ಕಟ್ಟಡದಿಂದ ಜಿಗಿದು ರಿಯಲ್‌ ಎಸ್ಟೇಟ್‌ ಏಜೆಂಟ್‌ ಆತ್ಮಹತ್ಯೆ

Kannadaprabha News   | Asianet News
Published : Feb 27, 2021, 07:18 AM IST
ಕಟ್ಟಡದಿಂದ ಜಿಗಿದು ರಿಯಲ್‌ ಎಸ್ಟೇಟ್‌ ಏಜೆಂಟ್‌ ಆತ್ಮಹತ್ಯೆ

ಸಾರಾಂಶ

ಬಿಡಿಎ ನಿವೇಶನ ಕೊಡಿಸೋದಾಗಿ ವಂಚನೆ| ಬಂಧಿತನಾಗಿದ್ದ ಸಿದ್ದಲಿಂಗಸ್ವಾಮಿ| ಮಹಜರ್‌ಗೆಂದು ಕರೆತಂದಾಗ ಕಟ್ಟಡದಿಂದ ಜಿಗಿದು ಸಾವು| ಬಿಡಿಎ ಸೈಟ್‌ಗಾಗಿ ವ್ಯಾಪಾರಿಯಿಂದ 16 ಲಕ್ಷ ಹಣ| ಬಳಿಕ ಸೈಟ್‌ ಕೊಡಿಸದೆ ವಂಚಿಸಿದ್ದ ಸಿದ್ದಲಿಂಗಸ್ವಾಮಿ| ಈ ಸಂಬಂಧ ಪೊಲೀಸರಿಗೆ ವ್ಯಾಪಾರಿ ದೂರು|   

ಬೆಂಗಳೂರು(ಫೆ.27): ಬಿಡಿಎ ನಿವೇಶನ ಕೊಡಿಸುವುದಾಗಿ ಜನರಿಗೆ ವಂಚಿಸಿದ ಆರೋಪ ಹೊತ್ತಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ವೊಬ್ಬ ಪೊಲೀಸ್‌ ಮಹಜರು ವೇಳೆ ತನ್ನ ಮನೆಯ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿದ್ಯಾರಣ್ಯಪುರ ಸಮೀಪ ಶುಕ್ರವಾರ ನಡೆದಿದೆ.

ವಿದ್ಯಾರಣ್ಯಪುರ ನಿವಾಸಿ ಸಿದ್ದಲಿಂಗಸ್ವಾಮಿ (63) ಮೃತ ದುರ್ದೈವಿ. ವಂಚನೆ ಪ್ರಕರಣ ಸಂಬಂಧ ಮಧ್ಯಾಹ್ನ 3.40ರ ಸುಮಾರಿಗೆ ಆರೋಪಿಯನ್ನು ಮನೆಗೆ ಮಹಜರು ಸಲುವಾಗಿ ಪೊಲೀಸರು ಕರೆದುಕೊಂಡು ಹೋದಾಗ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸಿದ್ದಲಿಂಗಸ್ವಾಮಿ, ನಗರದಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ. ತನ್ನ ಪತ್ನಿ ಮತ್ತು ಮಕ್ಕಳ ಜತೆ ವಿದ್ಯಾರಣ್ಯಪುರದಲ್ಲಿ ಆತ ನೆಲೆಸಿದ್ದ. ಬಿಡಿಎನಲ್ಲಿ ನಿವೇಶನ ಕೊಡಿಸುವುದಾಗಿ ಹಾಗೂ ಮಂಜೂರಾಗಿರುವ ನಿವೇಶನಗಳಿಗೆ ಬದಲಿ ನಿವೇಶನ ಕೊಡಿಸುವುದಾಗಿ ಹಣ ಪಡೆದು ಜನರಿಗೆ ವಂಚಿಸಿದ ಆರೋಪ ಎದುರಿಸುತ್ತಿದ್ದ.

ಮೈಸೂರು ಜಿಲ್ಲೆಯಲ್ಲೊಂದು ಮನಕಲಕುವ ಘಟನೆ: ತಮ್ಮನ ಆತ್ಮಹತ್ಯೆ ವಿಷಯ ತಿಳಿದು ಅಣ್ಣನೂ ಸೂಸೈಡ್‌

ತಮಗೆ ಬಿಡಿಎ ನಿವೇಶನ ಮರು ಹಂಚಿಕೆ ಮಾಡಿಕೊಡುವುದಾಗಿ 16 ಲಕ್ಷ ಹಣ ಪಡೆದು ಸಿದ್ದಲಿಂಗಸ್ವಾಮಿ ಮೋಸ ಮಾಡಿದ್ದಾನೆ ಎಂದು 2020ರ ಡಿಸೆಂಬರ್‌ ತಿಂಗಳಲ್ಲಿ ಪಾನಿಪುರಿ ವ್ಯಾಪಾರಿ ನೀಡಿದ ದೂರಿನ ಮೇರೆಗೆ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ಪೊಲೀಸರ ಬಂಧನ ಭೀತಿಯಿಂದ ಆತ ನಗರ ತೊರೆದಿದ್ದ.

ಕೊನೆಗೆ ಮಳವಳ್ಳಿ ತಾಲೂಕಿನಲ್ಲಿ ಫೆ.24ರಂದು ಆರೋಪಿಯನ್ನು ಬಂಧಿಸಿದ ಪೊಲೀಸರು, ಮರು ದಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ ಕಸ್ಟಡಿಗೆ ಪಡೆದಿದ್ದರು. ಅಲ್ಲದೆ ಆರೋಪಿಯಿಂದ ಬಿಡಿಎ ವಿಶೇಷ ಆಯುಕ್ತರ ಹೆಸರಿನಲ್ಲಿದ್ದ ನಕಲಿ ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು. ವಿಚಾರಣೆ ವೇಳೆ ವಂಚನೆಗೆ ಸಂಬಂಧಿಸಿದ ಕೆಲ ದಾಖಲೆಗಳು ಮನೆಯಲ್ಲಿವೆ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದ. ಅಂತೆಯೇ ಆತನ ಮನೆಯಲ್ಲಿ ಮಹಜರು ಮಾಡುವ ಸಲುವಾಗಿ ಶುಕ್ರವಾರ ಮಧ್ಯಾಹ್ನ 3.40 ಸುಮಾರಿಗೆ ಪೊಲೀಸರು ಕರೆದುಕೊಂಡು ಹೋಗಿದ್ದರು. ಆ ಸಮಯದಲ್ಲಿ ಆರೋಪಿಯ ಪತ್ನಿ ಮತ್ತು ಮಗಳು ಹಾಜರಿದ್ದರು. ಮನೆಯಲ್ಲಿ ಕಂಪ್ಯೂಟರ್‌ ಅನ್ನು ಪರಿಶೀಲಿಸಿದ ಬಳಿಕ ಸಿದ್ದಲಿಂಗಸ್ವಾಮಿ, ಅಡುಗೆ ಮನೆಯಲ್ಲಿ ಕೆಲವು ದಾಖಲೆ ಇಟ್ಟಿರುವುದಾಗಿ ಹೇಳಿದ. ಆಗ ಆತನಿಗೆ ದಾಖಲೆ ತರುವಂತೆ ಸೂಚಿಸಲಾಯಿತು. ಈ ಹಂತದಲ್ಲಿ ಸಿಬ್ಬಂದಿಯನ್ನು ದೂಡಿ ಅಡುಗೆ ಮನೆ ಬಾಗಿಲು ತೆಗೆದು ಕ್ಷಣಾರ್ಧದಲ್ಲಿ ಆತ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವಮಾನ ತಾಳಲಾರದೆ ಸಾವಿಗೆ ಶರಣು

ಪೊಲೀಸರು ಸಿದ್ದಲಿಂಗಸ್ವಾಮಿಯನ್ನು ಆತನ ಮನೆಗೆ ಕರೆತಂದಿದ್ದರು. ಈ ವೇಳೆ ಸಿದ್ದಲಿಂಗಸ್ವಾಮಿಯ ವ್ಯವಹಾರಗಳು ಕುಟುಂಬಸ್ಥರಿಗೆ ತಿಳಿದಿರಲಿಲ್ಲ. ಈ ವೇಳೆ ಪೊಲೀಸರೊಂದಿಗೆ ಸಿದ್ದಲಿಂಗ ಸ್ವಾಮಿಯನ್ನು ನೋಡಿದ ಕುಟುಂಬಸ್ಥರು, ‘ಯಾಕೆ ಅವರನ್ನು ಕರೆತಂದಿದ್ದೀರಾ’ ಎಂದು ಪೊಲೀಸರನ್ನು ವಿಚಾರಿಸಿದ್ದಾರೆ. ಈ ವೇಳೆ ವಂಚನೆ ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇದರಿಂದ ಕಟುಂಬಸ್ಥರು ಪೊಲೀಸರ ಮುಂದೆ ತಲೆ ತಗ್ಗಿಸಿ ನಿಂತಿದ್ದಾರೆ. ಇದನ್ನು ನೋಡಿದ ಸಿದ್ದಲಿಂಗಸ್ವಾಮಿ ತೀವ್ರವಾಗಿ ನೊಂದಿದ್ದಾನೆ. ಬಳಿಕ ಆತ ಮಹಡಿಗೆ ತೆರಳಿದ್ದು, ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು