ಮಹಿಳೆಗೆ ಮನೆಯ ಸಾಕು ನಾಯಿ ಕಚ್ಚಿದ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್‌ಗೆ ಬೆಂಗಳೂರಿನ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಬೆಂಗಳೂರು (ನ.12): ಮಹಿಳೆಗೆ ಮನೆಯ ಸಾಕು ನಾಯಿ ಕಚ್ಚಿದ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್‌ಗೆ ಬೆಂಗಳೂರಿನ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ಮೂರು ದಿನಗಳಲ್ಲಿ ವಿಚಾರಣೆಗೆ ಹಾಜರಾಗಬೇಕು, ಮನೆಯ ಹೊರಗಡೆಯ ಸಿಸಿಟಿವಿ ಕ್ಯಾಮರಾದ ಡಿವಿಆರ್ ನೀಡುವಂತೆಯೂ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಈಗಾಗಲೇ ದರ್ಶನ್ ಮನೆಯ ನಾಯಿಗಳ ಕೇರ್ ಟೇಕರ್ ಹೇಮಂತ್‌ನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದರು.
ಈ ವೇಳೆ ದೂರುದಾರೆ ಅಮಿತಾ ಜಿಂದಾಲ್ ಅವರಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದರು. ಅ.28ರಂದು ಮಹಿಳೆಯೊಬ್ಬರಿಗೆ ದರ್ಶನ್ ಅವರ ಸಾಕು ನಾಯಿ ಕಚ್ಚಿ ಗಾಯಗೊಳಿಸಿತ್ತು. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿ, ದರ್ಶನ್ ಅವರನ್ನು 2ನೇ ಆರೋಪಿ ಮಾಡಿದ್ದಾರೆ. ಅ.28ರಂದು ರಾಜರಾಜೇಶ್ವರಿನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ದೂರುದಾರೆ ಅಮಿತಾ ಜಿಂದಾಲ್ ಭಾಗಿಯಾಗಿದ್ದರು. ಈ ವೇಳೆ ದರ್ಶನ್ ಮನೆ ಬಳಿಯ ಖಾಲಿ ಜಾಗದಲ್ಲಿ ತಮ್ಮ ಕಾರನ್ನು ನಿಲ್ಲಿಸಿದ್ದರು.
ದರ್ಶನ್ ಮನೆ ನಾಯಿ ಕಚ್ಚಿದ ಪ್ರಕರಣ: ಹೀಗೇ ಆದರೆ ಕೋರ್ಟಿಗೆ ಹೋಗುವೆ ಎಂದ ದೂರುದಾರೆ!
ಕಾರ್ಯಕ್ರಮ ಮುಗಿಸಿಕೊಂಡು ಕಾರಿನ ಬಳಿ ಬಂದಾಗ, ದರ್ಶನ್ ಮನೆಯ ಮೂರು ಸಾಕು ನಾಯಿಗಳ ಪೈಕಿ ಎರಡನ್ನೂ ಕಾರಿನ ಬಳಿ ಕಟ್ಟಲಾಗಿತ್ತು. ಮತ್ತೊಂದು ನಾಯಿಯನ್ನು ಕೇರ್ ಟೇಕರ್ ಹೇಮಂತ್ ಕೈಯಲ್ಲಿ ಹಿಡಿದುಕೊಂಡಿದ್ದರು. ಈ ವೇಳೆ ಅಮಿತಾ ಅವರು ಕಾರನ್ನು ತೆಗೆಯಬೇಕು. ನಾಯಿಗಳನ್ನು ಆ ಕಡೆ ಹಿಡಿದುಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೆ ಹೇಮಂತ್ ಮತ್ತು ಅಮಿತಾ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅಲ್ಲೇ ಇದ್ದ ನಾಯಿ ಅಮಿತಾ ಅವರಿಗೆ ಕಚ್ಚಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಅಮಿತಾ ಅವರು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿ, ನಟ ದರ್ಶನ್ ಅವರನ್ನು ಎರಡನೇ ಆರೋಪಿಯನ್ನಾಗಿ ಮಾಡಿದ್ದರು.