ಸಂಬಂಧಿಕರನ್ನು ಮಗನ ಮದುವೆಗೆ ಆಹ್ವಾನಿಸಲು ಮೈಸೂರಿಗೆ ತೆರಳಿದ್ದ ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಸಮೀಪದ ಸಂತೆಕೊಪ್ಪದ ಸೀತಾರಾಮ ಎಸ್. ಬೆಳಂದೂರ್ (62) ಬಸ್ಸಿನಲ್ಲೇ ಹೃದಯಾಘಾತವಾಗಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ತೀರ್ಥಹಳ್ಳಿ: (ನ.28): ಸಂಬಂಧಿಕರನ್ನು ಮಗನ ಮದುವೆಗೆ ಆಹ್ವಾನಿಸಲು ಮೈಸೂರಿಗೆ ತೆರಳಿದ್ದ ತಾಲೂಕಿನ ವ್ಯಕ್ತಿಗೆ ಬಸ್ಸಿನಲ್ಲೇ ಹೃದಯಾಘಾತವಾಗಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ತಾಲೂಕಿನ ಹೆದ್ದೂರು ಸಮೀಪದ ಸಂತೆಕೊಪ್ಪದ ಸೀತಾರಾಮ ಎಸ್. ಬೆಳಂದೂರ್ (62) ಮೃತವ್ಯಕ್ತಿ. ಫೆ.19ರಂದು ಮಗನ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಸಂಬಂಧಿಕರನ್ನು ಆಹ್ವಾನಿಸಲು ಭಾನುವಾರ ಮೈಸೂರಿಗೆ ತೆರಳಿದ್ದರು. ಸ್ನೇಹಿತರ ಮನೆಯಲ್ಲಿ ತಂಗಿದ್ದ ಅವರು ಸೋಮವಾರ ಬೆಳಗ್ಗೆ ಮೈಸೂರು ಸಮೀಪದ ಶ್ರೀರಂಗಪಟ್ಟಣದ ಸಂಬಂಧಿಕರ ಮನೆಗೆ ಬಸ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಬೆಂಗಳೂರು ರಸ್ತೆಯ ಮೈಸೂರಿನ ಬನ್ನಿ ಮಂಟಪದ ಬಳಿ ಬಸ್ಸಿನಲ್ಲೇ ಹೃದಯಾಘಾತವಾಗಿ ಮೃತರಾಗಿದ್ದಾರೆ.
ಬಸ್ ಚಾಲಕ ಮೃತರ ಬಳಿಯಿದ್ದ ಆಹ್ವಾನ ಪತ್ರಿಕೆಯಲ್ಲಿ ದೂರವಾಣಿ ಮೂಲಕ ಬೆಂಗಳೂರಿನಲ್ಲಿರುವ ಸೀತಾರಾಮ್ ಪುತ್ರ ಸುಮುಖ ಭಾರ್ಗವ ಅವರನ್ನು ಸಂಪರ್ಕಿಸಿ, ವಿಷಯ ತಿಳಿಸಿದರು. ಮಾಹಿತಿ ಮೇರೆಗೆ ಮೈಸೂರಿಗೆ ಧಾವಿಸಿದ ಸುಮುಖ ಭಾರ್ಗವ ತಂದೆಯ ಮೃತದೇಹವನ್ನು ಅವರ ಸ್ವಗ್ರಾಮಕ್ಕೆ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ತರಲಾಗಿದ್ದು, ರಾತ್ರಿ ಅಂತಿಮಕ್ರಿಯೆ ನಡೆಸಲಾಗಿದೆ.
ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿ ಮತ್ತು ಸಂಘಟನೆ ಪ್ರಮುಖರು ಮೃತರ ಅಂತಿಮ ದರ್ಶನ ಪಡೆದು, ಸಂತಾಪ ವ್ಯಕ್ತಪಡಿಸಿದರು.
ಸಮಾಜಸೇವೆ:
ಸೀತಾರಾಮ ಎಸ್. ಬೆಳಂದೂರು ಅವರು ಸಮಾಜಮುಖಿ ಕಾರ್ಯದಲ್ಲೂ ತೊಡಗಿದ್ದರು. ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು. ಸೇವಾಭಾರತಿ ಸಂಘಟನೆಯಿಂದ ನಡೆಯುವ ಮಹಿಳೆಯರಿಗೆ ಹೊಲಿಗೆ ಕಲಿಸುವ ಮುಂತಾದ ಸೇವಾ ಕಾರ್ಯಗಳಲ್ಲಿದ್ದರು.