ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಬೆಂಗಳೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದೆ.
ಬೆಂಗಳೂರು (ಮಾ.26): ಇತ್ತೀಚೆಗೆ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬೆಂಗಳೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದೆ. ಬಾಂಬರ್ ಜೊತೆಗೆ ಸಂಪರ್ಕ ಹೊಂದಿದ್ದ ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಮೂಲದ ಇಬ್ಬರನ್ನು ಶನಿವಾರ ಸಂಜೆ ಎನ್‌ಐಎ ವಶಕ್ಕೆ ಪಡೆದುಕೊಂಡಿದ್ದು, ಇಬ್ಬರಿಂದ ಬಾಂಬರ್ ಕುರಿತು ಮಾಹಿತಿ ಸಂಗ್ರಹ ಮಾಡ್ತಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಇಬ್ಬರನ್ನು ಕೇವಲ ವಿಚಾರಣೆ ನಡೆಸಲಾಗುತ್ತಿದ್ದು, ಬಂಧಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
undefined
ಬೆಂಗ್ಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದು ತೀರ್ಥಹಳ್ಳಿಯ ಮುಸಾಬೀರ್
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದವನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾಬೀರ್ ಹುಸೇನ್ ಶಾಜಿಬ್ ಎಂದು ಎನ್‌ಐಎ ಗುರುತು ಪತ್ತೆ ಮಾಡಿತ್ತು. ಮುಸಾಬೀರ್ ಹುಸೇನ್ ಶಾಜಿಬ್ ‘ಮೋಸ್ಟ್ ವಾಂಟೆಡ್’ ಶಂಕಿತ ಉಗ್ರನಾಗಿದ್ದು, ಮೂರು ವರ್ಷಗಳಿಂದ ಆತನ ಪತ್ತೆಗೆ ಎನ್‌ಐಎ ಹುಡುಕಾಟ ನಡೆಸಿದೆ. ಅಲ್ಲದೆ 2022ರಿಂದ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ನಡೆದಿರುವ ಭಯೋತ್ಪಾದಕ ಕೃತ್ಯಗಳಲ್ಲಿ ತೀರ್ಥಹಳ್ಳಿ ತಾಲೂಕಿನ ಮತ್ತೊಬ್ಬ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಅಬ್ದುಲ್ ಮತೀನ್ ತಾಹ ಜತೆ ಶಾಜಿಬ್ ಪಾತ್ರ ವಹಿಸಿದ್ದಾನೆ. ಈಗ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಹ ಇದೇ ಆತಂಕವಾದಿಗಳು ಇದ್ದಾರೆ ಎನ್ನಲಾಗುತ್ತಿದೆ.
ಮಾ.1ರಂದು ಕೆಫೆ ವಿಧ್ವಂಸಕ ಕೃತ್ಯದ ಬಾಂಬರ್ ಬೆನ್ನತ್ತಿದ್ದ ಎನ್‌ಐಎ ಹಾಗೂ ಸಿಸಿಬಿ, ಕುಂದಲಹಳ್ಳಿಯಿಂದ ಬಳ್ಳಾರಿವರೆಗೆ ಸುಮಾರು 800ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ಪರಿಶೀಲಿಸಿದ್ದವು. ಆ ದೃಶ್ಯಾವಳಿಗಳಲ್ಲಿದ್ದ ಶಂಕಿತನಿಗೂ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿರುವ ಶಾಜಿಬ್ ಭಾವಚಿತ್ರಕ್ಕೂ ತಾಳೆಯಾಗಿದೆ.
Rameshawaram Cafe Blast Case: ಚೆನ್ನೈ ಅಂಗಡಿಯಲ್ಲಿ ಕ್ಯಾಪ್ ಖರೀದಿಸಿದ್ದ ಕೆಫೆ ಬಾಂಬರ್
ಇತ್ತೀಚಿನ ವರ್ಷಗಳಲ್ಲಿ ಮಂಗಳೂರಿನ ದೇಶ ವಿರೋಧಿ ಗೋಡೆ ಬರಹ ಪ್ರಕರಣ, ಮಂಗಳೂರು ಕುಕ್ಕರ್ ಸ್ಫೋಟ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಂಗಾ ತೀರದಲ್ಲಿ ಬಾಂಬ್ ಪರೀಕ್ಷೆ ಪ್ರಕರಣ, ತಮಿಳುನಾಡಿನ ಕೊಯಮತ್ತೂರಿನ ಬಾಂಬ್ ಸ್ಫೋಟ ಹಾಗೂ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಗಳಿಗೆ ನಂಟಿದೆ. ಅಲ್ಲದೆ ಮಂಗಳೂರು ಕುಕ್ಕರ್ ಸ್ಫೋಟ ಹಾಗೂ ಶಿವಮೊಗ್ಗ ಜಿಲ್ಲೆ ಬಾಂಬ್ ಪ್ರಯೋಗದಲ್ಲಿ ಪತ್ತೆಯಾಗಿದ್ದ ಸ್ಫೋಟಕ ವಸ್ತುಗಳಿಗೂ ಕೆಫೆ ಸ್ಫೋಟದ ಬಾಂಬ್ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳಿಗೂ ತಾಳೆಯಾಗಿದೆ. ಹೀಗಾಗಿ ಶಿವಮೊಗ್ಗ ಐಸಿಎಸ್ ತಂಡವೇ ಕೆಫೆ ಕೃತ್ಯದಲ್ಲಿ ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಝ್ ಮುನೀರ್ ಅಹ್ಮದ್‌ನನ್ನು ಎನ್‌ಐಎ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿತ್ತು.