* ಈತ ಕಳ್ಳತನ ಮಾಡುವ ವಿಧಾನವೇ ಡಿಫರೆಂಟ್, ಅಪಾರ್ಟ್‌ಮೆಂಟ್ ಟಾರ್ಗೆಟ್..!
* ಅಪಾರ್ಟ್‌ಮೆಂಟ್‌ಗಳೇ ಟಾರ್ಗೆಟ್
* ದೈನಂದಿನ ಖರ್ಚಿಗಾಗಿ ಅಪಾರ್ಟ್‌ಮೆಂಟ್‌ಗೆ ನುಗ್ಗುತ್ತಿದ್ದ ಕದೀಮ
ಬೆಂಗಳೂರು, (ಏ.22): ಈತ ಕಳ್ಳತನ ಮಾಡುವ ವಿಧಾನವೇ ಡಿಫರೆಂಟ್. ಕಳ್ಳತನ ಮಾಡಿದ ಮೇಲೆಯೂ ಮನೆ ಮಾಲೀಕರಿಗೂ ತಿಳಿಯದಂತೆ ಸೈಲೆಂಟ್ ಆಗಿ ಬಂದು ಕೃತ್ಯ ಎಸಗುತ್ತಿದ್ದ ಖತರ್ನಾಕ್ ಆರೋಪಿ ಸಂಜಯ್ ನಗರ ಪೊಲೀಸರ ಅತಿಥಿಯಾಗಿದ್ದಾನೆ.
ತಮಿಳುನಾಡು ಮೂಲದ ಇಸಯ್ ರಾಜ್ ಬಂಧಿತ ಕಳ್ಳ. ಕೆಲ ವರ್ಷಗಳ ಹಿಂದೆ ಕುಟುಂಬ ಸಮೇತ ಅಮೃತಹಳ್ಳಿಯಲ್ಲಿ ವಾಸವಾಗಿದ್ದ. ಜೀವನಕ್ಕಾಗಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ಡ್ರಗ್ಸ್ ವ್ಯಾಮೋಹಿಯಾಗಿದ್ದ. ಈತನ ವಿರುದ್ಧ ಸಂಪಿಗೆಹಳ್ಳಿ ಹಾಗೂ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡ್ರಗ್ಸ್ ಚಟ ಬಿಡಿಸಲು ಕುಟುಂಬಸ್ಥರು ಈತನನ್ನು ಹತ್ತಿರದ ರಿಹಾಬಿಲೇಷನ್ ಸೆಂಟರ್ ಸೆಂಟರ್ ಸೇರಿಸಿದ್ದರು. ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆದು ಹೊರಬಂದಿದ್ದ. ಕೈಯಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ. ದಿನದ ಖರ್ಚಿಗೆ ಹಣ ಹೊಂದಿಸಲು ಪರದಾಡುತ್ತಿದ್ದ ಇಸಯ್ ರಾಜ್ ಗೆ ಹೊಳೆದಿದ್ದ ಕಳ್ಳತನ ದಾರಿ.
PSI Recruitment Scam ನಾಪತ್ತೆಯಾಗಿರುವ ಕಿಂಗ್‌ಪಿನ್ ಗಳ ಪತ್ತೆಗೆ CID ವಿಫಲ?
ಹೌದು ಹಣಕ್ಕಾಗಿ ಕಳ್ಳತನ ಮಾಡಲು ಪ್ಲ್ಯಾನ್ ರೂಪಿಸಿಕೊಂಡು ಅಪಾರ್ಟ್‌ಮೆಂಟ್ ಗಳನ್ನೇ ಗುರಿಯಾಗಿಸಿಕೊಂಡಿದ್ದ. ಫ್ಲಂಬರ್, ಎಲೆಕ್ಟ್ರಿಕಲ್ ಸೋಗಿನಲ್ಲಿ ಅಪಾರ್ಟ್ ಮೆಂಟ್ ನುಗ್ಗುತ್ತಿದ್ದ. ಕಿಟಕಿ ಪಕ್ಕದಲ್ಲಿರುವ ಬೀಗ ಹಾಕಿದ ಮನೆಯನ್ನ ಟಾರ್ಗೆಟ್ ಮಾಡಿಕೊಂಡು ಅದೇ ಅಪಾರ್ಟ್ ಮೆಂಟ್ ನ ಟೆರೇಸ್ ನಲ್ಲಿ ಉಳಿದುಕೊಳ್ಳುತ್ತಿದ್ದ. ರಾತ್ರಿ ವೇಳೆ ಮನೆಯ ಕಿಟಕಿ ಮುರಿದು ಕಳ್ಳತನ ಮಾಡುತ್ತಿದ್ದ. ಕೃತ್ಯವೆಸಗುವಾಗ ಮನೆಯ ಯಾವುದೇ ವಸ್ತು ಚೆಲ್ಲಾಪಿಲ್ಲಿಯಾಗದಂತೆ ನಿಗಾವಹಿಸುತ್ತಿದ್ದ.
ಕಳ್ಳತನ ಬಳಿಕ ಒಬ್ಬಂಟಿಗನಾಗಿ ಹೊರ ಹೋದರೆ ಅನುಮಾನ ಬರುವುದಾಗಿ ಭಾವಿಸಿ ಆ ರಾತ್ರಿ ಟೇರೆಸ್ ನಲ್ಲಿ ಉಳಿದುಕೊಂಡು ಮಾರನೇ ದಿನ ಬೆಳಗ್ಗೆ ಹಾಲು ಹಾಕುವವರು, ಕೆಲಸಗಾರರ ಬರುವುದನ್ನ ಕಂಡು ಅವ್ರ ಜೊತೆಯಲ್ಲಿ ಎಸ್ಕೇಪ್ ಆಗುತ್ತಿದ್ದ. ಅದೇ ರೀತಿ ಕಳೆದ ಮಾರ್ಚ್ ನಲ್ಲಿ ಸಂಜಯ್ ನಗರದ ಮನೆಯೊಂದರಲ್ಲಿ ಲಾಕರ್ ಸಮೇತ ಚಿನ್ನಾಭರಣ ದೋಚಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇನ್ ಸ್ಪೆಕ್ಟರ್ ಬಾಲರಾಜ್ ,ಸೆರೆಯಾಗಿದ್ದ ಸಿಸಿಟಿವಿ ಸೇರಿದಂತೆ ತಾಂತ್ರಿಕವಾಗಿ ತನಿಖೆ ನಡೆಸಿ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಆರೋಪಿ ಬಂಧನದಿಂದ 12 ಪ್ರಕರಣ ಪತ್ತೆಯಾಗಿದ್ದು 30 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ದುಬಾರಿ ವಾಚ್ ಗಳ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.