Santosh Patil Suicide Case: ಗ್ರಾ.ಪಂ.ಅಧ್ಯಕ್ಷರ ಮೊಬೈಲ್ ವಶಕ್ಕೆ ಪಡೆದ ಉಡುಪಿ ಪೊಲೀಸರು

By Govindaraj S  |  First Published Apr 30, 2022, 10:44 PM IST

• ಬೆಳಗಾವಿಗೆ ರೀ-ಎಂಟ್ರಿ ಕೊಟ್ಟ ಉಡುಪಿ ಇನ್ಸ್‌ಪೆಕ್ಟರ್ ಶರಣಗೌಡ ಪಾಟೀಲ್ & ಟೀಮ್
• ಹಿಂಡಲಗಾ ಗ್ರಾ.ಪಂ.ಅಧ್ಯಕ್ಷ ನಾಗೇಶ್ ಮನ್ನೋಳಕರ್ ಮೊಬೈಲ್ ವಶಕ್ಕೆ
• ಬೆಳಗಾವಿಯಲ್ಲಿ ಪ್ರಕರಣದ ತನಿಖೆ ತೀವ್ರಗೊಳಿಸಿದ ಉಡುಪಿ ಪೊಲೀಸರು


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಏ.30): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ (Santosh Patil Suicide Case) ಸಂಬಂಧ ಈಗಾಗಲೇ ಬೆಳಗಾವಿಯಲ್ಲಿ (Belagavi) ಒಂದು ಸುತ್ತಿನ ತನಿಖೆ ನಡೆಸಿ ತೆರಳಿದ್ದ ಉಡುಪಿ ಪೊಲೀಸರು (Udupi Police) ಮತ್ತೆ ಕುಂದಾನಗರಿಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ಸ್‌ಪೆಕ್ಟರ್ ಶರಣಗೌಡ ಪಾಟೀಲ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದು ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಹಿಂಡಲಗಾ ಗ್ರಾ‌ಮ ಪಂಚಾಯತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಹಾಗೂ ಗ್ರಾ.ಪಂ.ಸದಸ್ಯ ಉದ್ಯಮಿ ಎನ್.ಎಸ್.ಪಾಟೀಲ್ ವಿರುದ್ಧ ಸಂತೋಷ ಪಾಟೀಲ್ ಮನೆ ಜಿಪಿಎ ಮಾಡಿಸಿಕೊಂಡು ಸಾಲ ನೀಡಿದ ಆರೋಪ ಕೇಳಿ ಬಂದಿತ್ತು. 

Tap to resize

Latest Videos

ಗುತ್ತಿಗೆದಾರ ಸಂತೋಷ ಪಾಟೀಲ್ ಮನೆ ಜಿಪಿಎ ಮಾಡಿಸಿಕೊಂಡಿದ್ದು ಏಕೆ? ಜಿಪಿಎ ಮಾಡಿಸಿಕೊಂಡು ಎಷ್ಟು ಹಣ ಕೊಟ್ಟಿದ್ರಿ? 108 ಕಾಮಗಾರಿ ಆರಂಭಿಸಲು ಹೇಳಿದ್ದು ಯಾರು? ಎಂಬ ಬಗ್ಗೆ ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದ್ದು, ನಾಗೇಶ್ ಮನ್ನೋಳಕರ್ ಮೊಬೈಲ್ ಅನಾಲಿಸಿಸ್‌ಗೆ ಕಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ‌‌. ಹಿಂಡಲಗಾ ಗ್ರಾ‌ಮ ಪಂಚಾಯತಿಯ 35 ಸದಸ್ಯರಿಗೂ ವಿಚಾರಣೆಗೆ ಹಾಜರಾಗಲು ಸೂಚ‌ನೆ ನೀಡಿದ್ದು ಪ್ರತಿಯೊಬ್ಬ ಸದಸ್ಯರ ಪ್ರತ್ಯೇಕವಾಗಿ ಒನ್ ಟು ಒನ್ ವಿಚಾರಣೆ ನಡೆಸಿ, 'ನಿಮ್ಮ ವಾರ್ಡ್‌ನಲ್ಲಿ ಸಂತೋಷ ಪಾಟೀಲ್ ಕಾಮಗಾರಿ ಮಾಡಿದ್ದಾರಾ? 

ಸಂತೋಷ್ ಪಾಟೀಲ್ ಆತ್ಮಹತ್ಯೆ ಬಳಿಕ ಎಚ್ಚೆತ್ತ, ಸರ್ಕಾರ, ಅಧಿಕಾರಿಗಳಿಗೆ ಮಹತ್ವದ ಸೂಚನೆ ಕೊಟ್ಟ ಸಿಎಂ

ಕಾಮಗಾರಿ ಮಾಡಿದ್ರೆ ಎಷ್ಟು ವೆಚ್ಚದಲ್ಲಿ ಕಾಮಗಾರಿ ಮಾಡಿದ್ದಾರೆ? ಯಾವ ಯೋಜನೆಯಲ್ಲಿ ಕಾಮಗಾರಿ ಮಾಡುತ್ತಿರೋದಾಗಿ ಹೇಳಿದ್ರು? ಸಂತೋಷ ಪಾಟೀಲ್‌ರವರೇ ಕಾಮಗಾರಿ ಮಾಡಿದ್ದಾರಾ ಉಪಗುತ್ತಿಗೆದಾರರು ಮಾಡಿದ್ದಾರಾ?' ಎಂಬ ಎಲ್ಲಾ ಮಾಹಿತಿ ಪಡೆದು ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಮಹಿಳಾ ಗ್ರಾ.ಪಂ. ಸದಸ್ಯರ ವಿಚಾರಣೆಗೆ ಮಹಿಳಾ ಪೇದೆಗಳ ನಿಯೋಜನೆ ಮಾಡಲಾಗಿದ್ದು ಸಂತೋಷ ಪಾಟೀಲ್‌ನಿಂದ ಉಪಗುತ್ತಿಗೆ ಪಡೆದ 12 ಉಪಗುತ್ತಿಗೆದಾರರಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಉಪಗುತ್ತಿಗೆ ಪಡೆದು ಕಾಮಗಾರಿ ಮಾಡಿದ ವೆಚ್ಚ, ಕಾಮಗಾರಿಗೆ ಸಾಮಗ್ರಿ ಖರೀದಿಸಿದ್ದ ರಸೀದಿ ಸೇರಿ ಎಲ್ಲಾ ದಾಖಲೆ ನೀಡುವಂತೆಯೂ ಸೂಚನೆ ನೀಡಲಾಗಿದೆ.

ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದ ಎಚ್ಚೆತ್ತ ಸಚಿವ ಗೋವಿಂದ ಕಾರಜೋಳ, ಬೆಳಗಾವಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ದಾರೆ. 'ವರ್ಕ್ ಆರ್ಡರ್ ಇಲ್ಲದೇ ಕೆಲಸ ನಡೆಯುತ್ತಿದ್ದರೇ ಬಂದ್ ಮಾಡಿಸುವಂತೆ ತಾಕೀತು ಮಾಡಿದ್ದು, 'ಯಾರಾದರೂ ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡುತ್ತಿದ್ದರೆ ಅದನ್ನು ಬಂದ್ ಮಾಡಿಸಬೇಕು. ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡಿಸಲು ಕೊಡಬಾರದು. ಸರ್ಕಾರದ ಯೋಜನೆ ಮಂಜೂರಾಗದ ಹೊರತು ಯಾರಾದರೂ ಕಾಮಗಾರಿ ಮಾಡೋದು ಗಮನಕ್ಕೆ ಬಂದ್ರೆ ಪಿಡಿಒಗಳು, ಇಒಗಳು, ಇಂಜಿನಿಯರ್‌ಗಳೇ ಹೊಣೆ. 

ನಿಮ್ಮ ಮನೆಯಲ್ಲಿ ಯಾರಾದರೂ ಕೆಲಸ ಹೇಳದೇ ಮಾಡೋಕೆ ಬಂದ್ರೆ ಸುಮ್ಮನೇ ಇರ್ತೀರಾ? ಅಂತಾ ಖಾರವಾಗಿ ಪ್ರಶ್ನಿಸಿದ್ದಾರೆ. 'ಬಹಳ ಬಿಗಿಯಾಗಿ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನಧಿಕೃತ ವ್ಯಕ್ತಿಗಳು ನಮ್ಮ ಪ್ರಿಮೈಸಿಸ್‌ನಲ್ಲಿ ಬರಬಾರದು. ಗ್ರಾಮ ಪಂಚಾಯತಿಯಲ್ಲಿ ಯಾರಾದರೂ ಬಂದು ಕೆಲಸ ಮಾಡ್ತಾರೆ ಅಂದ್ರೆ ಬಿಡಬಾರದು. ಸುಮ್ಮನೇ ಅಧಿಕಾರಿಗಳಿಗೂ ಕೆಟ್ಟ ಹೆಸರು, ಸರ್ಕಾರಕ್ಕೂ ಕೆಟ್ಟ ಹೆಸರು ವಿನಾ ಕಾರಣ ಅಪಪ್ರಚಾರ ಆಗುತ್ತೆ. ಯಾರಾದರೂ ಪುಂಡಾಟಿಕೆ ಮಾಡಿದ್ರೆ ಪೊಲೀಸರಿಗೆ ದೂರು ನೀಡಿ' ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್, ಪೊಲೀಸರ ಕೈಸೇರಿದ ಪ್ರಾಥಮಿಕ ವರದಿ

ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಸಚಿವ ಗೋವಿಂದ ಕಾರಜೋಳ, 'ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆಯಿತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, 'ಅಧಿಕಾರಿಗಳ ನಿರ್ಲಕ್ಷ್ಯ ಅಂತಾ ಅಲ್ಲ ಈಗಾಗಲೇ ತನಿಖೆ ಆಗ್ತಿದೆ ತನಿಖೆ ವರದಿ ಬರಲಿ. ತನಿಖೆ ಆಗದೇ ನಾನು ಮಂತ್ರಿಯಾಗಿ ಹೇಳಿದ್ರೆ ಸರ್ಕಾರವೇ ಹೇಳಿದ ಹಾಗೇ ಆಗುತ್ತೆ. ತನಿಖೆಗೆ ಅಡ್ಡಿಪಡಿಸುವಂತೆ ಆಗಬಾರದು ಹೀಗಾಗಿ ಮಾತನಾಡಿಲ್ಲ. ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡುವಂತಿಲ್ಲ.ನಮ್ಮ ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ. ಯಾವುದೇ ಕಾಮಗಾರಿ ಮಾಡಬೇಕಾದ್ರೆ ವರ್ಕ್ ಎಸ್ಟಿಮೇಟ್ ಮಾಡಬೇಕಾಗುತ್ತೆ ಮಂಜೂರಾತಿ, ಗ್ರ್ಯಾಂಟ್ ಪಡೆಯಬೇಕು' ಎಂದು ತಿಳಿಸಿದ್ದಾರೆ.

click me!