Hubballi Crime: ಸ್ನೇಹಿತನಿಂದಲೇ ಭೀಕರ ಕೊಲೆಯಾದ ರೌಡಿಶೀಟರ್‌..!

By Girish Goudar  |  First Published Mar 12, 2022, 4:50 AM IST

*  ತಾನೇ ತಂದ ಮಚ್ಚಿನಿಂದಲೆ ಏಟು ತಿಂದ
*  ಪೊಲೀಸರಿಗೆ ಶರಣಾದ ಆರೋಪಿ ಸದಾನಂದ ಕೂರ್ಲಿ
*  ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
 


ಹುಬ್ಬಳ್ಳಿ(ಮಾ.12):  ವಾಣಿಜ್ಯ ನಗರಿಯಲ್ಲಿ ಮತ್ತೆ ಮಾರಕಾಸ್ತ್ರಗಳು ಝಳಪಿಸಿವೆ. ಹಣಕಾಸಿನ ವಿಚಾರವಾಗಿ ರೌಡಿಶೀಟರ್‌ ಅಕ್ಬರ್‌ ಅಲ್ಲಾಭಕ್ಷ ಮುಲ್ಲಾ (42) ಎಂಬಾತನನ್ನು ಆತನ ಸ್ನೇಹಿತನೇ ಅರವಿಂದ ನಗರದ ಪಿಎನ್‌ಟಿ ಕ್ವಾಟ್ರರ್ಸ್‌ ಹಿಂಭಾಗದ ರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ(Murder) ಮಾಡಿ ಬಳಿಕ ಪೊಲೀಸರಿಗೆ(Police) ಶರಣಾಗಿದ್ದಾನೆ.

ತೊರವಿಹಕ್ಕಲ ನಿವಾಸಿ ಸದಾನಂದ ಕೂರ್ಲಿ (38) ಪೊಲೀಸರಿಗೆ ಶರಣಾದ ಆರೋಪಿ. ಐಪಿಸಿ 302 ಪ್ರಕರಣ ದಾಖಲಿಸಿಕೊಂಡಿರುವ ಹಳೆ ಹುಬ್ಬಳ್ಳಿ(Hubballi) ಪೊಲೀಸರು ಈತನನ್ನು ಪ್ರಾಥಮಿಕ ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ(Court) ಹಾಜರುಪಡಿಸಿದ್ದಾರೆ. ಅಕ್ಬರ್‌ ಪತ್ನಿ ಶಹನಾಝ್‌ ಮುಲ್ಲಾ ದೂರು ದಾಖಲಿಸಿದ್ದು, ತನಿಖೆ ಮುಂದುವರಿದಿದೆ.

Tap to resize

Latest Videos

ಪ್ರೀತಿಸಿ ಮದ್ವೆಯಾದ ಹೆಂಡ್ತಿ ಮೇಲೆ ಅನುಮಾನ, ಅದೇ ಅನುಮಾನದಿಂದಲೇ ಪತಿ ಅಂದರ್

ಮಚ್ಚು ತಂದವ ಕೊಲೆಯಾದ

ಪೊಲೀಸ್‌ ಮೂಲಗಳ ಪ್ರಕಾರ ‘ಅಕ್ಬರ್‌ ಗುರುವಾರ ತಡರಾತ್ರಿ ಸುಮಾರು 1 ಗಂಟೆಗೆ ಸದಾನಂದನ ಮನೆಗೆ ತೆರಳಿ ಹಣ ಕೊಡುವಂತೆ ಕೇಳಿದ್ದಾನೆ. ಹಣ ಇಲ್ಲ ಎಂದಾಗ ತನ್ನದೆ ಬೈಕ್‌ನಲ್ಲಿ ಎಟಿಎಂ ನತ್ತ ಕರೆದುಕೊಂಡು ಹೋಗಿದ್ದಾನೆ. ಪಿಎನ್‌ಟಿ ಕ್ರಾಸ್‌ ಬಳಿ ಬಂದಾಗ 50 ಸಾವಿರ ರು. ಬೇಕೆಬೇಕು ಎಂದು ಪಟ್ಟು ಹಿಡಿದಿದ್ದಾನೆ. ಅಷ್ಟೊಂದು ಹಣವಿಲ್ಲ, ನವೀನ್‌ ಎಂಬ ಇನ್ನೊಬ್ಬ ಸ್ನೇಹಿತನ ಬಳಿ ಬೇಕಾದರೆ ಕೇಳು ಎಂದು ಸದಾನಂದ ಉತ್ತರಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ನವೀನ ಕೂಡ ಸ್ಥಳಕ್ಕೆ ಬಂದಿದ್ದಾನೆ. ಈತನನ್ನು ಕರೆಸಿದ್ದರಿಂದ ಸಿಟ್ಟಾದ ಅಕ್ಬರ್‌, ‘ಆತನನ್ನು ಏಕೆ ಕರೆಸಿದ್ದಿಯಾ’ ಎಂದು ಕೇಳುತ್ತ ತನ್ನ ಬಳಿಯಿದ್ದ ಮಚ್ಚಿನಿಂದ ಹಲ್ಲೆಗೆ(Assaut) ಮುಂದಾಗಿದ್ದಾನೆ. ಇದರಿಂದ ತಪ್ಪಿಸಿಕೊಂಡ ಸದಾನಂದ ಅದೇ ಮಚ್ಚು ಕಸಿದುಕೊಂಡು ಅಕ್ಬರ್‌ ತಲೆ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶರಣಾದ ಕೂರ್ಲಿ

ಇದಾದ ಬಳಿಕ ಗಾಬರಿಯಾದ ಸದಾನಂದ ಅಸಾರ ಓಣಿ ಸಾರ್ವಜನಿಕ ಶೌಚಾಲಯದ ಬಳಿ ಕುಳಿತಿದ್ದ. ರಾತ್ರಿ ಪೆಟ್ರೋಲಿಂಗ್‌ ಮಾಡುತ್ತಿದ್ದ ಪೊಲೀಸರು ಈತನ ಕಾಲಿಗೆ ಹತ್ತಿದ್ದ ರಕ್ತವನ್ನು ಕಂಡು ಸಂಶಯದಿಂದ ವಿಚಾರಿಸಿದ್ದಾರೆ. ಆಗ ಕೂರ್ಲಿ ಘಟನೆ ಬಗ್ಗೆ ಹೇಳಿದ್ದಾನೆ. ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ ಗಸ್ತಿನವರು ಮಚ್ಚನ್ನು ಪಡೆದು ಶವವಿದ್ದ ಜಾಗಕ್ಕೆ ಆತನನ್ನು ಕರೆದುಕೊಂಡು ಹೋದಾಗ ಅಕ್ಬರ್‌ ಸ್ಥಳದಲ್ಲೆ ಮೃತಪಟ್ಟಿದ್ದು(Death) ಕಂಡಿದ್ದಾರೆ ಎನ್ನಲಾಗಿದೆ. ಶವವನ್ನು(Deadbody) ತಕ್ಷಣ ಕಿಮ್ಸ್‌ಗೆ(KIMS) ಸಾಗಿಸಲಾಗಿದೆ.

ಕೊಲೆಯಾದ ಅಕ್ಬರ್‌ ಯಾರು?

ಕಮರಿಪೇಟೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಅಕ್ಬರ್‌ ಬೈಕ್‌ ಸೀಜಿಂಗ್‌ ವ್ಯವಹಾರ ಮಾಡಿಕೊಂಡಿದ್ದ. ಈತನ ಮೇಲೆ ಉಪನಗರ ಠಾಣೆಯಲ್ಲಿ 2009, 2010-11 ಹಾಗೂ ಕಳೆದ ತಿಂಗಳದ್ದು ಸೇರಿ ಒಟ್ಟು 6 ಹಾಗೂ ಕೇಶ್ವಾಪೂರ ಪೊಲೀಸ್‌ ಠಾಣೆಯಲ್ಲಿ 2010ರಲ್ಲಿ 2 ಪ್ರಕರಣಗಳಿವೆ. ಹಲ್ಲೆ, ಜೀವ ಬೆದರಿಕೆ ಒಡ್ಡಿರುವ ದೂರು ಈತನ ಮೇಲಿತ್ತು. ಶಹನಾಝ್‌ ಅಲಿಯಾಸ್‌ ರಾಧಿಕಾ ಎಂಬಾಕೆಯನ್ನು ವಿವಾಹವಾಗಿದ್ದ. ಮಕ್ಕಳಾಗದ ಕಾರಣ ಪತ್ನಿಯ ತಂಗಿ ಮಗಳನ್ನು ಸಾಕಿಕೊಂಡಿದ್ದ.

ಶವಯಾತ್ರೆ..

ಕಿಮ್ಸ್‌ನಿಂದ ಅಕ್ಬರ್‌ ಮೃತದೇಹವನ್ನು ಪಡೆದ ಕುಟುಂಬಸ್ಥರು ಹೊಸೂರು ಮನೆಗೆ ಕೊಂಡೊಯ್ದು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಬಳಿಕ ಶವಯಾತ್ರೆ ಮೂಲಕ ತೊರವಿಹಕ್ಕಲಿನ ಸ್ಮಶಾನಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದರು. ಈ ವೇಳೆ ಸುಮಾರು 150ಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು. ಕೆಲ ರೌಡಿಶೀಟರ್‌ಗಳು ಕೂಡ ಈ ಶವಯಾತ್ರೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ಮದುವೆ ಬಳಿಕವೂ ಮುಂದುವರೆದ ಅಕ್ರಮ ಸಂಬಂಧ, ಮನೆಯವರೊಂದಿಗೆ ಸೇರಿ ಪ್ರೇಮಿಯ ಹತ್ಯೆ!

ಸ್ಥಳಕ್ಕೆ ಡಿಸಿಪಿ ಭೇಟಿ

ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಸಾಹಿಲ್‌ ಬಾಗ್ಲಾ, ಎಸಿಪಿ ವಿನೋದ ಮುಕ್ತೇದಾರ ಸೇರಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿ, ಪ್ರಾಥಮಿಕ ತನಿಖೆಯಲ್ಲಿ ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಕಂಡುಬಂದಿದೆ. ಕೊಲೆ ಸಂಬಂಧ ಆರೋಪಿ ಬಂಧಿತನಾಗಿದ್ದಾನೆ. ತನಿಖೆ ನಡೆಸುತ್ತಿದ್ದೇವೆ ಎಂದರು.

ಕೊಲೆ ಪ್ರಕರಣದ ಬಗ್ಗೆ ಡಿಸಿಪಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಮಹಾನಗರ ಪೊಲೀಸ್‌ ಆಯುಕ್ತ ಲಾಬೂರಾಮ್‌ ತಿಳಿಸಿದ್ದಾರೆ. 
 

click me!