
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಸೆ.13): ರಾಜಧಾನಿಯ ನಾಲ್ಕು ಐಷಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ನಡುರಾತ್ರಿಯಿಂದ ಸೂರ್ಯೋದಯದವರೆಗೆ ನಡೆಸಿದ್ದ ‘ನಶೆ ಪಾರ್ಟಿ’ಗಳೇ ಮಾದಕ ವಸ್ತು ಜಾಲದ ಸುಳಿಗೆ ಸಿಲುಕಿರುವ ಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಹಾಗೂ ಅವರ ಸ್ನೇಹ ಬಳಗಕ್ಕೆ ಸಿಸಿಬಿ ತನಿಖೆಯ ಉರುಳು ಬಿಗಿಯಾಗಲು ಕಾರಣವಾಗಿದೆ.
"
ಬೆಂಗಳೂರಿನಲ್ಲಿ ಕ್ಲಬ್, ಪಬ್, ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಪೇಜ್ ತ್ರಿ ಪಾರ್ಟಿ ಮುಗಿಸಿದ ಬಳಿಕ ನಟಿಯರ ಸ್ನೇಹಿತರು ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ 12 ಗಂಟೆ ನಂತರ ಕೆಲವೇ ಸೀಮಿತವಾದ ಅತಿಥಿಗಳಿಗೆ ಮತ್ತಿನ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಈ ಔತಣ ಕೂಟಗಳಲ್ಲಿ ಸರಾಗವಾಗಿ ಡ್ರಗ್ಸ್ ಹರಿದಾಡಿದ್ದು, ದಿಗಂತದಲ್ಲಿ ನೇಸರ ಮೂಡುವವರೆಗೆ ಮತ್ತೇರಿಸಿಕೊಳ್ಳುತ್ತಿದ್ದರು. ಈ ನಶೆ ಪಾರ್ಟಿಗಳಿಗೆ ಮಾದಕ ವಸ್ತು ವ್ಯಸನಿಗಳಿಗೆ ಮಾತ್ರವಷ್ಟೇ ಅವಕಾಶವಿತ್ತು ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಈ ರೀತಿಯ ಪಾರ್ಟಿಗಳನ್ನು ‘ಆಫ್ಟರ್ ಅವರ್ಸ್’ ಹಾಗೂ ‘ಎಲೈಟ್’ ಪಾರ್ಟಿಗಳೆಂದು ಆರೋಪಿಗಳು ಕರೆಯುತ್ತಿದ್ದರು. ಇದರ ಸಂವಹನಕ್ಕೆ ವಾಟ್ಸ್‌ಆಪ್‌ನಲ್ಲಿ ಪ್ರತ್ಯೇಕ ಗ್ರೂಪ್ ಮಾಡಿದ್ದರು. ಮಾದಕ ವಸ್ತು ಜಾಲದ ಪ್ರಕರಣದ ಸಿಸಿಬಿ ತನಿಖೆ ಶುರುವಾದ ಕೂಡಲೇ ನಶೆ ಪಾರ್ಟಿಗಳ ವಾಟ್ಸ್‌ಆಪ್ ಗ್ರೂಪ್‌ಗಳನ್ನು ನಟಿಯರಾದ ರಾಗಿಣಿ ಹಾಗೂ ಸಂಜನಾ ಡಿಲೀಟ್ ಮಾಡಿದ್ದರು. ಅವುಗಳನ್ನು ರಿಟ್ರೀವ್ ಮಾಡಿ ಸಂಗ್ರಹಿಸಲಾಗಿದೆ. ಅವುಗಳೇ ಪ್ರಕರಣಕ್ಕೆ ಬಹುಮುಖ್ಯ ಸಾಕ್ಷ್ಯಗಳಾಗಿವೆ ಎಂದು ಉನ್ನತ ಮೂಲಗಳು ವಿವರಿಸಿವೆ.
ನಶೆ ಪಾರ್ಟಿಗಳ ಅಡ್ಡೆಗಳು ಪತ್ತೆ:
ತಮ್ಮ ಸ್ನೇಹ ಬಳಗದ ಜತೆ ರಾಗಿಣಿ ಹಾಗೂ ಸಂಜನಾ ನಡೆಸಿದ್ದಾರೆ ಎನ್ನಲಾದ ಅಪಾರ್ಟ್‌ಮೆಂಟ್‌ಗಳ ನಾಲ್ಕು ನಶೆ ಅಡ್ಡೆಗಳನ್ನು ಪತ್ತೆಹಚ್ಚಿರುವ ಸಿಸಿಬಿ ಅಧಿಕಾರಿಗಳು, ಎರಡು ದಿನಗಳಲ್ಲಿ ಅಡ್ಡೆಗಳನ್ನು ನ್ಯಾಯಾಲಯದ ಅನುಮತಿ ಪಡೆದು ತಪಾಸಣೆಗೊಳಪಡಿಸಲು ನಿರ್ಧರಿಸಿದ್ದಾರೆ.
ಇನ್ನು ಪಾರ್ಟಿಗಳು ನಡೆದಿರುವ ಫ್ಲ್ಯಾಟ್‌ಗಳು ಯಾರ ಹೆಸರಿನಲ್ಲಿ ನೋಂದಣಿಯಾಗಿವೆ, ಅವುಗಳ ಅಸಲಿ ಮಾಲಿಕರು ಯಾರು, ಪಾರ್ಟಿಗಳಿಗೆ ಬರುತ್ತಿದ್ದ ನಿಯಮಿತ ಅತಿಥಿಗಳು ಯಾರು ಎಂಬುದೂ ಸೇರಿದಂತೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಶೆ ಪಾರ್ಟಿಗೆ ಯಾರೆಲ್ಲ ಬರುತ್ತಿದ್ರು:
ಪಬ್, ಕ್ಲಬ್ ಹಾಗೂ ಹೋಟೆಲ್‌ಗಳಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಮಾಲಿಕರಾದ ವೀರೇನ್ ಖನ್ನಾ, ದಿ.ಜೀವರಾಜ್ ಅಳ್ವಾ ಪುತ್ರ ಆದಿತ್ಯ ಆಳ್ವಾ, ಪ್ರಶಾಂತ್ ರಂಕಾ ಹಾಗೂ ಆದಿತ್ಯ ಅಗರ್ವಾಲ್ ಸೇರಿದಂತೆ ಇತರರು ರಂಗುರಂಗಿನ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಬಹುತೇಕ ಈ ಪಾರ್ಟಿಗಳು ರಾತ್ರಿ 12 ಗಂಟೆ ವೇಳೆಗೆ ಮುಗಿಯುತ್ತಿದ್ದವು. ಬಳಿಕ ಅವರು ಅಪಾರ್ಟ್‌ಮೆಂಟ್‌ಗಳಲ್ಲಿ ‘ಆಫ್ಟರ್ ಅವರ್ಸ್’ ಹಾಗೂ ‘ಎಲೈಟ್’ ಪಾರ್ಟಿಗಳನ್ನು ನಡೆಸುತ್ತಿದ್ದರು ಎಂದು ಸಿಸಿಬಿ ಮೂಲಗಳು ವಿವರಿಸಿವೆ.
ಈ ನಶೆ ಕೂಟಗಳಿಗೆ ಮಾದಕ ವಸ್ತು ವ್ಯಸನಿಗಳಾಗಿದ್ದ ಉದ್ಯಮಿಗಳ ಪುತ್ರರು, ರಾಜಕಾರಣಿಗಳು ಹಾಗೂ ಚಲನಚಿತ್ರ ರಂಗ ಸೇರಿದಂತೆ 30-40 ಶ್ರೀಮಂತರಿಗೆ ಆಹ್ವಾನವಿರುತ್ತಿತ್ತು. ರಾತ್ರಿ 12 ಗಂಟೆಯಿಂದ ಮುಂಜಾನೆವರೆಗೆ ಅಪಾರ್ಟ್‌ಮೆಂಟ್‌ಗಳಲ್ಲಿ ಪಾರ್ಟಿಗಳು ನಡೆದಿವೆ ಎಂದು ತಿಳಿದುಬಂದಿದೆ.
ನಶೆ ಪಾರ್ಟಿಗಳ ಮೆಸೇಜ್ ಲಭ್ಯ:
ಹೋಟೆಲ್ ಹಾಗೂ ಕ್ಲಬ್‌ಗಳಲ್ಲಿ ಆಯೋಜಿಸುತ್ತಿದ್ದ ಪಾರ್ಟಿಗಳ ಪೋಟೋಗಳನ್ನು ವೀರೇನ್ ಖನ್ನಾ ತನ್ನ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಆದರೆ ಅಪಾರ್ಟ್‌ಮೆಂಟ್‌ಗಳ ಪಾರ್ಟಿಗಳು ತುಂಬಾ ಗೌಪ್ಯವಾಗಿ ನಡೆಯುತ್ತಿದ್ದವು. ಇಲ್ಲಿ ಪರಿಚಯಸ್ಥರು ಹಾಗೂ ರಹಸ್ಯ ಕಾಪಾಡಿಕೊಳ್ಳುವ ವ್ಯಕ್ತಿಗಳು ಮಾತ್ರ ಸೇರಿಸಿಕೊಳ್ಳುತ್ತಿದ್ದರು. ಇದಕ್ಕಾಗಿ ಆರೋಪಿಗಳು ವಾಟ್ಸ್‌ಆಪ್‌ನಲ್ಲಿ ಪ್ರತ್ಯೇಕ ಗ್ರೂಪ್ ಮಾಡಿಕೊಂಡು ಸಂವಹನ ನಡೆಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸಾರಿಗೆ ಇಲಾಖೆ ನೌಕರ ರವಿಶಂಕರ್ ಹಾಗೂ ರಾಹುಲ್ ಸೆರೆಯಾದ ಬಳಿಕ ಅವರ ಸ್ನೇಹಿತೆಯರಾದ ನಟಿ ರಾಗಿಣಿ ಹಾಗೂ ಸಂಜನಾ ನಶೆ ಪಾರ್ಟಿಗಳ ಮೆಸೇಜ್‌ಗಳನ್ನು ಡಿಲೀಟ್ ಮಾಡಿದ್ದರು. ಅಷ್ಟರಲ್ಲಾಗಲೇ ರವಿಶಂಕರ್ ಹಾಗೂ ರಾಹುಲ್ ಮೊಬೈಲ್‌ಗಳಲ್ಲಿ ಆ ಸಂದೇಶಗಳು ಸಿಕ್ಕಿದ್ದವು. ಬಳಿಕ ಆರೋಪಿಗಳ ಮೊಬೈಲ್‌ಗಳನ್ನು ಸೈಬರ್ ಲ್ಯಾಬ್‌ಗೆ ಕಳುಹಿಸಿ ಎಲ್ಲ ಮೆಸೇಜ್‌ಗಳನ್ನು ರಿಟ್ರೀವ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ