ಪತ್ನಿ ಮೇಲೆ ಸುಳ್ಳು ಕೇಸ್‌: ಸ್ಯಾಂಟ್ರೋ ತಪ್ಪೊಪ್ಪಿಗೆ

By Kannadaprabha NewsFirst Published Jan 29, 2023, 7:22 AM IST
Highlights

ಸುಳ್ಳು ದರೋಡೆ ಪ್ರಕರಣ ಸಂಬಂಧ ಸ್ಯಾಂಟ್ರೋ ರವಿ ತಪ್ಪೊಪ್ಪಿಗೆ ಹೇಳಿಕೆ ಬೆನ್ನಲ್ಲೇ ಆತನಿಗೆ ಸಹಕರಿಸಿದ್ದ ಆರೋಪಕ್ಕೆ ತುತ್ತಾಗಿರುವ ಇನ್ಸ್‌ಪೆಕ್ಟರ್‌ ಪ್ರವೀಣ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಜ.29):  ಮನೆಯಲ್ಲಿ ನಾಪತ್ತೆಯಾಗಿದ್ದ ಬಹುಮುಖ್ಯ‘ರಹಸ್ಯ’ ದಾಖಲೆಗಳಿದ್ದ ನನ್ನ ಲ್ಯಾಪ್‌ಟಾಪ್‌ ಪಡೆಯಲು ಪತ್ನಿ ಹಾಗೂ ನಾದಿನಿ ಮೇಲೆ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಸುಳ್ಳು ದರೋಡೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದೆ ಎಂದು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಮುಂದೆ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಸ್ಫೋಟಕ ಹೇಳಿಕೆ ನೀಡಿದ್ದಾನೆ.

‘ಕೆಲ ದಿನಗಳ ಹಿಂದೆ ನನ್ನ ಲ್ಯಾಪ್‌ಟಾಪ್‌ ಕಾಣೆಯಾಗಿತ್ತು. ಎಲ್ಲೆಡೆ ಹುಡುಕಾಡಿದರೂ ಸಿಗಲಿಲ್ಲ. ಆಗ ವಿಚಾರಿಸಿದಾಗ ನನ್ನ ಮನೆಯಿಂದ ಗೊತ್ತಿಲ್ಲದಂತೆ ಆಕೆ (ಎರಡನೇ ಪತ್ನಿ) ಲ್ಯಾಪ್‌ಟಾಪ್‌ ತೆಗೆದುಕೊಂಡು ಹೋಗಿದ್ದ ಸಂಗತಿ ಗೊತ್ತಾಯಿತು. ನಾನು ಲ್ಯಾಪ್‌ಟಾಪ್‌ ಮರಳಿಸುವಂತೆ ಕೇಳಿದರೆ ಆಕೆ ಜಗಳ ಮಾಡಿದ್ದಳು. ನನಗೆ ಯಾವುದೇ ಲ್ಯಾಪ್‌ಟಾಪ್‌ ಗೊತ್ತಿಲ್ಲ ಎನ್ನುತ್ತಿದ್ದಳು. ಆಕೆಗೆ ಅವಳ ತಂಗಿ ಸಹ ಸಾಥ್‌ ಕೊಟ್ಟಿದ್ದಳು’ ಎಂದು ಸ್ಯಾಂಟ್ರೋ ರವಿ ಹೇಳಿಕೆ ನೀಡಿರುವುದಾಗಿ ಸಿಐಡಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಶುಗರ್‌ ಏರುಪೇರು: ಸ್ಯಾಂಟ್ರೋ ರವಿ ಆಸ್ಪತ್ರೆಗೆ ದಾಖಲು

‘ಆ ಲ್ಯಾಪ್‌ಟಾಪ್‌ನಲ್ಲಿ ನನ್ನ ವ್ಯವಹಾರಗಳಿಗೆ ಸಂಬಂಧಿಸಿದ ಬಹುಮುಖ್ಯವಾದ ದಾಖಲೆಗಳಿದ್ದವು. ಹೀಗಾಗಿ ಆಕೆಯ ವಶದಲ್ಲಿದ್ದ ಲ್ಯಾಪ್‌ಟಾಪ್‌ ಅನ್ನು ಹೇಗಾದರೂ ಪಡೆಯಲು ಯೋಜಿಸಿದೆ. ಆಗ ಗೆಳೆಯ ಕಾಟನ್‌ಪೇಟೆ ಠಾಣೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಪ್ರವೀಣ್‌ ನೆರವು ಸಿಕ್ಕಿತು. ಸುಳ್ಳು ದರೋಡೆ ಪ್ರಕರಣ ದಾಖಲಿಸಿ ಆ ಇಬ್ಬರನ್ನು (ಪತ್ನಿ ಹಾಗೂ ನಾದಿನಿ) ಬಂಧಿಸಿದರೆ ಲ್ಯಾಪ್‌ಟಾಪ್‌ ಕೊಡುತ್ತಾರೆ ಎಂದು ಹೇಳಿದೆ. ಅಂತೆಯೇ 2022ರ ನವೆಂಬರ್‌ 23ರಂದು ಇಬ್ಬರೂ ಬೆಂಗಳೂರಿನಲ್ಲೇ ಇರುವಂತೆ ಸಾಕ್ಷ್ಯ ಸೃಷ್ಟಿಸಿ ಪ್ರಕರಣ ದಾಖಲಿಸಲಾಯಿತು. ಆಗಲೂ ಆಕೆ ಲ್ಯಾಪ್‌ಟಾಪ್‌ ಕೊಡಲಿಲ್ಲ’ ಎಂದು ರವಿ ಅಲವತ್ತುಕೊಂಡಿದ್ದಾನೆ ಎನ್ನಲಾಗಿದೆ.

‘ನನ್ನ ಲ್ಯಾಪ್‌ಟಾಪ್‌ ನೀಡಿದರೆ ಆಕೆಯ ಸಹವಾಸವೇ ಬೇಡ. ನಾನು ಆಕೆಯನ್ನು ಮದುವೆಯಾಗಿಲ್ಲ. ನನ್ನ ಮೇಲೆ ಹಣಕ್ಕಾಗಿ ಸುಳ್ಳು ದೂರು ನೀಡಿದ್ದಾಳೆ. ನಾನು ತಪ್ಪು ಮಾಡಿಲ್ಲ’ ಎಂದು ಸ್ಯಾಂಟ್ರೋ ಹೇಳಿಕೆ ಕೊಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮೈಸೂರಿನಲ್ಲಿ ಸ್ಯಾಂಟ್ರೋ ರವಿ ವಿರುದ್ಧ ವೇಶ್ಯಾವಾಟಿಕೆಗೆ ಒತ್ತಾಯಿಸಿದ, ಜೀವ ಬೆದರಿಕೆ, ಹಲ್ಲೆ ಹಾಗೂ ಅತ್ಯಾಚಾರ ನಡೆಸಿದ ಆರೋಪ ಮೇರೆಗೆ ಆತನ ಪತ್ನಿ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಮೈಸೂರಿನಿಂದ ಸ್ಯಾಂಟ್ರೋ ರವಿಯನ್ನು ಕರೆತಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಡೆಸಿದೆ. ಈ ವೇಳೆ ಕಾಟನ್‌ಪೇಟೆ ಠಾಣೆಯಲ್ಲಿ ತನ್ನ ಪತ್ನಿ ಮೇಲೆ ಸುಳ್ಳು ದಾಖಲಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಸಿಬಿಗೆ ಸಿಐಡಿ ವರದಿ ಸಾಧ್ಯತೆ?

ಕಾಟನ್‌ಪೇಟೆ ಠಾಣೆಯಲ್ಲಿ ಸ್ಯಾಂಟ್ರೋ ರವಿ ಪತ್ನಿ ಹಾಗೂ ನಾದಿನಿ ಮೇಲೆ ಸುಳ್ಳು ದರೋಡೆ ಪ್ರಕರಣ ಸಂಬಂಧ ಸಿಸಿಬಿ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಹೀಗಾಗಿ ತಮ್ಮ ಪ್ರಕರಣದ ವಿಚಾರಣೆ ವೇಳೆ ಸುಳ್ಳು ಪ್ರಕರಣದ ಸಂಬಂಧ ರವಿ ನೀಡಿರುವ ಹೇಳಿಕೆ ಬಗ್ಗೆ ಸಿಸಿಬಿಗೆ ಸಿಐಡಿ ಅಧಿಕಾರಿಗಳು ವರದಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಸ್ಯಾಂಟ್ರೋ ಕೇಸ್‌: ವಿಚಾರಣೆಗಾಗಿ 5 ತಾಸು ಕಾದ ಇನ್‌ಸ್ಪೆಕ್ಟರ್‌ ವಾಪಸ್‌

ಏನಿದು ರಹಸ್ಯ ಲ್ಯಾಪ್‌ಟಾಪ್‌?

ಈ ಲ್ಯಾಪ್‌ಟಾಪ್‌ ಬಗ್ಗೆ ಪ್ರಶ್ನಿಸಿದಾಗ ತನಗೆ ಗೊತ್ತಿಲ್ಲ ಎಂದು ಸಿಐಡಿಗೆ ಸ್ಯಾಂಟ್ರೋ ರವಿ ಪತ್ನಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ನಾಪತ್ತೆಯಾಗಿರುವ ಲ್ಯಾಪ್‌ಟಾಪ್‌ ಯಾರ ಬಳಿ ಇದೆ ಎಂಬುದು ಪತ್ತೆಯಾಗಿಲ್ಲ. ಆ ಲ್ಯಾಪ್‌ಟಾಪ್‌ನಲ್ಲಿರುವ ‘ರಹಸ್ಯ’ ದಾಖಲೆಗಳ ಬಗ್ಗೆ ರವಿ ಕೂಡ ಬಾಯ್ಬಿಡುತ್ತಿಲ್ಲ. ಹೀಗಾಗಿ ಲ್ಯಾಪ್‌ಟಾಪ್‌ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ಸ್‌ಪೆಕ್ಟರ್‌ಗೆ ಬಂಧನ ಭೀತಿ

ಸುಳ್ಳು ದರೋಡೆ ಪ್ರಕರಣ ಸಂಬಂಧ ಸ್ಯಾಂಟ್ರೋ ರವಿ ತಪ್ಪೊಪ್ಪಿಗೆ ಹೇಳಿಕೆ ಬೆನ್ನಲ್ಲೇ ಆತನಿಗೆ ಸಹಕರಿಸಿದ್ದ ಆರೋಪಕ್ಕೆ ತುತ್ತಾಗಿರುವ ಇನ್ಸ್‌ಪೆಕ್ಟರ್‌ ಪ್ರವೀಣ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಇದೇ ಪ್ರಕರಣದಲ್ಲಿ ಈಗಾಗಲೇ ಅಮಾನತುಗೊಂಡಿರುವ ಪ್ರವೀಣ್‌ಗೆ ಬಂಧನ ಭೀತಿ ಶುರುವಾಗಿದೆ ಎನ್ನಲಾಗಿದೆ.

click me!