ಬೆಂಗಳೂರು: ಅಡಕೆ ವ್ಯಾಪಾರಿಯ 80 ಲಕ್ಷ ದೋಚಿ ಜೂಜಾಟ, ನಕಲಿ ಪೊಲೀಸರ ಸೆರೆ

By Kannadaprabha NewsFirst Published Jan 29, 2023, 6:39 AM IST
Highlights

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತವಡೇಹಳ್ಳಿ ಗ್ರಾಮದ ಅಡಿಕೆ ಮಂಡಿ ಮಾಲಿಕ ಮೋಹನ್‌ ಅವರ ಕಾರು ಚಾಲಕ ಚಂದನ್‌ನನ್ನು ಅಡ್ಡಗಟ್ಟಿ ಹಣ ದೋಚಿದ್ದ ಆರೋಪಿಗಳು. 

ಬೆಂಗಳೂರು(ಜ.29): ಇತ್ತೀಚೆಗೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅಡಕೆ ಮಂಡಿ ವ್ಯಾಪಾರಿಗೆ ಸಂಬಂಧಿಸಿದ 80 ಲಕ್ಷ ಸಾಗಿಸುವಾಗ ಅವರ ಕಾರು ಚಾಲಕನನ್ನು ಪೊಲೀಸರ ವೇಷದಲ್ಲಿ ಅಡ್ಡಗಟ್ಟಿ ದರೋಡೆ ಮಾಡಿದ್ದ ಮೂವರನ್ನು ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ಕಡಪ ಜಿಲ್ಲೆಯ ಭತಲ್‌ ಶಿವರಾಮ್‌ ಅಲಿಯಾಸ್‌ ಗಲ್ಲಿ ರೌಡಿ ಹಾಗೂ ತಿರುಪತಿಯ ಜೈಲಿನಲ್ಲಿದ್ದ ಶೇಖ್‌ ಚಂಪತಿಲಾಲ್‌ ಬಾಷ ಅಲಿಯಾಸ್‌ ಸಾಬು ಹಾಗೂ ಆತನ ಸೋದರ ಶೇಖ್‌ ಚೆಂಪತಿ ಜಾಕೀರ್‌ ಬಂಧಿಸಿದ್ದು, ಆರೋಪಿಗಳಿಂದ 37 ಲಕ್ಷ ಜಪ್ತಿ ಮಾಡಲಾಗಿದೆ. ಉಳಿದ ಹಣವನ್ನು ಜೂಜು, ಮೋಜು ಮಾಡಿ ಕಳೆದಿದ್ದಾರೆ. ಕೆಲ ದಿನಗಳ ಹಿಂದೆ ಗುಬ್ಬಿ ತಾಲೂಕಿನ ತವಡೇಹಳ್ಳಿ ಗ್ರಾಮದ ಅಡಿಕೆ ಮಂಡಿ ಮಾಲಿಕ ಮೋಹನ್‌ ಅವರ ಕಾರು ಚಾಲಕ ಚಂದನ್‌ನನ್ನು ಅಡ್ಡಗಟ್ಟಿ ಆರೋಪಿಗಳು ಹಣ ದೋಚಿದ್ದರು.

Davanagere: ಹಣಕಾಸಿನ ಜಗಳ ಮಧ್ಯೆ ಪ್ರವೇಶಿಸಿದ ಪೊಲೀಸರ ಮೇಲೆ ಹಲ್ಲೆ: ಯುವತಿಯರು ಸೇರಿ ನಾಲ್ವರ ಬಂಧನ

ಹವಾಲಾ ದಂಧೆ ಮಾಹಿತಿ ತಿಳಿದು ದರೋಡೆ

ಶೇಖ್‌ ಸೋದರರು ರಕ್ತಚಂದನ ಅಕ್ರಮ ಸಾಗಾಣಿಕೆ ಹಾಗೂ ಹವಾಲಾ ದಂಧೆಯಲ್ಲಿ ಮಾಡುತ್ತಿದ್ದು, ಶೇಖ್‌ ಚಂಪತಿ ಲಾಲ್‌ ಬಾಷ ಮೇಲೆ 53 ಪ್ರಕರಣ, ಸೋೕದರ ಜಾಕೀರ್‌ ಮೇಲೆ 35 ಪ್ರಕರಣಗಳು ದಾಖಲಾಗಿವೆ. ರಕ್ತಚಂದನ ಸಾಗಣೆ ಸಂಬಂಧ ಹವಾಲಾ ಮೂಲಕ ಆರೋಪಿಗಳು ಹಣ ವಹಿವಾಟು ನಡೆಸುತ್ತಿದ್ದರು. ಹೀಗಾಗಿ ಶಾಂತಿ ನಗರದ ಹವಾಲಾ ದಂಧೆಯಲ್ಲಿ ತೊಡಗಿರುವ ವ್ಯಕ್ತಿ ಬಗ್ಗೆ ಈ ಇಬ್ಬರಿಗೆ ಮಾಹಿತಿ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

ಅಂತೆಯೇ ಹವಾಲಾ ಹಣ ತೆಗೆದುಕೊಂಡು ಹೋಗಲು ಬರುವವರಿಗೆ ಪೊಲೀಸರ ಸೋಗಿನಲ್ಲಿ ಬೆದರಿಸಿ ಹಣ ದೋಚಲು ಈ ಸೋದರರು ಸಂಚು ರೂಪಿಸಿದ್ದರು. ಅದರಂತೆ ಸಬ್‌ ಇನ್‌ಸ್ಪೆಕ್ಟರ್‌ನಂತೆ ಶೇಖ್‌ ಚಂಪತಿ ಲಾಲ್‌ ಪಾಷ ಖಾಕಿ ಉಡುಪು ಧರಿಸಿದ್ದರೆ, ಆತನ ಸೋದರ ಕಾನ್‌ಸ್ಟೇಬಲ್‌ ಆಗಿದ್ದ. ಮತ್ತೊಬ್ಬ ಆರೋಪಿ ಭತಲ್‌ ಕಾರು ಚಾಲಕನಾಗಿದ್ದ. ಪೂರ್ವನಿಯೋಜಿತ ಸಂಚಿನಂತೆ ದರೋಡೆಗೆ ಸಜ್ಜಾಗಿ ಆಂಧ್ರಪ್ರದೇಶದಿಂದ ಡಿ.27ರಂದು ಶಾಂತಿನಗರಕ್ಕೆ ಆರೋಪಿ ಬಂದಿದ್ದರು. ಅದೇ ವೇಳೆ ಅಡಿಕೆ ವ್ಯವಹಾರ ಹಣ ಸಂಗ್ರಹಕ್ಕೆ ತಮ್ಮ ಮಾಲಿಕರ ಸೂಚನೆ ಮೇರೆಗೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅಡಕೆ ವ್ಯಾಪಾರಿ ಮೋಹನ್‌ ಅವರ ಕಾರು ಚಾಲಕ ಚಂದನ್‌ ಬಂದಿದ್ದ. ಆಗ ಶಾಂತಿನಗರದ ವ್ಯಕ್ತಿಯಿಂದ ಹಣ ಪಡೆದು ಆತ ತಮಿಳುನಾಡಿನ ಹೊಸೂರಿಗೆ ಹಣ ತಲುಪಿಸಲು ತೆರಳುತ್ತಿದ್ದ. ಆಗ ಆತನನ್ನು ಕೆ.ಎಚ್‌.ರಸ್ತೆಯಲ್ಲಿ ಅಡ್ಡಗಟ್ಟಿಆರೋಪಿಗಳು ಹಣ ದೋಚಿದ್ದರು.

ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಎ.ರಾಜು ನೇತೃತ್ವದ ತಂಡ, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಮೊಬೈಲ್‌ ಕರೆಗಳ ಮಾಹಿತಿ ಮೇರೆಗೆ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಈ ದರೋಡೆ ಬಳಿಕ ಆಂಧ್ರಪ್ರದೇಶದಲ್ಲಿ ರಕ್ತಚಂದ್ರನ ಸಾಗಾಣಿಕೆ ಯತ್ನಿಸಿದ್ದಾಗ ಶೇಖ್‌ ಸೋದರರು ಸ್ಥಳೀಯ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದರು. ಬಳಿಕ ಅವರನ್ನು ಬಾಡಿ ವಾರೆಂಟ್‌ ಮೇರೆಗೆ ವಶಕ್ಕೆ ಪಡೆದು ದರೋಡೆ ಪ್ರಕರಣಗಳಲ್ಲಿ ಬಂಧನ ಪ್ರಕ್ರಿಯೆಗೆ ಒಳಪಡಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

click me!