ಅನ್ಯಧರ್ಮದ ಯುವಕನ ಜತೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಬುರ್ಖಾಧಾರಿ ಯುವತಿಯನ್ನು ತಡೆದು ನಿಂದಿಸಿ ವಿಡಿಯೋ ಸೆರೆಹಿಡಿದ ಪ್ರಕರಣ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರು (ಆ.28): ಅನ್ಯಧರ್ಮದ ಯುವಕನ ಜತೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಬುರ್ಖಾಧಾರಿ ಯುವತಿಯನ್ನು ತಡೆದು ನಿಂದಿಸಿ ವಿಡಿಯೋ ಸೆರೆಹಿಡಿದ ಪ್ರಕರಣ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೋಲಾರ ಮೂಲದ ಜಾಕೀರ್ ಅಹಮದ್(22) ಬಂಧಿತ. ಇತ್ತೀಚೆಗೆ ಅನ್ಯಧರ್ಮದ ಯುವಕನ ಜತೆಗೆ ದ್ವಿಚಕ್ರ ವಾಹನದಲ್ಲಿ ಬುರ್ಖಾಧಾರಿ ಯುವತಿ ತೆರಳುವಾಗ ಆರೋಪಿ ದ್ವಿಚಕ್ರ ವಾಹನ ಅಡ್ಡಗಟ್ಟಿಯುವತಿಯನ್ನು ನಿಂದಿಸಿದ್ದ. ಬುರ್ಖಾ ತೆಗೆಯುವಂತೆ ಯುವತಿಯನ್ನು ಒತ್ತಾಯಿಸಿದ್ದ.
ಯುವತಿ ಬುರ್ಖಾ ತೆಗೆಯಲು ನಿರಾಕರಿಸಿದ್ದಕ್ಕೆ ನಿಂದಿಸಿದ್ದ. ಇದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಟ್ವಿಟರ್‌ನಲ್ಲಿ ಹಲವರು ವಿಡಿಯೋವನ್ನು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ದಾಖಲಾದ 24 ತಾಸಿನೊಳಗೆ ವಿಡಿಯೋ ಮೂಲ ಹುಡುಕಿ ಆರೋಪಿ ಜಾಕೀರ್ ಅಹಮದ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮುನೇನಕೊಪ್ಪ, ಚಿಕ್ಕನಗೌಡ್ರ ಕಾಂಗ್ರೆಸ್‌ಗೆ ಬರ್ತಾರೆ: ಸಚಿವ ಸಂತೋಷ್ ಲಾಡ್
ಬೈಕ್‌ಗೆ ಗುದ್ದಿಸಿ ಕೆಳಗೆ ಬಿದ್ದವರ ಬಳಿ ಇದ್ದ 5 ಲಕ್ಷ ಕಿತ್ತುಕೊಂಡು ಪರಾರಿ: ಇಬ್ಬರು ಖಾಸಗಿ ಕಂಪನಿ ಉದ್ಯೋಗಿಗಳು ದ್ವಿಚಕ್ರ ವಾಹನದಲ್ಲಿ ಹಣ ತೆಗೆದುಕೊಂಡು ಹೋಗುವಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಬಂದ ಇಬ್ಬರು ದುಷ್ಕರ್ಮಿಗಳು .5 ಲಕ್ಷ ಹಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುಬ್ರಹ್ಮಣ್ಯಪುರ ನಿವಾಸಿ ಪ್ರಭಾಂಜನ್ ಕುಮಾರ್ ಹಣ ಕಳೆದುಕೊಂಡವರು. ಯಶವಂತಪುರ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿರುವ ಪ್ರಭಾಂಜನ್‌ಕುಮಾರ್ ಆ.23ರಂದು ಬೆಳಗ್ಗೆ 10 ಗಂಟೆಗೆ ಕಂಪನಿಗೆ ಕೆಲಸಕ್ಕೆ ತೆರಳಿದ್ದರು.
ಈ ವೇಳೆ ಕಂಪನಿ ಮ್ಯಾನೇಜರ್, ಬಸವನಗುಡಿಯ ನ್ಯಾಷನಲ್ ಕಾಲೇಜು ಬಳಿ ಜಯಂತಿಲಾಲ್ ಎಂಬುವವರು 5 ಲಕ್ಷ ಕೊಡುತ್ತಾರೆ. ಆ ಹಣವನ್ನು ಪಡೆದುಕೊಂಡು ಬರುವಂತೆ ಸೂಚಿಸಿದ್ದಾರೆ. ಮತ್ತೊಬ್ಬ ಉದ್ಯೋಗಿ ಶರತ್‌ಗೆ ಜಯಂತಿಲಾಲ್ ಅವರ ಮನೆ ವಿಳಾಸ ಗೊತ್ತಿದ್ದು, ಅವರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಅದರಂತೆ ಪ್ರಭಾಂಜನ್ ಮತ್ತು ಶರತ್ ದ್ವಿಚಕ್ರ ವಾಹನದಲ್ಲಿ ಬಸವನಗುಡಿಯ ನ್ಯಾಷನಲ್‌ಗೆ ಬಳಿ ಬಂದು ಜಯಂತಿಲಾಲ್ ಅವರ ಬಳಿ 5 ಲಕ್ಷ ಪಡೆದುಕೊಂಡಿದ್ದಾರೆ. ಬಳಿಕ ಆ ಹಣವನ್ನು ಬ್ಯಾಗ್‌ಗೆ ಹಾಕಿಕೊಂಡು ಯಶವಂತಪುರದ ಕಡೆಗೆ ಹೊರಟ್ಟಿದ್ದಾರೆ.
ಸೌಜನ್ಯ ಕೇಸ್ ಮರುತನಿಖೆಗಾಗಿ ವೀರೇಂದ್ರ ಹೆಗ್ಗಡೆ ಕುಟುಂಬ ಹೈಕೋರ್ಟ್‌ಗೆ
ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಹಾಲಕ್ಷ್ಮಿ ಲೇಔಟ್‌ನ ಕಮಲಮ್ಮನಗುಡಿ ಬಳಿಯ 6ನೇ ಕ್ರಾಸ್‌ನಲ್ಲಿ ಹೋಗುವಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪ್ರಭಾಂಜನ್‌ನ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾರೆ. ಹಿಂಬದಿ ಕುಳಿತಿದ್ದ ದುಷ್ಕರ್ಮಿ ಏಕಾಏಕಿ ಪ್ರಭಾಂಜನ್ ಬಳಿಯಿದ್ದ ಹಣದ ಬ್ಯಾಗ್ ಕಿತ್ತುಕೊಂಡಿದ್ದಾನೆ. ಬಳಿಕ ದ್ವಿಚಕ್ರ ವಾಹನದಲ್ಲಿ ಬಂದಷ್ಟೇ ವೇಗದಲ್ಲಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಭಾಂಜನ್ ದೂರು ನೀಡಿದ್ದಾರೆ. ಗೊತ್ತಿದ್ದವರೇ ಹಿಂಬಾಲಿಸಿ ಹಣ ಕಿತ್ತುಕೊಂಡು ಪರಾರಿಯಾಗಿರುವ ಶಂಕೆಯಿದೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.