದ ಅಫ್ತಾಬ್‌, ಸಿಸಿಟಿವಿ ದೃಶ್ಯಾವಳಿ ಬಿಡುಗಡೆ!

ಏನಿದು ಪ್ರಕರಣ: ಈ ವರ್ಷದ ಆರಂಭದಲ್ಲಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ತನ್ನ ಗೆಳತಿ ಶ್ರದ್ಧಾ ವಾಕರ್‌ಳನ್ನು ಕತ್ತು ಹಿಸುಕಿ ಕೊಂದಿದ್ದ ಅಫ್ತಾಭ್‌ ಪೂನಾವಾಲಾ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ. ಬಳಿಕ ಆಕೆಯ ದೇಹದ ಪೀಸ್‌ಗಳನ್ನು 300 ಲೀಟರ್‌ನ ಫ್ರಿಜ್‌ನಲ್ಲಿ ಇರಿಸಿದ್ದ ಅಫ್ತಾಭ್‌, ಮೂರು ವಾರಗಳ ಕಾಲ ಒಂದೊಂದೇ ಪೀಸ್‌ಗಳನ್ನು ಕೆಲವು ಪ್ರದೇಶಗಳು, ಅರಣ್ಯಗಳಲ್ಲಿ ಎಸೆದಿದ್ದ.

click me!