ಮುನಿರತ್ನಗೆ ಜಾಮೀನು ಆದ್ರೆ ಬಲಾತ್ಕಾರ ಸಂಕಷ್ಟ..!

Published : Sep 20, 2024, 05:00 AM IST
ಮುನಿರತ್ನಗೆ ಜಾಮೀನು ಆದ್ರೆ ಬಲಾತ್ಕಾರ ಸಂಕಷ್ಟ..!

ಸಾರಾಂಶ

ಕಗ್ಗಲಿಪುರ ಠಾಣೆಗೆ ಬಂದ ಮಹಿಳೆ ತನ್ನ ಮೇಲೆ 2020ರಿಂದ 2022ರವರೆಗೆ ಬಲಾತ್ಕಾರ ನಡೆಸಿ, ಹನಿಟ್ರ್ಯಾಪ್‌ಗೆ ಬಳಸಿಕೊಂಡಿರುವ ಕುರಿತು ದೂರು ಕೊಟ್ಟಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ದೂರು ಪರಿಶೀಲಿಸಿದ ಠಾಣೆಯ ಅಧಿಕಾರಿಗಳು ನಂತರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಮನಗರ(ಸೆ.20):  ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ ಹಾಗೂ ಜಾತಿನಿಂದನೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿರುವ ರಾಜರಾಜೇಶ್ವರಿ ನಗರ ಕ್ಷೇತ್ರ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿ, ಹನಿಟ್ರ್ಯಾಪ್‌ಗೆ ಬಳಸಿಕೊಂಡಿರುವ ಆರೋಪ ಕೇಳಿ ಬಂದಿದೆ.

ಸಮಾಜ ಸೇವಕಿಯಾಗಿ ಗುರುತಿಸಿಕೊಂಡು ಬಿಜೆಪಿಯಲ್ಲೂ ಸಕ್ರಿಯವಾಗಿರುವ ರಾಜರಾಜೇಶ್ವರಿ ನಗರದ ಸುಮಾರು 40 ವರ್ಷದ ಮಹಿಳೆ ಬುಧವಾರ ತಡರಾತ್ರಿ ಮುನಿರತ್ನ, ಅವರ ಗನ್‌ಮ್ಯಾನ್ ವಿಜಯಕುಮಾ‌ರ್, ಸುಧಾಕರ, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ ಎಂಬುವರ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಜೆಪಿ ಶಾಸಕ ಮುನಿರತ್ನಗೆ ಅಟ್ರಾಸಿಟಿ ಕೇಸಿನಲ್ಲಿ ಜಾಮೀನು ಮಂಜೂರು!

ಮುನಿರತ್ನ ಸೇರಿ 7 ಮಂದಿ ವಿರುದ್ದ ಐಟಿ ಆಕ್ಟ್ 2000 (U/S-66 - 66(E)), IPC 1860 (U/S-354 (A), 354 C, 376 (2)(N), 506, 504, 120B, 149, 384, 406, 308 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ನೊಂದ ಮಹಿಳೆ ದೂರು ನೀಡುವ ಸಲುವಾಗಿ ಬುಧವಾರ ಮಧ್ಯಾಹ್ನ ರಾಮನಗರದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಮಹಿಳೆಯನ್ನು ವಿಚಾರಿಸಿ ಮಾಹಿತಿ ಪಡೆದ ಪೊಲೀಸರು, ಕೃತ್ಯ ನಡೆದ ಸ್ಥಳ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿಗೇ ಹೋಗಿ ದೂರು ಕೊಡುವಂತೆ ಸೂಚಿಸಿದ್ದಾರೆ.

ಅದರಂತೆ, ಕಗ್ಗಲಿಪುರ ಠಾಣೆಗೆ ಬಂದ ಮಹಿಳೆ ತನ್ನ ಮೇಲೆ 2020ರಿಂದ 2022ರವರೆಗೆ ಬಲಾತ್ಕಾರ ನಡೆಸಿ, ಹನಿಟ್ರ್ಯಾಪ್‌ಗೆ ಬಳಸಿಕೊಂಡಿರುವ ಕುರಿತು ದೂರು ಕೊಟ್ಟಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ದೂರು ಪರಿಶೀಲಿಸಿದ ಠಾಣೆಯ ಅಧಿಕಾರಿಗಳು ನಂತರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರಿಂದ ಸ್ಥಳ ಮಹಜರು:

ಮಹಿಳೆಯ ದೂರಿನನ್ವಯ ಪ್ರಕರಣದ ತನಿಖೆ ಆರಂಭಿಸಿದ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದ ಪೊಲೀಸರ ತಂಡ ರೆಸಾರ್ಟ್, ಹೋಟೆಲ್ ಹಾಗೂ ಹೋಂ ಸ್ಟೇಗಳ ಮಹಜರು ನಡೆಸಿತು. ಶಾಸಕ ಮುನಿರತ್ನ ತನ್ನನ್ನು ಹಾಗೂ ಇತರ ಮಹಿಳೆಯರನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿರುವ ರೆಸಾರ್ಟ್, ಹೋಟೆಲ್ ಹಾಗೂ ಹೋಂ ಸ್ಟೇಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ದೂರಿನಲ್ಲಿ ಏನಿದೆ ?:

ಕೋವಿಡ್ ಸಂದರ್ಭದಲ್ಲಿ ನನ್ನ ಸೇವಾ ಕಾರ್ಯ ಗುರುತಿಸಿ ವಾಟ್ಸ್‌ಆ್ಯಪ್‌ ಕರೆ ಮಾಡಿದ್ದ ಮುನಿರತ್ನ, ‘ನಾನು ನಿಮ್ಮ ಭಾಗದ ಶಾಸಕ. ನಿಮ್ಮ ಬಗ್ಗೆ ಕೇಳಿದ್ದೀನಿ. ನನ್ನನ್ನು ಬಂದು ಭೇಟಿ ಮಾಡಿ’ ಎಂದಿದ್ದರು. ಅದರಂತೆ, ಮರುದಿನ ರಾಮಯ್ಯ ಸಮಾಧಿ ಹತ್ತಿರವಿರುವ ಅವರ ಆಫೀಸ್‌ನಲ್ಲಿ ಭೇಟಿ ಮಾಡಿ ಪರಿಚಯ ಮಾಡಿಕೊಂಡಿದ್ದೆ. ಆಗ ಮುಂದೊಂದು ದಿನ ಸಹಾಯ ಕೇಳುತ್ತೇನೆ ಮಾಡುವಂತೆ ಕೇಳಿಕೊಂಡಿದ್ದರು. ನನ್ನೊಂದಿಗೆ ಸ್ನೇಹ ಬೆಳೆಸಿಕೊಂಡ ಮುನಿರತ್ನ, ಆಗಾಗ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದರು. ಒಮ್ಮೆ ನಗ್ನವಾಗಿ ಕರೆ ಮಾಡುವಂತೆ ಒತ್ತಾಯಿಸಿದಾಗ, ನಾನು ನಿರಾಕರಿಸಿದೆ.

ಒಮ್ಮೆ ಕರೆ ಮಾಡಿ, ನಿಮ್ಮಿಂದ ಒಂದು ಸಹಾಯವಾಗಬೇಕು ಎಂದು ಕೇಳಿ, ಸ್ಥಳವೊಂದಕ್ಕೆ ಬರಲು ಸೂಚಿಸಿದ್ದರು. ಅದರಂತೆ, ನಾನು ಹೋದಾಗ ನಿನ್ನ ನೋಡಿದರೆ ಮೈ ಜುಮ್ ಎನ್ನುತ್ತದೆ ಎನ್ನುತ್ತಾ ತಬ್ಬಿಕೊಳ್ಳಲು ಮುಂದಾದರು. ನಾನು ಆಕ್ಷೇಪಿಸಿದಾಗ, ರಾಜಕೀಯಕ್ಕೆ ಬರಬೇಕಾದರೆ ಇವೆಲ್ಲಾ ಕಾಮನ್ ಎಂದು ಹೇಳಿ ಮುಂದುವರಿದರು.

ನಾನು ಕಿರುಚಿಕೊಳ್ಳುತ್ತೇನೆ ಎಂದಾಗ ‘ನಾನು ಶಾಸಕ. ಅಪಾರ ಜನಬೆಂಬಲವಿದೆ. ನಿನ್ನ ವಿರುದ್ದವೇ ಕಂಪ್ಲೆಂಟ್ ಮಾಡುತ್ತೇನೆ. ಸುಮ್ಮನಿದ್ದರೆ ಸರಿ’ ಎಂದು ಅತ್ಯಾಚಾರ ಎಸಗಿದ್ದಾರೆ. ಇಲ್ಲಿ ನಡೆದ ವಿಷಯವನ್ನು ಯಾರಿಗೂ ತಿಳಿಸಬೇಡ. ಈ ಕೊಠಡಿಯಲ್ಲಿ ಕ್ಯಾಮೆರಾ ಅಳವಡಿಸಿದ್ದು, ಎಲ್ಲವೂ ರೆಕಾರ್ಡ್ ಆಗಿದೆ. ನಿನ್ನ ವಿಡಿಯೋ ಎಡಿಟ್ ಮಾಡಿ ಹಂಚುತ್ತೇನೆ ಎಂದು ಹೆದರಿಸಿದ್ದಾರೆ. ಅಲ್ಲದೆ ವಿಡಿಯೋ ಚಿತ್ರವನ್ನು ಟಿ.ವಿ.ಯಲ್ಲಿ ಹಾಕಿ ನನಗೆ ತೋರಿಸಿದ್ದಾರೆ. ಕಾಲು ಹಿಡಿದು ಕೇಳಿಕೊಂಡರೂ ವಿಡಿಯೋ ಡಿಲಿಟ್ ಮಾಡಲಿಲ್ಲ.

ಮುನಿರತ್ನ ಆಡಿಯೋ ವಿಚಾರ: ಧ್ವನಿ ಅವರದ್ದೇ ಅನ್ನೋದು ನಿಜವಾದ್ರೆ ಕ್ಷಮಿಸಲ್ಲ: ಡಾ.ನಿರ್ಮಲಾನಂದಶ್ರೀ

ಆ ವಿಡಿಯೋ ಇಟ್ಟುಕೊಂಡು ಹಲವು ಬಾರಿ ಅತ್ಯಾಚಾರ ಎಸಗಿದ್ದು, ನಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ನಿನ್ನ ಗಂಡ ಮತ್ತು ಮಕ್ಕಳಿಗೆ ವಿಡಿಯೋ ತೋರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ನಂತರ, ಅವರಿಗೆ ಪರಿಚಯವಿರುವ ಮತ್ತೊಬ್ಬ ಮಹಿಳೆ ಜೊತೆ ಸೇರಿ ಅವರು ಹೇಳಿದವರನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ.

ವಿಪಕ್ಷದಲ್ಲಿರುವ ಮುಖಂಡರೊಬ್ಬರ ವಿಡಿಯೋ ಮಾಡಿಸಿದ್ದಾರೆ. ಪೊಲೀಸರ ವಿಡಿಯೋಗಳನ್ನು ಕೂಡ ತಮ್ಮ ಬಳಿ ಇರಿಸಿಕೊಂಡು ಅವರಿಗೆಲ್ಲ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಅಲ್ಲದೆ, ಮಾಗಡಿ ಕ್ಷೇತ್ರದ ಮಾಜಿ ಶಾಸಕರೊಬ್ಬರು ನನ್ನ ಜೊತೆ ಸಲುಗೆಯಿಂದ ಮಾತನಾಡುವಂತೆ ಮಾಡಿ, ಅದನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲೆ ಮಾಡಿದ್ದಾರೆ. ರೆಸಾರ್ಟ್ , ಹೋಟೆಲ್ , ಹೋಮ್ ಸ್ಟೇಗಳಿಗೆ ನನ್ನನ್ನು ಹಾಗೂ ಇತರ ಮಹಿಳೆಯರನ್ನು ಕರೆಸಿಕೊಂಡು ಬಳಸಿಕೊಂಡಿದ್ದಾರೆ. ಈ ಪೈಕಿ ಕೆಲ ಎಚ್‌ಐವಿ ಸೋಂಕು ಇರುವ ಮಹಿಳೆಯರನ್ನು ಸಹ ಬಳಸಿಕೊಂಡಿದ್ದಾರೆ. ಮರ್ಯಾದೆ ಹಾಗೂ ಪ್ರಾಣಕ್ಕೆ ಅಂಜಿ ಅವರು ಹೇಳಿದಂತೆ ಕೇಳಿದ್ದೇನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ