
ಬೆಂಗಳೂರು (ಜೂ.12): ರೌಡಿಗಳ ನಿಗ್ರಹಕ್ಕೆ ವಿಶೇಷ ಪಡೆ ರಚಿಸುವಂತೆ ಮುಖ್ಯಮಂತ್ರಿ ಅವರ ಸೂಚನೆ ಬೆನ್ನಲ್ಲೇ ರಾಜಧಾನಿಯಲ್ಲಿ ಜನರಿಗೆ ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಯೊಬ್ಬನಿಗೆ ಹೆಬ್ಬಗೋಡಿ ಪೊಲೀಸರು ಬಂದೂಕಿನ ಮೂಲಕ ‘ಲಗಾಮು’ ಹಾಕಿದ್ದಾರೆ. ತಿರುಪಾಳ್ಯದ ನಿವಾಸಿ ಜೀವ (20) ಗುಂಡೇಟು ಬಿದ್ದಿದ್ದು, ಸುಲಿಗೆ ಪ್ರಕರಣ ಸಂಬಂಧ ಬಂಧಿಸಲು ಗುರುವಾರ ನಸುಕಿನಲ್ಲಿ ತೆರಳಿದ್ದ ತಮ್ಮ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆತನಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಈ ಕೃತ್ಯದಲ್ಲಿ ಆತನ ಸಹಚರ ವರುಣ್ ಬಂಧನವಾಗಿದ್ದು, ತಲೆಮರೆಸಿಕೊಂಡಿರುವ ಜೀವನ ಶಿಷ್ಯರಿಗೆ ತನಿಖೆ ಮುಂದುವರಿದಿದೆ.
ತಮ್ಮ ಮೊದಲ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ರೌಡಿಗಳ ನಿಗ್ರಹಕ್ಕೆ ತಾಲೂಕು ಮಟ್ಟದಲ್ಲಿ ವಿಶೇಷ ಪಡೆ ರಚಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದ್ದರು. ಅಲ್ಲದೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರಷ್ಟೇ ಎಸಿಪಿ ಮೇಲ್ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹ ರೌಡಿಸಂ ಮಟ್ಟ ಹಾಕುವಂತೆ ತಾಕೀತು ಮಾಡಿದ್ದರು. ಈ ಬೆನ್ನಲ್ಲೇ ನಗರದಲ್ಲಿ ಜನರಿಗೆ ಕಂಟಕವಾಗಿದ್ದ ರೌಡಿ ಗುಂಡೇಟು ಬಿದ್ದಿದೆ.
ಜೀವ(rowdysheeter jeeva) ಮೂಲತಃ ತಮಿಳುನಾಡಿನ ತಿರುವಣ್ಣಾಮಲೈನವರಾಗಿದ್ದು, ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬದುಕು ಅರಸಿ ಆತನ ಕುಟುಂಬ ಬಂದಿತ್ತು. ಹೆಬ್ಬಗೋಡಿ ಹತ್ತಿರದ ತಿರುಪಾಳ್ಯದಲ್ಲಿ ಆತ ಪರಿವಾರ ನೆಲೆಸಿದೆ. ಬಾಲ್ಯದಲ್ಲೇ ಅಡ್ದದಾರಿ ತುಳಿದ ಜೀವ, ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ. ಅಪ್ರಾಪ್ತ ವಯಸ್ಸಿನಲ್ಲೇ ಕೊಲೆ ಕೃತ್ಯದಲ್ಲಿ ಆತನ ಬಂಧನವಾಗಿತ್ತು. ಈತನ ವಿರುದ್ಧ ಕೊಲೆ, ಸುಲಿಗೆ ಹಾಗೂ ದರೋಡೆ ಸೇರಿದಂತೆ 7ಕ್ಕೂ ಹೆಚ್ಚು ಪ್ರಕರಣಗಳಿವೆ.
ಇತ್ತೀಚೆಗೆ ಹೆಬ್ಬಗೋಡಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಒಂದೇ ದಿನ 2 ಕಡೆ ಜೀವನ ತಂಡ ಸುಲಿಗೆ ಕೃತ್ಯ ಎಸಗಿ ಜನರಲ್ಲಿ ಭೀತಿ ಹುಟ್ಟಿಸಿತು. ತನ್ನ ಕಂಪನಿಯ ಉದ್ಯೋಗಿಗಳನ್ನು ಮನೆಗೆ ಡ್ರಾಪ್ ಮಾಡಿ ಬರುತ್ತಿದ್ದ ಕ್ಯಾಬ್ ಚಾಲಕ ಮನು ಬೆದರಿಸಿ ಸುಲಿಗೆ ಮಾಡಿದ್ದರು. ಈ ಬಗ್ಗೆ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ತಮಿಳುನಾಡಿನಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿದ್ದ ಜೀವ ಹಾಗೂ ಆತನ ಸೋದರರನ್ನು ಪತ್ತೆ ಹಚ್ಚಿದ್ದರು. ಆದರೆ ಆ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಆತ ಮರಳಿದ್ದ. ಕೊನೆಗೆ ಬುಧವಾರ ರಾತ್ರಿ ತಿರುಪಾಳ್ಯದಲ್ಲಿ ಜೀವ ಇರುವಿಕೆಗೆ ಬಗ್ಗೆ ಖಚಿತ ಮಾಹಿತಿ ಪಡೆದು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ಸತೀಶ್ ನೇತೃತ್ವದಲ್ಲಿ ಹೆಬ್ಬಗೋಡಿ ಪೊಲೀಸರು ಬಂಧನಕ್ಕೆ ಕಾರ್ಯಾಚರಣೆಗಿಳಿದಿದ್ದಾರೆ.
ಅಷ್ಟರಲ್ಲಿ ಮನೆಯಿಂದ ಓಡಿ ಹೋಗಿ ಸಿಂಗೇನ ಅಗ್ರಹಾರದ ನೀಲಗಿರಿ ತೋಪಿನಲ್ಲಿ ಆರೋಪಿ ಅವಿತುಕೊಂಡಿದ್ದ. ಅಲ್ಲಿಗೆ ತೆರಳಿದ ತನಿಖಾ ತಂಡದ ಮೇಲೆ ಡ್ರ್ಯಾಗರ್ ಬೀಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಕಾನ್‌ಸ್ಟೇಬಲ್ ನಾಗೇಶ್ ಅವರಿಗೆ ಪೆಟ್ಟಾಗಿದೆ. ಈ ಹಂತದಲ್ಲಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಸಬ್ ಇನ್ಸ್‌ಪೆಕ್ಟರ್ ಅಯ್ಯಪ್ಪ ಸೂಚಿಸಿದ್ದಾರೆ. ಈ ಸೂಚನೆಗೆ ಕ್ಯಾರೇ ಎನ್ನದೆ ಮತ್ತೆ ಮಚ್ಚು ಬೀಸಿದಾಗ ಆತನಿಗೆ ಕಾಲಿಗೆ ಪಿಎಸ್ಐ ಗುಂಡು ಹೊಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ