ಕರ್ನಾಟಕ ರಾಜಕೀಯದಲ್ಲಿ ಸದ್ದು ಮಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ತನಿಖೆಯನ್ನು ಮತ್ತೆ ಮಾಡುವ ಅಗತ್ಯವಿಲ್ಲವೆಂದು, ವಿಶೇಷ ತನಿಖಾ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ಹೈ ಕೋರ್ಟಿಗೆ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಆ.13): ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅನುಪಸ್ಥಿತಿಯಲ್ಲಿ ನಡೆದಿರುವ ತನಿಖೆಯನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿ.ಡಿ. ಬಹಿರಂಗ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಮತ್ತು ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್ ವಹಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸ್ತಕಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಗುರುವಾರ ಸೌಮೇಂದು ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಡೆದ ಅರ್ಜಿ ವಿಚಾರಣೆ ವೇಳೆ ಎಸ್‌ಐಟಿ ಮುಖ್ಯಸ್ಥರಿಲ್ಲದೆ ತನಿಖೆ ನಡೆಸಿರುವುದಕ್ಕೆ ಮತ್ತೆ ಆಕ್ಷೇಪಿಸಿದ ನ್ಯಾಯಪೀಠ, ಅನುಭವ ಹಾಗೂ ಹಿರಿತನ ತನಿಖೆಗೆ ನೆರವಾಗಬೇಕು ಎಂಬ ಉದ್ದೇಶದಿಂದ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಆದರೆ, ಆ ಹಿರಿಯ ಅಧಿಕಾರಿಯೇ ರಜೆಯಲ್ಲಿದ್ದರೆ ಸಮರ್ಪಕ ತನಿಖೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿತು.
ಸರ್ಕಾರದ ಪರ ಅಡ್ವೋಕೇಟ್ ಜನರಲ್ (ಎಜಿ) ಪ್ರಭುಲಿಂಗ ನಾವದಗಿ, ಎಸ್‌ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ನಡೆದ ತನಿಖೆ ಅಸಮರ್ಪಕವಾಗುವುದಿಲ್ಲ ಎಂದು ತಿಳಿಸಿದರು.
ಜಾರಿಕಿಹೊಳಿ ವಿರುದ್ಧ ಮತ್ತೊಂದು ಕೇಸ್: ಹೊಸದಾಗಿ ವಿಚಾರಣಗೆ ಹೈ ಕೋರ್ಟ್ ಸೂಚನೆ
ಅದನ್ನು ಪರಿಗಣಿಸಿದ ನ್ಯಾಯಪೀಠ, ಮುಖ್ಯಸ್ಥರು ಗೈರಾದ ಮಾತ್ರಕ್ಕೆ ಎಸ್‌ಐಟಿ ತನಿಖೆ ಅಸಮರ್ಪಕವಾಗುವುದಿಲ್ಲ ಎಂದು ಎ.ಜಿ. ಸಹ ಹೇಳಿದ್ದಾರೆ. ಅರ್ಜಿಯಲ್ಲಿ ಎಸ್‌ಐಟಿಯ ರಚನೆಯನ್ನೇ ಪ್ರಶ್ನಿಸಿರುವುದರಿಂದ ಸೂಕ್ತವಾದ ತನಿಖೆ ನಡೆದಿದೆಯೇ ಎಂಬುದನ್ನು ತಿಳಿಯಬೇಕಿದೆ. ಹಾಗಾಗಿ ಈ ಎಲ್ಲ ಅಂಶಗಳ ಬಗ್ಗೆ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ, ಎಸ್‌ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿಯೇ ಮೂರು ತಿಂಗಳು ಕಾಲ ತನಿಖೆ ನಡೆದಿದೆ. ಸೌಮೇಂದು ತಮ್ಮ ಜವಾಬ್ದಾರಿಯನ್ನು ಬೇರೊಬ್ಬರಿಗೆ ವರ್ಗಾಯಿಸಿಲ್ಲ. ವರದಿ ಸಲ್ಲಿಸುವ ಕೆಲಸವನ್ನು ಮಾತ್ರ ವರ್ಗಾಯಿಸಿದ್ದಾರೆ. ಅಂದ ಮಾತ್ರಕ್ಕೆ ಎಸ್‌ಐಟಿ ಮುಖ್ಯಸ್ಥರು ತನಿಖೆಯ ಉಸ್ತುವಾರಿ ವಹಿಸಿದಂತಾಗುವುದಿಲ್ಲ. ಮುಖರ್ಜಿ ಅವರು ತನಿಖೆ ಸರಿಯಾಗಿ ನಡೆದಿದೆಯೇ ಇಲ್ಲವೇ ಪರಿಶೀಲಿಸಬೇಕಿತ್ತು ಎಂದು ನುಡಿದ ನ್ಯಾಯಪೀಠ, ತನಿಖಾ ವರದಿಯನ್ನು ಪರಿಶೀಲಿಸಿ ಪ್ರತ್ಯೇಕ ಪ್ರಮಾಣ ಪತ್ರ ಸಲ್ಲಿಸುವ ಬಗ್ಗೆ ಸಂಜೆ 4 ಗಂಟೆಯೊಳಗೆ ಮುಖರ್ಜಿ ತಮ್ಮ ನಿಲುವನ್ನು ತಿಳಿಸಬೇಕು ಎಂದು ಸೂಚಿಸಿ ಕೆಲ ಕಾಲ ವಿಚಾರಣೆ ಮುಂದೂಡಿತು.
ವಿಚಾರಣೆ ಮತ್ತೆ ಆರಂಭವಾದಾಗ ಎಸ್‌ಐಟಿ ಪರ ವಕೀಲ ಪಿ.ಪ್ರಸನ್ನ ಕುಮಾರ್, ನ್ಯಾಯಾಲಯಕ್ಕೆ ಹಿಂದೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹೇಳಿರುವ ಹೇಳಿಕೆಗೆ ಬದ್ಧವಾಗಿರುವುದಾಗಿ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ. ಎಸ್‌ಐಟಿ ತನಿಖಾ ವರದಿಯನ್ನು ಮರು ಪರಿಶೀಲಿಸಲು ಮುಖರ್ಜಿ ಸಿದ್ಧರಿಲ್ಲ ಎಂದು ತಿಳಿಸಿದರು.
ನಂತರ ಅರ್ಜಿ ವಿಚಾರಣೆಯನ್ನು ಸೆ.3ಕ್ಕೆ ಮುಂದೂಡಿದ ನ್ಯಾಯಪೀಠ, ಪ್ರಕರಣ ಕುರಿತ ಅಂತಿಮ ತನಿಖಾ ವರದಿ ಸಲ್ಲಿಸದಂತೆ ಎಸ್‌ಐಟಿಗೆ ಸೂಚಿಸಿ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದುವರಿಸಿತು.
ಇಬ್ಬರು ಅಧಿಕಾರಿಗಳಿಂದ ತನಿಖೆ
ಎಸ್‌ಐಟಿ ತನಿಖೆಗೆ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಅವರು ತನಿಖೆ ನಡೆಸಿದ್ದಾರೆ. ತಾವು ರಜೆ ಮೇಲೆ ತೆರಳಿದ ನಂತರ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ತನಿಖೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಹೀಗಾಗಿ, ವರದಿಯನ್ನು ಮರು ಪರಿಶೀಲಿಸುವ ಅಗತ್ಯವಿಲ್ಲ ಎಂದು ಸೌಮೇಂದು ಮುಖರ್ಜಿ ಅವರು ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ತಿಳಿಸಿದ್ದರು.
ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಮೂಡಿಸಿದ ಜಾರಕಿಹೊಳಿ-ಯೋಗೇಶ್ವರ್
ಸೀಡಿ ಕೇಸ್ ತನಿಖಾಧಿಕಾರಿ ಸೇರಿ 6 ಮಂದಿಗೆ ಪದಕ
ಬೆಂಗಳೂರು: ಅಪರಾಧ ಪ್ರಕರಣಗಳ ಉತ್ತಮ ತನಿಖೆಗೆ ನೀಡುವ ಕೇಂದ್ರ ಗೃಹ ಸಚಿವರ ಪದಕ-2021ಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ಸ್ಫೋಟ ಪ್ರಕರಣದ ತನಿಖಾಧಿಕಾರಿ ಎಚ್.ಎಂ.ಧರ್ಮೇಂದ್ರ ಸೇರಿದಂತೆ ಆರು ಮಂದಿ ಪೊಲೀಸರು ಭಾಜನರಾಗಿದ್ದಾರೆ.
ಸಿಸಿಬಿ ಎಸಿಪಿ ಎಚ್.ಎನ್.ಧರ್ಮೇಂದ್ರ, ಮಂಗಳೂರು ಉಪ ವಿಭಾಗದ ಡಿವೈಎಸ್ಪಿ ಪರಮೇಶ್ವರ ಹೆಗಡೆ, ಬಿಡಿಎ ಡಿವೈಎಸ್ಪಿ ಸಿ.ಬಾಲಕೃಷ್ಣ, ಕೆಐಎ ಎಸ್‌ಐಟಿ ಮನೋಜ್ ಎನ್.ಹೂವಳೆ, ದಾವಣಗೆರೆ ಜಿಲ್ಲೆ ಹೊನ್ನಾಳಿ ಇನ್ಸ್‌ಪೆಕ್ಟರ್ ಟಿ.ವಿ.ದೇವರಾಜ್ ಹಾಗೂ ಹಳೆ ಹುಬ್ಬಳ್ಳಿ ಠಾಣೆ ಇನ್ಸ್‌ಪೆಕ್ಟರ್ ಶಿವಪ್ಪ ಶೆಟ್ಟಿಪ್ಪ ಕಮಟಗಿ ಅವರು ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ರಮೇಶ್ ಜಾರಕಿಹೊಳಿ ಕೇಸ್ ಕ್ಲೋಸ್ ಆಗೋಲ್ಲ