ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಪ್ರಕರಣದಲ್ಲಿ ಬಿಜೆಪಿ ನಾಯಕಿಯ ಹೆಸರು ಕೇಳಿ ಬಂದಿದ್ದರಿಂದ ಬಿಜೆಪಿ ತೀವ್ರ ಮುಜುಗರ ಅನುಭವಿಸುವಂತಾಗಿತ್ತು.
ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ
ಕಲಬುರಗಿ (ಏ.21): ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಪ್ರಕರಣ (PSI Recruitment Scam) ಬಗೆದಷ್ಟು ಬಯಲಾಗುತ್ತಿದೆ. ಪ್ರಕರಣದಲ್ಲಿ ಬಿಜೆಪಿ ನಾಯಕಿಯ ಹೆಸರು ಕೇಳಿ ಬಂದಿದ್ದರಿಂದ ಬಿಜೆಪಿ (BJP) ತೀವ್ರ ಮುಜುಗರ ಅನುಭವಿಸುವಂತಾಗಿತ್ತು. ಆದರೆ ಇದೀಗ ಈ ಪ್ರಕರಣದ ಉರುಳು ಕಾಂಗ್ರೆಸ್‌ಗೂ (Congress) ಸುತ್ತಿಕೊಂಡಿದೆ. ಈ ನಡುವೆ ತಪ್ಪು ಮಾಡಿದವರು ಯಾರೇ ಇರಲಿ, ಬಿಡುವುದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಗುಡುಗಿದ್ದಾರೆ. ಪಿಎಸ್‌ಐ... ಕೈಯಲ್ಲಿ ಲಾಠಿ, ಸೊಂಟದಲ್ಲಿ ಪಿಸ್ತೂಲು, ಒಂದು ಸ್ಟೇಷನ್ನು ವ್ಯಾಪ್ತಿಯಲ್ಲಿ ಅಪರಾಧ ನಿಯಂತ್ರಿಸುವ ಜವಾಬ್ದಾರಿ. ಈ ಹುದ್ದೆ ನನ್ನದಾಗಬೇಕು ಎನ್ನುವ ಆಸೆ ಬಹುತೇಕ ಯುವಕ, ಯುವತಿಯರಿಗೆ ಇದ್ದಿದ್ದೆ.
ಆದರೆ ಅದಕ್ಕೆ ಫಿಜಿಕಲ್ ಫಿಟ್‌ನೆಸ್ ಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದಕ್ಕಾಗಿ ಹಲವರು ಹಗಲಿರುಳು ಕಷ್ಟಪಟ್ಟು ಓದಿದ್ರೆ ಇನ್ನು ಕೆಲವರು ದುಡ್ಡುಕೊಟ್ಟು ಈ ಹುದ್ದೆ ಖರೀದಿಸುವ ಸುಲಭ ದಾರಿ ಕಂಡುಕೊಂಡಿದ್ದಾರೆ. ಅದುವೇ ಇದೀಗ ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಪಿಎಸ್‌ಐ ನೇಮಕಾತಿ ಅಕ್ರಮ ! ಹೌದು ಕಲಬುರಗಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ಲಕ್ಷ ಲಕ್ಷ ಹಣ ಕೊಟ್ಟು ಉತ್ತರ ಪತ್ರಿಕೆಯನ್ನು ಪರೀಕ್ಷಾ ಮೇಲ್ವಿಚಾರಕರಿಂದಲೇ ಬರೆಸಲಾಗಿದೆ. ಅಷ್ಟೇ ಅಲ್ಲ ಅಂಥವರು ಸೆಲೆಕ್ಟ್ ಸಹ ಆಗಿದ್ದಾರೆ. ಇದೀಗ ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಬಗೆದಷ್ಟು ಹೊಸ ಹೊಸ ವಿಚಾರಗಳು ಹೊರಬರುತ್ತಿವೆ. ಇದುವರೆಗೆ ಬಿಜೆಪಿಗೆ ಮುಜುಗರ ತಂದಿಟ್ಟಿದ್ದ ಈ ಪ್ರಕರಣದ ಉರುಳು ಇದೀಗ ಕಾಂಗ್ರೆಸ್‌ಗೂ ಸುತ್ತಿಕೊಂಡಿದೆ.
ಪಿಎಸ್‌ಐ ನೇಮಕಾತಿ ಅಕ್ರಮ: 545 ಅಭ್ಯರ್ಥಿಗಳಿಗೆ ಸಿಐಡಿ ನೋಟಿಸ್
ಮಹಾರಾಷ್ಟ್ರದಲ್ಲಿ ದಿವ್ಯಾ?: ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಈ ಅಕ್ರಮದಲ್ಲಿ ಆ ಶಾಲೆಯ ಕಾರ್ಯದರ್ಶಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸಿಐಡಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾರೆ. ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿರುವ ದಿವ್ಯಾ ಮತ್ತು ಅವರ ಶಾಲೆಯ ಟೀಂನ್ನು ಬಂಧಿಸಲು ಸಿಐಡಿ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಅವರು ಕರ್ನಾಟಕ ಬಿಟ್ಟು ಮಹಾರಾಷ್ಟ್ರದಲ್ಲಿ ಅವಿತಿದ್ದಾರೆ ಎನ್ನುವ ಮಾಹಿತಿ ಆಧರಿಸಿ ಸಿಐಡಿಯ ಒಂದು ಮಹಾರಾಷ್ಟ್ರಕ್ಕೂ ಹೋಗಿದೆ. ಆದ್ರೂ ಇನ್ನೂ ಸಿಐಡಿ ಕೈಗೆ ಸಿಕ್ಕಿಲ್ಲ.
ಸಿಎಂಗೂ ತಟ್ಟಿದ ಬಿಸಿ: ಎರಡು ದಿನಗಳ ಪ್ರವಾಸಕ್ಕಾಗಿ ಕಲಬುರಗಿಗೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಈ ಪ್ರಕರಣದ ಬಿಸಿ ತಟ್ಟಿದೆ. ಸಿಎಂ ಹೆಲಿಕಾಪ್ಟರ್ ಇಳಿದು ಬಿಜೆಪಿ ವಿಭಾಗೀಯ ಸಭೆಗೆ ತೆರಳುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ದಿವ್ಯಾ ಹಾಗರಗಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
PSI recruitment scam ಪೊಲೀಸ್ ನೇಮಕಾತಿ ಪರೀಕ್ಷಾ ಅಕ್ರಮ ಬಯಲಿಗೆಳೆದಿದ್ದೇ ಕನ್ನಡಪ್ರಭ!
ಕಾಂಗ್ರೆಸ್‌ಗೂ ಉರುಳು: ಪಿ.ಎಸ್.ಐ ನೇಮಕಾತಿ ಅಕ್ರಮ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಿರುವ ಬೆನ್ನಲ್ಲೇ, ಇದೀಗ ಅದರ ಉರುಳು ಸ್ವತಃ ಕಾಂಗ್ರೆಸ್‌ಗೂ ಸುತ್ತಿಕೊಂಡಿದೆ. ಅಫಜಲಪುರದ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ (MY Patil) ಅವರ ಗನ್‌ಮ್ಯಾನ್‌ನನ್ನು ಸಿಐಡಿ (CID) ಬಂಧಿಸಿದೆ. ಈ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಎಂ.ವೈ ಪಾಟೀಲ್ ಅವರ ಗನ್ ನ್ಯಾನ್ ಆಗಿದ್ದ DAR ಪೇದೆ, ಹಯ್ಯಾಳ ದೇಸಾಯಿ ಸಹ ಮೊನ್ನೆ ನಡೆದ ಪಿಎಸ್‌ಐ ನೇಮಕಾತಿಯಲ್ಲಿ ಆಯ್ಕೆಯಾಗಿದ್ದು, ಇದೂ ಸಹ ಅಕ್ರಮ ನೇಮಕಾತಿ ಎನ್ನುವುದು ಪತ್ತೆ ಹಚ್ಚಿರುವ ಸಿಐಡಿ, ಶಾಸಕರ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಮತ್ತು ಆತನ ಆಪ್ತ ರುದ್ರಗೌಡ ಎನ್ನುವಾತನನ್ನು ಬಂಧಿಸಿದ್ದಾರೆ. ಇನ್ನೂ ಈ ಅಕ್ರಮದ ಜಾಲ ಎಲ್ಲೆಲ್ಲಿ ವ್ಯಾಪಿಸಿದೆ. ಇದರ ಆಳ ಅಗಲ ಎಷ್ಟಿದೆ ಎನ್ನುವುದನ್ನು ಸಿಐಡಿ ಪ್ರಾಮಾಣಿಕ ತನಿಖೆ ಮೂಲಕ ಬಯಲಿಗೆಳೆಯಬೇಕಾಗಿದೆ.