
ಬೆಂಗಳೂರು (ಆ.28): ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ತೆಲಂಗಾಣ ಕಾಂಗ್ರೆಸ್ ನಾಯಕ ಕುಂಭಂ ಶಿವಕುಮಾರ್ ರೆಡ್ಡಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಕುಂಭಂ ಶಿವಕುಮಾರ್ ರೆಡ್ಡಿ ತೆಲಂಗಾಣ ನಾರಾಯಣ್ ಪೇಟ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದು, ನಗರದ ಪ್ರತಿಷ್ಟಿತ ಖಾಸಗಿ ಹೊಟೇಲ್ನಲ್ಲಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಶಿವಕುಮಾರ್ ರೆಡ್ಡಿ ಕಳೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ನಾರಾಯಣ್ ಪೇಟ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಈ ಹಿಂದೆ ಹೈದರಾಬಾದ್ ಪಂಜಾಗುಟ್ಟ ಠಾಣೆಯಲ್ಲಿ ಆರೋಪಿ ವಿರುದ್ದ ಎಫ್ಐಆರ್ ದಾಖಲಾಗಿತ್ತು. ಇದೀಗ ಬೆಂಗಳೂರಿನಲ್ಲೂ ಎಫ್ಐಆರ್ ದಾಖಲಾಗಿದ್ದು, ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸರ್ಕಾರವನ್ನು ಟೀಕಿಸಿದರೆ ಕೇಸ್ ಹಾಕುತ್ತಿದ್ದಾರೆ: ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರ ಟೀಕಿಸಿ ಪೋಸ್ಟ್ ಹಾಕಿದವರ ವಿರುದ್ಧ ಎಫ್‌ಐಆರ್ ದಾಖಲಿಸುವ, ಸಂಬಂಧವೇ ಇಲ್ಲದ ವಿಚಾರಕ್ಕೆ ಗೂಂಡಾ ಕಾಯ್ದೆಯಡಿ ಬಂಧಿಸುವ ಕೆಲಸವಾಗುತ್ತಿದೆ. ಹಿಂದಿನಂತೆ ಪುನಃ ಅಧಿಕಾರ ಕಳೆದುಕೊಳ್ಳಬಾರದು ಎಂದಾದರೆ ಹಿಂದೂಗಳ ಮೇಲಿನ ದಬ್ಬಾಳಿಕೆಯನ್ನು ಸರ್ಕಾರ ನಿಲ್ಲಿಸಬೇಕು ಎಂದು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಭಾನುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಸ್ತ ಹಿಂದೂಪರ ಒಕ್ಕೂಟದಿಂದ ‘ಮೇವಾತ್, ದೆಹಲಿ ಮತ್ತು ಮಣಿಪುರ ಹಿಂಸಾಚಾರದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಮತ್ತು ನ್ಯಾಯ ಒದಗಿಸಲು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಹೆಣಕ್ಕೆ ಬಳಸುವ ಉಪ್ಪು ಕೈದಿಗಳ ಆಹಾರಕ್ಕೆ?: ವಿಡಿಯೋ ವೈರಲ್
ಸರ್ಕಾರಿ ನೌಕರಿಯಲ್ಲಿದ್ದು ಆಡಳಿತ ಪಕ್ಷ, ಸರ್ಕಾರವನ್ನು ಟೀಕಿಸಿದವರಿಗೆ ನೋಟಿಸ್ ನೀಡುವ, ಸಂಬಳ ತಡೆಹಿಡಿಯುವ ಕೆಲಸ ಮಾಡಲಾಗುತ್ತಿದೆ. ಫೇಸ್‌ಬುಕ್ ಸೇರಿ ಮತ್ತಿತರೆಡೆ ಆಡಳಿತ ನೀತಿ ಖಂಡಿಸಿದರೆ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಸಂಬಂಧವೇ ಇಲ್ಲದ ವಿಚಾರಕ್ಕೆ ಪುನೀತ್ ಕೆರೆಹಳ್ಳಿ ಅಂತವರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವ ಪ್ರಕ್ರಿಯೆಗಳನ್ನು ಸರ್ಕಾರ ಮಾಡುತ್ತಿದೆ ಎಂದರು.
ಪುನೀತ್ ಕೆರೆಹಳ್ಳಿ ಅವರಿಗೆ ಆಗಿರುವುದು ನಿಮಗೂ ಆಗಬಹುದು. ಹೀಗಾಗಿ ಪುನೀತ್ ಜೊತೆ ನಾವೆಲ್ಲ ನಿಲ್ಲುತ್ತೇವೆ ಎಂಬ ಸಂದೇಶವನ್ನು ಸರ್ಕಾರಕ್ಕೆ ನೀಡಬೇಕಿದೆ. ದಲಿತರ ಅಭಿವೃದ್ಧಿ ಅನುದಾನವನ್ನು ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಜಿಲ್ಲೆಯಲ್ಲೇ ಪೌರಕಾರ್ಮಿಕರು ಮಲವನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟಿಸುವ ಮಟ್ಟಕ್ಕೆ ಆಡಳಿತ ಯಂತ್ರ ಕುಸಿದಿದೆ ಎಂದು ಟೀಕಿಸಿದರು.
ಮಾನವ-ಪ್ರಾಣಿ ಸಂಘರ್ಷ ಪರಿಹಾರಕ್ಕೆ ಅವಿರತ ಪ್ರಯತ್ನವಿರಲಿ: ರಿಷಬ್ ಶೆಟ್ಟಿ
ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ ಮಾತನಾಡಿ, ಮೇವಾತ್, ದೆಹಲಿ ಮತ್ತು ಮಣಿಪುರ ಹಿಂಸಾಚಾರದ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು. ರಾಷ್ಟ್ರ ರಕ್ಷಣಾ ಪಡೆಯ ಪೂರ್ಣಿಮಾ ಬಾರಿಮನಿ ಮಾತನಾಡಿದರು. ರಾಷ್ಟ್ರ ಧರ್ಮ ಸಂಘಟನೆಯ ಸಂತೋಷ್ ಕೆಂಚಾಂಬಾ, ಹಿಂದವೀ ಜಟ್ಕಾ ಮೀಟ್‌ನ ಮುನೇಗೌಡ, ಶಿವಪ್ರಸಾದ್, ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ರಾಮಕೃಷ್ಣಪ್ಪ, ಶಿವಗರ್ಜನೆ ಸೇನೆ ಅಧ್ಯಕ್ಷ ಪ್ರವೀಣ ಮಾನೆ, ರಾಷ್ಟ್ರೀಯ ಹಿಂದೂ ಪರಿಷದ್ ಅಧ್ಯಕ್ಷ ವಿಕ್ರಮ ಶೆಟ್ಟಿ, ರಾಷ್ಟ್ರ ರಕ್ಷಾ ಸೇನೆಯ ಸುರೇಶ್‌ಗೌಡ, ನ್ಯಾಯವಾದಿ ದೊರೆರಾಜು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ