ವೇಶ್ಯಾವಾಟಿಕೆ, ಎತ್ತಂಗಡೀಲಿ ಸ್ಯಾಂಟ್ರೋ ಎಕ್ಸಪರ್ಟ್‌..!

Published : Jan 14, 2023, 09:42 AM IST
ವೇಶ್ಯಾವಾಟಿಕೆ, ಎತ್ತಂಗಡೀಲಿ ಸ್ಯಾಂಟ್ರೋ ಎಕ್ಸಪರ್ಟ್‌..!

ಸಾರಾಂಶ

ಜೈಲಿನಲ್ಲಿರುವಾಗಲೇ ಹಲವಾರು ಪಾತಕಿಗಳ ಸಂಪರ್ಕ ಬೆಳೆಸಿಕೊಂಡಿದ್ದ. ಮದುವೆ, ಉದ್ಯೋಗ ಮತ್ತಿತರ ಆಸೆ, ಆಮಿಷಗಳನ್ನು ಒಡ್ಡಿ, ಹಲವು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಿದ್ದ. ಈ ಮಧ್ಯೆ, ಆತ ಸ್ಯಾಂಟ್ರೋ ಕಾರನ್ನೇ ತನ್ನ ದಂಧೆಗೆ ಹೆಚ್ಚಾಗಿ ಬಳಸುತ್ತಿದ್ದ. ಹೀಗಾಗಿ, ಆತನಿಗೆ ಸ್ಯಾಂಟ್ರೋ ರವಿ ಎಂಬ ಹೆಸರು ಬಂತು.

ಮೈಸೂರು(ಜ.14): ಗುಜರಾತಿನಲ್ಲಿ ಬಲೆಗೆ ಬಿದ್ದಿರುವ ಸ್ಯಾಂಟ್ರೋ ರವಿ ಹಾರ್ಡ್‌ಕೋರ್‌ ಕ್ರಿಮಿನಲ್‌ ಆಗಿದ್ದು, ವೇಶ್ಯಾವಾಟಿಕೆಯಿಂದ ಹಿಡಿದು ವರ್ಗಾವಣೆ ದಂಧೆವರೆಗೆ ಪಳಗಿದ್ದ. ಮದುವೆ, ಉದ್ಯೋಗ ಮತ್ತಿತರ ಆಸೆ, ಆಮಿಷಗಳನ್ನು ಒಡ್ಡಿ ಹಲವು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಿದ್ದ ಎಂಬ ಸಂಗತಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಮೂಲತಃ ಮಂಡ್ಯ ಜಿಲ್ಲೆಯವನು. ಈತನ ತಂದೆ ಅಬಕಾರಿ ಇಲಾಖೆಯ ಅಧಿಕಾರಿಯಾಗಿದ್ದರು. ಮಂಡ್ಯದಲ್ಲಿರುವಾಗಲೇ ವೇಶ್ಯಾವಾಟಿಕೆ ದಂಧೆಯಲ್ಲಿ ಈತ ತೊಡಗಿದ್ದ. ನಂತರ ಮೈಸೂರಿಗೆ ತನ್ನ ಕಾರ್ಯಾಚರಣೆ ಸ್ಥಳಾಂತರಿಸಿದ. ಈತನ ಮೇಲೆ 1995ರಿಂದ ಇಲ್ಲಿಯವರೆಗೆ ಮೈಸೂರು, ಬೆಂಗಳೂರು, ಮಂಡ್ಯ ಮೊದಲಾದ ಕಡೆ 22 ಪ್ರಕರಣಗಳು ದಾಖಲಾಗಿವೆ. 2005ರಲ್ಲಿ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದು, ಜೈಲಿಗೆ ಹೋಗಿ ಬಂದಿದ್ದ. ಈತನ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಜೈಲಿನಲ್ಲಿರುವಾಗಲೇ ಹಲವಾರು ಪಾತಕಿಗಳ ಸಂಪರ್ಕ ಬೆಳೆಸಿಕೊಂಡಿದ್ದ. ಮದುವೆ, ಉದ್ಯೋಗ ಮತ್ತಿತರ ಆಸೆ, ಆಮಿಷಗಳನ್ನು ಒಡ್ಡಿ, ಹಲವು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಿದ್ದ. ಈ ಮಧ್ಯೆ, ಆತ ಸ್ಯಾಂಟ್ರೋ ಕಾರನ್ನೇ ತನ್ನ ದಂಧೆಗೆ ಹೆಚ್ಚಾಗಿ ಬಳಸುತ್ತಿದ್ದ. ಹೀಗಾಗಿ, ಆತನಿಗೆ ಸ್ಯಾಂಟ್ರೋ ರವಿ ಎಂಬ ಹೆಸರು ಬಂತು.

ಎಸಿಪಿಗೆ ಸ್ಯಾಂಟ್ರೋ ರವಿ ಆವಾಜ್‌: ಆಡಿಯೋ ವೈರಲ್‌..!

ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳು, ಐಎಎಸ್‌, ಐಪಿಎಸ್‌ ಅಧಿಕಾರಿಗಳ ಸಖ್ಯ ಬೆಳೆಸಿಕೊಂಡು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದ. ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿಯೇ ತಿಂಗಳಾನುಗಟ್ಟಲೇ ಉಳಿದುಕೊಂಡು ದಂಧೆ ನಡೆಸಿಕೊಂಡಿದ್ದ. ಕೋಟ್ಯಂತರ ರು. ಸಂಪಾದಿಸಿ, ಆಸ್ತಿಪಾಸ್ತಿ ಮಾಡಿಕೊಂಡಿದ್ದ.

ಪತ್ನಿ ಬಳಿ ಇದೆ ದಂಧೆಯ ಲ್ಯಾಪ್‌ಟಾಪ್‌

ಮೈಸೂರಿನ ವಿಜಯನಗರದ ಫೈನಾನ್ಸ್‌ ಕಂಪನಿಯೊಂದಕ್ಕೆ ಕೆಲಸಕ್ಕೆ ಬೇಕಾಗಿದ್ದಾರೆ ಎಂದು ಮೂರು ವರ್ಷದ ಹಿಂದೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದ. ಪ.ಜಾತಿಯ ಪದವೀಧರ ಯುವತಿಯೊಬ್ಬಳು ಕೆಲಸಕ್ಕೆ ಅರ್ಜಿ ಹಾಕಿದ್ದಳು. ಆಕೆಗೆ ಕೆಲಸ ನೀಡಿದ್ದ. ಬಳಿಕ, ಆಕೆಯನ್ನು ತನ್ನ ರೂಮಿಗೆ ಕರೆಸಿಕೊಂಡು, ತಂಪುಪಾನೀಯದಲ್ಲಿ ಮತ್ತು ಬರಿಸುವ ಪುಡಿ ಬೆರೆಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಆಕೆಗೆ ಎಚ್ಚರವಾದಾಗ ನನ್ನ ಕಡೆಯಿಂದ ತಪ್ಪಾಗಿದೆ. ನನಗಿನ್ನೂ ಮದುವೆಯಾಗಿಲ್ಲ ಎಂದು ಆಕೆಯೊಂದಿಗೆ ವಿವಾಹವಾಗಿದ್ದ. ಮೂರು ತಿಂಗಳ ಹಿಂದೆ ಆತ, ‘ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರು ಮನೆಗೆ ಬರುತ್ತಾರೆ. ಆತನೊಂದಿಗೆ ಮಲಗು. ನಮಗೆ ಒಳ್ಳೆಯ ದುಡ್ಡು ಸಿಗುತ್ತದೆ. ಜೊತೆಗೆ ನಮ್ಮ ಕೆಲಸಗಳು ಆಗುತ್ತವೆ’ ಎಂದು ಆಕೆಯನ್ನು ಪುಸಲಾಯಿಸಲು ನೋಡಿದ್ದ. ಆಕೆ ತಿರಸ್ಕರಿಸಿದ್ದಳು. ಈ ಘಟನೆ ಬಳಿಕ, ಆಕೆ ಈತನಿಂದ ದೂರವಾದಳು. ಆ ಸಮಯದಲ್ಲಿ ಈತನ ಲ್ಯಾಪ್‌ಟಾಪ್‌ ಕಾಣೆಯಾಗಿದ್ದು, ಅದರಲ್ಲಿ ಆತನ ದಂಧೆಯ ವಿವರಗಳಿದ್ದವು. ಯುವತಿಯರಿಗೆ ಕಾರಿನ ನಂಬರ್‌ ನೀಡಿ, ಹೈಲೆವೆಲ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಇತ್ತು. ಅದು ಬಹಿರಂಗವಾದರೆ ಕಷ್ಟಎಂದು ಆಕೆಯ ವಿರುದ್ಧ ಬೆಂಗಳೂರಿನಲ್ಲಿ ಕೇಸು ಹಾಕಿಸಿ, ಆಕೆ ಹಾಗೂ ನಾದಿನಿಯನ್ನು ಜೈಲಿಗೆ ಹಾಕಿಸಿದ್ದ. ಆಕೆ ಜಾಮೀನಿನ ಮೇಲೆ ಈಚೆ ಬಂದ ನಂತರ, ಒಡನಾಡಿ ಸಂಸ್ಥೆಯ ಆಶ್ರಯಕ್ಕೆ ಬಂದು, ಆತನ ವಿರುದ್ಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಅಲ್ಲಿಂದೀಚೆಗೆ ಆತನ ಎಲ್ಲಾ ಹಗರಣಗಳು ಬಹಿರಂಗವಾದವು.

ಹೊರ ರಾಜ್ಯಗಳ ಪೊಲೀಸರಿಂದಲೂ ನೆರವು

ಸ್ಯಾಂಟ್ರೋ ರವಿಯನ್ನು ಬಂಧಿಸಲು ಮೈಸೂರು ನಗರ ಪೊಲೀಸರಿಗೆ ವಿವಿಧ ಜಿಲ್ಲೆಯ ಪೊಲೀಸರು, ಗುಜರಾತ್‌ ಸೇರಿದಂತೆ ಹೊರ ರಾಜ್ಯದ ಪೊಲೀಸರು ಸಹಕಾರ, ಸಾಥ್‌ ನೀಡಿದ್ದಾರೆ. ರಾಜ್ಯ ಪೊಲೀಸರು ಎಲ್ಲೆಡೆ ಸಾಂಘಿಕವಾಗಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿಯ ಪತ್ತೆಗಾಗಿ ಮೈಸೂರು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌, ರಾಮನಗರ ಎಸ್ಪಿ ಡಾ. ಸಂತೋಷ್‌ ಬಾಬು, ಮಂಡ್ಯ ಎಸ್ಪಿ ಎನ್‌. ಯತೀಶ್‌, ರಾಯಚೂರು ಎಸ್ಪಿ ಬಿ. ನಿಖಿಲ್‌ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿತ್ತು.

ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಚಿವರೊಂದಿಗೆ ಸ್ಯಾಂಟ್ರೋ ರವಿ ಇರುವ ವಿಡಿಯೋ ಕ್ಲಿಪಿಂಗ್‌ ಬಿಡುಗಡೆ ಮಾಡಿದ ನಂತರ ಪ್ರಕರಣಕ್ಕೆ ಮತ್ತಷ್ಟುತಿರುವು ಸಿಕ್ಕಿತು. ಆತ ಹಳೆಯ ಪ್ರಕರಣದ ತಪ್ಪೊಪ್ಪಿಗೆಯಲ್ಲಿ ತಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದು ಬಹಿರಂಗವಾಯಿತು. ಇದು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಯಿತು.

ಗುರುತೇ ಸಿಗದಂತೆ ವೇಷ ಬದಲಿಸಿದ ಸ್ಯಾಂಟ್ರೋ ರವಿ ಬಂಧನ, ರಾಜ್ಯ ರಾಜಕೀಯದಲ್ಲಿ ಸಂಚಲನ!

ಬಳಿಕ, ತನ್ನ ಬಂಧನ ಖಚಿತ ಎಂಬುದು ಗೊತ್ತಾದ ಕೂಡಲೇ ಆತ ತಲೆ ಮರೆಸಿಕೊಂಡ. ಈ ಮಧ್ಯೆ, ಮೈಸೂರಿನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ. ಇದರ ವಿಚಾರಣೆ ಜ.17ಕ್ಕೆ ನಿಗದಿಯಾಗಿದೆ. ಈ ಮಧ್ಯೆ, ಶುಕ್ರವಾರ ಆತ ಅಹಮದಾಬಾದ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ತನಿಖೆ ನಂತರ, ಆತ 1995 ರಿಂದ 2023 ರವರೆಗೆ ನಡೆಸಿರುವ ದಂಧೆಯ ವಿವರಗಳು ಹೊರಬರಬೇಕಾಗಿದೆ.

ಮಹಿಳೆಯ ದೂರಿನಲ್ಲಿ ಏನಿದೆ?:

ಮೈಸೂರಿನ ವಿಜಯನಗರ ಠಾಣೆಯಲ್ಲಿ ಮಹಿಳೆಯೊಬ್ಬಳು ತಾನು ಸ್ಯಾಂಟ್ರೋ ರವಿ ಪತ್ನಿ ಎಂದು ಹೇಳಿ ಜ.2 ರಂದು ಪ್ರಕರಣ ದಾಖಲಿಸಿದ್ದಳು. ತಾನು ವಿವಾಹಿತ ಎಂಬುದನ್ನು ಮುಚ್ಚಿಟ್ಟು, ಪರಿಶಿಷ್ಟಸಮುದಾಯದ ಮಹಿಳೆಯಾದ ತನ್ನನ್ನು ವಂಚಿಸಿ ಮದುವೆಯಾಗಿದ್ದಾನೆ. ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ, ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾನೆ ಎಂದು ಆತನ ವಿರುದ್ಧ ದೂರಿದ್ದಳು.
ಹೀಗಾಗಿ, ಆತನ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆ, ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ, ಐಪಿಸಿ 506 (ಉದ್ದೇಶಪೂರ್ವಕ ಅವಹೇಳನ, ಮನಶಾಂತಿ ಕೆಡಿಸುವ ಪ್ರಯತ್ನ), 504 (ಕ್ರಿಮಿನಲ್‌ ಪಿತೂರಿ), 376 (ಅತ್ಯಾಚಾರ), 270 (ಪ್ರಾಣ ಹಾನಿಕರವಾದ ಸೋಂಕು ಹರಡುವ ಯತ್ನ), ಬಲವಂತದ ಗರ್ಭಪಾತ (313) ಹಾಗೂ 323 (ಹಲ್ಲೆ), 498ಎ (ಕೌಟುಂಬಿಕ ದೌರ್ಜನ್ಯ) ಅಡಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ