
ಗುಂಡ್ಲುಪೇಟೆ (ನ.28): ಕೌಟುಂಬಿಕ ಕಲಹಕ್ಕೆ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ದರ್ಶನ್ ಲೇಔಟ್‌ನಲ್ಲಿ ವಾಸವಿದ್ದ ಮಹೇಶ್ವರಿ ಆಲಿಯಾಸ್ ಸ್ವಾತಿ (25) ಆತ್ಮಹತ್ಯೆಗೆ ಶರಣಾದ ಮಹಿಳೆ.
ತಾಲೂಕಿನ ಬೇಗೂರು ಗ್ರಾಮದ ನಿವಾಸಿ ಚಾಲಕರಾಗಿರುವ ಸುರೇಶ್ ಹಾಗು ಮಂಜುಳರ ಪುತ್ರಿ ಮಹೇಶ್ವರಿ ಆಲಿಯಾಸ್ ಸ್ವಾತಿಯಾಗಿದ್ದು, ಈಕೆ ತಾಲೂಕಿನ ಹಂಗಳ ಗ್ರಾಮದ ವಿನಯ್ ಜೊತೆ ಕಳೆದ ಆರೇಳು ತಿಂಗಳ ಹಿಂದೆ ವಿವಾಹವಾಗಿತ್ತು.
ಸೋಮವಾರ ಮಧ್ಯಾಹ್ನ ಮಹೇಶ್ವರಿ ಆಲಿಯಾಸ್ ಸ್ವಾತಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ.
ಕುಟುಂಬಸ್ಥರ ಆಕ್ರಂದನ:
ಸ್ವಾತಿಯ ಸಾವಿನ ವಿಚಾರ ತಿಳಿದ ಪೋಷಕರು ಹಾಗೂ ಗ್ರಾಮದ ಮುಖಂಡರು ಧಾವಿಸಿದರು. ಬಳಿಕ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.
ಮದುವೆಯಾದ ಆರೇಳು ತಿಂಗಳಿಂದಲೂ ಸ್ವಾತಿಯನ್ನು ತನ್ನ ತಂದೆಯ ಮನೆಗೆ (ಬೇಗೂರು) ಪತಿ ವಿನಯ್ ಕಳುಹಿಸಿರಲಿಲ್ಲ ಎನ್ನಲಾಗಿದೆ.
ಮೃತ ಸ್ವಾತಿಗೆ ಅತ್ತೆ ನಂದಿನಿ ಸಹ ಕಿರುಕುಳ ನೀಡುತ್ತಿದ್ದರು, ತಮ್ಮ ಮಗಳನ್ನ ನೇಣು ಹಾಕಿ ಸಾಯಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಮೃತ ಸ್ವಾತಿ ಸಾಯುವ ಮುನ್ನ ಕೆಲ ತಾಸಿನ ಹಿಂದೆ ತಾಯಿ ಮಂಜುಳಾಗೆ ಮೊಬೈಲ್ ಮೂಲಕ ಕೆಲ ಕಾಲ ಮಾತನಾಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ವಿವರ ತಿಳಿದು ಬಂದಿಲ್ಲ.
ಡೆತ್ ನೋಟ್ ಪತ್ತೆ
ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹೇಶ್ವರಿ ಆಲಿಯಾಸ್ ಸ್ವಾತಿ ಡೆತ್ ನೋಟ್ ಪತ್ತೆಯಾಗಿದೆ. ‘ಅಮ್ಮ ನಿನಗೆ ಒಳ್ಳೆ ಮಗಳಾಗಿ ಇರಲಿಲ್ಲ. ದಯವಿಟ್ಟು ಕ್ಷಮಿಸು’ ಎಂದು ಬರೆದುಕೊಂಡಿದ್ದಾರೆ.
‘ನನ್ನ ಸಾವಿಗೆ ಯಾರು ಕಾರಣ ಇಲ್ಲ. ದಯವಿಟ್ಟು ಎಲ್ಲರು ಕ್ಷಮಿಸಿ. ನಮ್ಮ ಮಮ್ಮಿ ತುಂಬಾ ಒಳ್ಳೆಯವರು. ಅಪ್ಪ ಮಮ್ಮಿ, ಅಪ್ಪು (ತಮ್ಮ) ಚೆನ್ನಾಗಿ ನೋಡಿಕೋ. ಅಪ್ಪು ನಿನಗೆ ಒಳ್ಳೆ ಅಕ್ಕ ಸಿಗಲಿಲ್ಲ ನಾನು. ಎಲ್ಲರು ಲೈಫ್‌ನಲ್ಲಿ ಚೆನ್ನಾಗಿ ಇರಬೇಕು, ಐ ಯಾಮ್ ಸಾರಿ’ ಎಂದು ಬರೆದಿರುವ ಪತ್ರ ಪೊಲೀಸರಿಗೆ ಸಿಕ್ಕಿದೆ.
ಎಸ್ಪಿ ಸಾಹು ಭೇಟಿ
ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಡಿಎಸ್ಪಿ ಲಕ್ಕಯ್ಯ, ತಹಸೀಲ್ದಾರ್ ಟಿ.ರಮೇಶ್ ಬಾಬು ಭೇಟಿ ನೀಡಿ ಪರಿಶೀಲಿಸಿದ್ದರು. ಗುಂಡ್ಲುಪೇಟೆ ಇನ್‌ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಸಬ್ಇನ್‌ಸ್ಪೆಕ್ಟರ್ ಸಾಹೇಬಗೌಡ ಸ್ಥಳದಲ್ಲಿದ್ದರು.
ಅಮ್ಮ, ಮಗ ವಶಕ್ಕೆ
ಗೃಹಿಣಿ ಆತ್ಮಹತ್ಯೆ ಘಟನೆಯ ಸಂಬಂಧ ಮೃತ ಸ್ವಾತಿ ಅತ್ತೆ ನಂದಿನಿ, ಪತಿ ವಿನಯ್ ಅನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮೃತನ ಸಂಬಂಧಿಕರು ವಿನಯ್ ಹಾಗೂ ನಂದಿನಿ ಮೇಲೆ ವರದಕ್ಷಿಣೆ ಕಿರುಕುಳ, ಚಿತ್ರಹಿಂಸೆ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ಹಾಗೂ ಬೆರಳಚ್ಚು ತಜ್ಞರ ತಂಡ ಸಹ ಭೇಟಿ ನೀಡಿದ್ದು ವರದಿಯ ಬಳಿಕ ಸತ್ಯಾಂಶ ಹೊರ ಬರಲಿದೆ.ಪದ್ಮಿನಿ ಸಾಹು,ಎಸ್ಪಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ