ಡೆಲ್ಲಿಯ 25 ಪೀಸ್ ಮರ್ಡರ್ ಪ್ರಕರಣದಲ್ಲಿ ದೆಹಲಿ ಪೊಲೀಸರಿಗೆ ಮಹತ್ವದ ಸಾಕ್ಷ್ಯ ಪತ್ತೆಯಾಗಿದೆ. ಶ್ರದ್ಧಾ ವಾಕರ್‌ಳ ದೇಹವನ್ನು ಕತ್ತರಿಸಲು ಬಳಸಿದ್ದ ಆಯುದ್ಧ ಪತ್ತೆಯಾಗಿದ್ದು ಮಾತ್ರವಲ್ಲದೆ, ಅಫ್ತಾಬ್ ಪೂನಾವಾಲಾನ ಆಕೆಯ ಉಂಗುರವನ್ನು ಮತ್ತೊಬ್ಬ ಗೆಳತಿಗೆ ಗಿಫ್ಟ್ ಮಾಡಿದ್ದ ಎನ್ನುವುದು ಬಹಿರಂಗವಾಗಿದೆ.
ನವದೆಹಲಿ (ನ.28): ಶ್ರದ್ಧಾ ವಾಕರ್ ಕೊಲೆ ಪ್ರಕರಣ ಸುದ್ದಿಯಾದ 17 ದಿನಗಳ ಬಳಿಕ ದೆಹಲಿ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಶ್ರದ್ಧಾಳನ್ನು ಕೊಲೆ ಮಾಡಿದ ಬಳಿಕ, ಆಕೆಯ ದೇಹವನ್ನು ಕತ್ತರಿಸಲು ಬಳಸಿದ ಆಯುಧವನ್ನು ದೆಹಲಿ ಪೊಲೀಸರು ಸೋಮವಾರ ಪತ್ತೆ ಮಾಡಿದ್ದಾರೆ. ಇದರೊಂದಿಗೆ ದೆಹಲಿ ಪೊಲೀಸರು ಶ್ರದ್ಧಾ ವಾಕರ್‌ನ ಬೆರಳಲ್ಲಿ ಇದ್ದ ಉಂಗುರವನ್ನು ಪತ್ತೆ ಮಾಡಿದ್ದಾರೆ. ಶ್ರದ್ಧಾಳನ್ನು ಕೊಲೆ ಮಾಡಿ ಕತ್ತರಿಸಿದ ಬಳಿಕ, ಆಕೆಯ ಉಂಗುರವನ್ನು ಅಫ್ತಾಬ್ ಅಮಿನ್ ಪೂನಾವಾಲಾ ಇನ್ಬೊಬ್ಬ ಗೆಳತಿಗೆ ನೀಡಿದ್ದ ಅದನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ. ಕೊಲೆಯಾದ ದಿನದಿಂದ ಈ ಹುಡುಗಿ ಅಫ್ತಾಭ್‌ನ ಮನೆಗೆ ಬರುತ್ತಿದ್ದಳು. ಈ ವೇಳೆ ಅಫ್ತಾಭ್ ವಾಸ ಮಾಡುತ್ತಿದ್ದ ಫ್ಲ್ಯಾಟ್‌ನಲ್ಲಿಯೇ ಶ್ರದ್ಧಾಳದ ದೇಹದ ಭಾಗಗಳು ಫ್ರಿಡ್ಜ್‌ನಲ್ಲಿ ಇದ್ದವು. ಡೇಟಿಂಗ್ ಅಪ್ಲಿಕೇಷನ್ ಮೂಲಕ ಅಫ್ತಾಬ್ ಇನ್ನೊಬ್ಬ ಗೆಳತಿಯ ಸಂಪರ್ಕ ಸಾಧಿಸಿಕೊಂಡಿದ್ದ ಎನ್ನುವುದು ಈಗಾಗಲೇ ಬಹಿರಂಗವಾಗಿತ್ತು. ಇನ್ನೊಂದೆಡೆ ಸೋಮವಾರ ಅಫ್ತಾಬ್ ಪೂನಾವಾಲಾನ ಪಾಲಿಗ್ರಫಿ ಟೆಸ್ಟ್ ಕೂಡ ನಡೆದಿದೆ. ಬೆಳಗ್ಗೆಯೇ ಆತನನ್ನು ತಿಹಾರ್ ಜೈಲಿನಲ್ಲಿ ರೋಹಿಣಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆತರಲಾಗಿತ್ತು ಎನ್ನುವ ಮಾಹಿತಿ ಸಿಕ್ಕಿದೆ.
ನವೆಂಬರ್ 22 ರಂದು ಘಟನೆಯ ಕುರಿತಾಗಿ ಮೊದಲ ಪಾಲಿಗ್ರಫಿ ಟೆಸ್ಟ್ ನಡೆದಿದ್ದರೆ, 24 ಹಾಗೂ 25 ರಂದು ನಂತರದ ಎರಡು ಪರೀಕ್ಷೆಗಳು ನಡೆದಿದ್ದವು. ಅಫ್ತಾಬ್‌ಗೆ ಈವರೆಗೂ 40 ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಹೇಳಲಾಗಿದೆ.
ಸ್ನೇಹಿತರಿಗೆ ಬ್ರೇಕ್‌ಅಪ್ ಎಂದು ನಂಬಿಸಿದ್ದ: ಶ್ರದ್ಧಾ ವಾಕರ್‌ಳನ್ನು ಕೊಲೆ ಮಾಡಿ ಪೀಸ್ ಮಾಡಿದ ಬಳಿಕ, ಆಕೆಯ ಸ್ನೇಹಿತರಿಗೆ ತಾನು ಆಕೆಯೊಂದಿಗೆ ಬ್ರೇಕ್‌ಅಪ್ ಮಾಡಿಕೊಂಡಿರುವುದಾಗಿ ತಿಳಿಸಿದ್ದ, ಮುಂಬೈನಲ್ಲಿರುವ ಆಕೆಯ ಸ್ನೇಹಿತರು ಹಾಗೂ ಸ್ನೇಹಿತೆಯರಿಗೆ ಬ್ರೇಕಪ್‌ನ ಕಥೆ ಕಟ್ಟಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೊಲೆಗೆ ಸಹಾಯ ಮಾಡಿದ್ದ ಇನ್ನೊಬ್ಬ ವ್ಯಕ್ತಿ: ಶ್ರದ್ಧಾ ವಾಕರ್‌ಳನ್ನು ಕೊಲೆ ಮಾಡಲು ಅಫ್ತಾಬ್‌ಗೆ ಇನ್ನೊಬ್ಬ ವ್ಯಕ್ತಿ ಕೂಡ ಸಹಾಯ ಮಾಡಿದ್ದ ಎನ್ನುವುದು ಬಹಿರಂಗವಾಗಿದೆ. ಸಂಪೂರ್ಣ ಸಾಕ್ಷ್ಯವನ್ನು ನಾಶ ಮಾಡಲು ಅಫ್ತಾಬ್‌ಗೆ ಆತ ಸಹಾಯ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಅಫ್ತಾಬ್ ಒಬ್ಬನೇ ಇಷ್ಟೇ ಸಾಕ್ಷ್ಯಗಳನ್ನು ನಾಶ ಮಾಡಲು ಸಾಧ್ಯವೇ ಇಲ್ಲ. ಪೊಲೀಸರು ಈ ಕುರಿತಾಗಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಆದರೆ, ಯಾವ ಅಧಾರದಲ್ಲಿ ಈ ಕಥೆ ಹೇಳಿದ್ದಾನೆ ಎನ್ನುವುದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.
Shraddha Walker Murder: ಶ್ರದ್ಧಾಳನ್ನು ಕತ್ತರಿಸಲು ಅಫ್ತಾಭ್ ಬಳಸಿದ್ದ 5 ಚೂರಿ ಪತ್ತೆ!
ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ಅಫ್ತಾಬ್: ಈ ನಡುವೆ ಗುಜರಾತ್ ಪೊಲೀಸ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಫೈಜಲ್ ಮೊಮಿನ್‌ರನ್ನು ಸೋಮವಾರ ಬಂಧಿಸಿದ್ದಾರೆ. ಸ್ವತಃ ಈತನಿಂದಲೇ ಅಫ್ತಾಬ್ ಡ್ರಗ್ಸ್ ಪಡೆದುಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಆದರೆ, ಈ ಡ್ರಗ್ಸ್‌ಅನ್ನು ಅಫ್ತಾಭ್ ಸೇವಿಸುತ್ತಿದ್ದನೇ, ಇಲ್ಲವೇ ಎನ್ನುವುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಈ ಕುರಿತಾಗಿಯೂ ತನಿಖೆ ನಡೆಯುತ್ತಿದೆ.
Shraddha Walker Murder Case: ಅಫ್ತಾಬ್‌ಗೆ ಪಾಲಿಗ್ರಾಫ್ ಪರೀಕ್ಷೆ ಮಾಡಲು ದೆಹಲಿ ಪೊಲೀಸರಿಗೆ ಕೋರ್ಟ್ ಅನುಮತಿ
ದಿನದ 24 ಗಂಟೆಯೂ ಅಫ್ತಾಬ್‌ಗೆ ರಕ್ಷಣೆ: ಅಫ್ತಾಬ್ ಸದ್ಯ ತಿಹಾರ್ ಜೈಲಿನಲ್ಲಿದ್ದಾನೆ. ಜೈಲಿನ ಸೆಲ್ ನಂಬರ್ 4ರಲ್ಲಿ ಅಫ್ತಾಬ್ ಏಕಾಂಗಿಯಾಗಿರುತ್ತಾನೆ ಎಂದು ಜೈಲಿನ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಮಾಡಿವೆ. ಪ್ರತ್ಯೇಕ ಸೆಲ್‌ನಲ್ಲಿ ಒಬ್ಬನೇ ಖೈದಿ ಇರಲಿದ್ದು, ಆ ಸೆಲ್‌ನಿಂದ ಆತನನ್ನು ಶೀಘ್ರವಾಗಿ ಹೊರತರುವ ಸಾಧ್ಯತೆಗಳಿಲ್ಲ ಎಂದು ಮೂಲಗಳು ತಿಳಿಸಿವೆ. ಪೊಲೀಸರ ಸಮ್ಮುಖದಲ್ಲಿಯೇ ಅಫ್ತಾಬ್‌ಗೆ ಆಹಾರ ನೀಡಲಾಗುತ್ತಿದೆ. ಭದ್ರತಾ ಸಿಬ್ಬಂದಿಯನ್ನು 24 ಗಂಟೆಗಳ ಕಾಲ ಅವನ ಸೆಲ್‌ನ ಹೊರಗಡೆ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಇಲ್ಲಿ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳ ಮೂಲಕ ಆರೋಪಿಗಳ ಮೇಲೆ 24 ಗಂಟೆಗಳ ಕಾಲ ನಿಗಾ ಇಡಲಾಗುತ್ತಿದೆ.