
ಪುಣೆ (ಜು.22): ಇಂದ್ರಾಯಣಿ ನದಿಯಲ್ಲಿ ಮಹಿಳೆಯ ಶವವನ್ನು ಎಸೆದ ಆರೋಪದ ಮೇಲೆ ವ್ಯಕ್ತಿ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ. ಗರ್ಭಪಾತದ ವೇಳೆ ಮಹಿಳೆ ಸಾವು ಕಂಡಿದ್ದಾಳೆ. ಆ ಬಳಿಕ ಆಕೆಯ ದೇಹವನ್ನು ಇಂದ್ರಾಯಣಿ ನದಿಗೆ ಆರೋಪಿ ತನ್ನ ಸ್ನೇಹಿತನ ಜತೆಗೂಡಿ ಎಸೆದಿದ್ದ. ಈ ವೇಳೆ ಆಕೆಯ ಇಬ್ಬರು ಮಕ್ಕಳು ತಾಯಿಯನ್ನು ಕಳೆದುಕೊಂಡು ಅಳಲು ಆರಂಭಿಸಿದ್ದರು. ಈ ಹಂತದಲ್ಲಿ ಇಬ್ಬರೂ ಮಕ್ಕಳನ್ನೂ ಕೂಡ ಆತ ನದಿಗೆ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. 25 ವರ್ಷದ ಗರ್ಭಿಣಿಯನ್ನು ಮುಂಬೈ ಸಮೀಪದ ಥಾಣೆಗೆ ಗರ್ಭಪಾತಕ್ಕಾಗಿ ಪ್ರಮುಖ ಆರೋಪಿ ಗಜೇಂದ್ರ ದಗದ್ಖೈರ್ ಕಳುಹಿಸಿಕೊಟ್ಟಿದ್ದ. ಈ ವೇಳೆ ಆಕೆಯ ಇಬ್ಬರು ಮಕ್ಕಳು ಕೂಡ ಜೊತೆಗಿದ್ದರು. ಆದರೆ, ಗರ್ಭಪಾತದ ವೇಳೆ ಮಹಿಳೆ ಸಾವು ಕಂಡಿದ್ದದ್ದಳು ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಜುಲೈ 9 ರಂದು ಥಾಣೆಯಿಂದ ವಾಪಾಸ್ ಬರುವಾಗ ದಗದ್ಖೈರ್ ಮತ್ತು ಅವನ ಗೆಳೆಯ ರವಿಕಾಂತ್ ಗಾಯಕ್ವಾಡ್ ಮಹಿಳೆಯ ಶವವನ್ನು ತಾಲೇಗಾಂವ್ ಬಳಿ ಇಂದ್ರಾಯಣಿ ನದಿಗೆ ಎಸೆದಿದ್ದರು. ಈ ವೇಳೆ ಆಕೆಯ ಎರಡು ವರ್ಷದ ಮಗು ಹಾಗೂ ಐದು ವರ್ಷದ ಮಗು ಅಳಲು ಆರಂಭ ಮಾಡಿತ್ತು. ಇದರಿಂದ ಸಿಟ್ಟಿಗೆದ್ದ ಗಜೇಂದ್ರ ಇಬ್ಬರೂ ಮಕ್ಕಳನ್ನು ನದಿಗೆ ಎಸೆದಿದ್ದ. ಇನ್ನು ಮಹಿಳೆ ತನ್ನ ಮೊದಲ ಪತಿಯಿಂದ ದೂರವಾದ ಬಳಿಕ ಗಜೇಂದ್ರ ದಗದ್ಖೈರ್ ಜೊತೆ ಸಂಬಂಧ ಹೊಂದಿದ್ದಳು. ಈ ಸಂಬಂಧದಲ್ಲಿಯೇ ಆಕೆ ಗರ್ಭಿಣಿಯಾಗಿದ್ದಳು' ಎಂದು ಅಧಿಕಾರಿ ತಿಳಿಸಿದ್ದಾರೆ.
ಮಹಿಳೆಯ ತಾಯಿ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ ಬಳಿಕ ಇದರ ತನಿಖೆ ಪ್ರಾರಂಭವಾಗಿತ್ತು. ಆಕೆಯ ಪಾರ್ಟ್ನರ್ ಹಾಗೂ ಅವನ ಗೆಳೆಯರನ್ನು ಪ್ರಕರಣದಲ್ಲಿ ಪುಣೆ ಪೊಲೀಸರು ಬಂಧಿಸಿದ್ದಾರೆ.
"ಮಹಿಳೆ ಮತ್ತು ಇಬ್ಬರು ಮಕ್ಕಳ ಶವಗಳು ಇನ್ನೂ ಪತ್ತೆಯಾಗಿಲ್ಲ. ದಗದ್ಖೈರ್ ಮತ್ತು ಗಾಯಕ್ವಾಡ್ ಅವರನ್ನು ಜುಲೈ 30 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ