ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಲಬುರಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಸಿಐಡಿ ತಂಡ ಇಂದು ಕಲಬುರಗಿಯ ದಿವ್ಯಾ ಹಾಗರಗಿ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ವರದಿ ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ
ಕಲಬುರಗಿ (ಏ.17): PSI ನೇಮಕಾತಿ ಅಕ್ರಮ ಪ್ರಕರಣದಲ್ಲಿ (PSI Exam Fraud Case) ಕಲಬುರಗಿಯ ಬಿಜೆಪಿ (BJP) ನಾಯಕಿ ದಿವ್ಯಾ ಹಾಗರಗಿ (Divya Hagaragi) ಶಾಮೀಲಾಗಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಸಿಐಡಿ ತಂಡ ಇಂದು ಕಲಬುರಗಿಯ (Kalaburagi) ದಿವ್ಯಾ ಹಾಗರಗಿ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ದಿವ್ಯಾ ಹಾಗರಗಿ ಪರಾರಿಯಾಗಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ಕಲಬುರಗಿಯಲ್ಲಿಯೇ ಬೀಡು ಬಿಟ್ಟು ಪ್ರಕರಣ ಜಾಲಾಡುತ್ತಿರುವ ಸಿಐಡಿ (CID) ಎಸ್‌ಪಿ ರಾಘವೇಂದ್ರ ಹೆಗಡೆ ,ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಪ್ರಕಾಶ ರಾಠೋಡ್ ಮತ್ತು ಟೀಂ ನವರು ತನಿಖೆ ತೀವ್ರಗೊಳಿಸಿದ್ದಾರೆ.
40 ರಿಂದ 60 ಲಕ್ಷ ಕ್ಕೆ ಡೀಲ್: OMR ಶೀಟ್ ತಿದ್ದುಪಡಿ ಮಾಡುತ್ತಿದ್ದ ಜಾಲ ಸಿಕ್ಕಿದ್ದೇ ರೋಚಕವಾಗಿದ್ದು, ಕಲಬುರಗಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರವೇ ಈ ಅಕ್ರಮಕ್ಕೆ ಮೂಲವಾಗಿದೆ. ಅಕ್ರಮದ ರುವಾರಿಗಳು ಪ್ರತಿ ಅಭ್ಯರ್ಥಿಯಿಂದ ತಲಾ 40 ರಿಂದ 60 ಲಕ್ಷ ರೂಪಾಯಿ ವಸೂಲಿ ಮಾಡಿಕೊಂಡು ಅವರ IMR ಶೀಟ್‌ನಲ್ಲಿ ಸರಿ ಉತ್ತರ ಮೇಲ್ವಿಚಾರಕರಿಂದ ಬರೆಸಿ ಪಾಸ್ ಮಾಡಿಸಲಾಗಿದೆ.
ಜ್ಞಾನ ಜ್ಯೋತಿ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಪೈಕಿ 11 ಅಭ್ಯರ್ಥಿಗಳು PSI ಹುದ್ದೆಗೆ ಸೆಲೆಕ್ಟ್ ಆಗಿದ್ದಾರೆ. ಆ ಪೈಕಿ ನಾಲ್ವರು ಅಕ್ರಮವಾಗಿಯೇ ಆಯ್ಕೆಯಾಗಿದ್ದು ಪತ್ತೆಯಾಗಿದ್ದು ಅವರನ್ನು ಸಿಐಡಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಆ 11 ಜನರಲ್ಲಿ ಇಬ್ಬರು ನ್ಯಾಯಯುತವಾಗಿ ಆಯ್ಕೆಯಾಗಿರುವುದು ಸಿಐಡಿ ತನಿಖೆಯಲ್ಲಿ ಪತ್ಗೆಯಾಗಿದೆ. ಉಳಿದ ಐವರು ಸಿಐಡಿಗೆ ಹೆದರಿ ಪರಾರಿಯಾಗಿದ್ದಾರೆ. ಅವರನ್ನ ವಿಚಾರಣೆಗೆ ಒಳಪಡಿಸಿದ ನಂತರ ಸತ್ಯಾಂಶ ಹೊರಬರಲಿದೆ.
PSI Recruitment Scam: ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮ ಸಿಐಡಿಗೆ: ಆರಗ ಜ್ಞಾನೇಂದ್ರ
ಅಕ್ರಮ ನಡೆಯುತ್ತಿದ್ದುದು ಹೀಗೆ: ಅಭ್ಯರ್ಥಿಗಳು ತಮಗೆ ಪಕ್ಕಾ ಕರ್ನರ್ಮ ಇರುವ ಸರಿಯುತ್ತರಗಳನ್ನು ಮಾತ್ರ ಟಿಕ್ ಮಾಡುತ್ತಿದ್ದರು. ಎಲ್ಲಾ ಅಭ್ಯರ್ಥಿಗಳು OMR ಶೀಟ್ ಕೊಟ್ಟು ಹೋದ ನಂತರ ಹಣ ಕೊಟ್ಟ ನಿರ್ದಿಷ್ಟ ಅಭ್ಯರ್ಥಿಗಳ OMR ಶೀಟ್ ಗಳಲ್ಲಿ ಸರಿ ಉತ್ತರಗಳನ್ನು ಪರೀಕ್ಷಾ ಮೇಲ್ವಿಚಾರಕರೇ ಆಯ್ಕೆ ಮಾಡುತ್ತಿದ್ದರು. ಈ ರೀತಿ ಸರಿಯಾದ ಉತ್ತರ ಬರೆಯುವುದಕ್ಕಾಗಿ ಅಲ್ಲೂ ವ್ಯವಸ್ಥಿತ ಅಕ್ರಮ ನಡೆಸಿದ್ದು, ಪರೀಕ್ಷೆ ಆರಂಭಕ್ಕೆ 15 ನಿಮಿಷ ಮೊದಲೇ ಉತ್ತರದ ಚೀಟಿ ಪರೀಕ್ಷಾ ಮೇಲ್ವಿಚಾರಕರ ಕೈ ಸೇರುತ್ತಿತ್ತು ಎನ್ನಲಾಗಿದೆ. ಅದರ ಪ್ರಕಾರ OMR ಶೀಟ್ ನಲ್ಲಿ ಉತ್ತರಗಳನ್ನು ಮೇಲ್ವಿಚಾರಕರೇ ಟಿಕ್ ಮಾಡುತ್ತಿದ್ದರು.
ಅಕ್ರಮ ಬಯಲಾಗಿದ್ದೇ ರೋಚಕ: ಅಭ್ಯರ್ಥಿಗಳು ಪರೀಕ್ಷೆ ಬರೆದು OMR ಶೀಟ್ ಮೇಲ್ವಿಚಾರಕರ ಕೈಗೆ ಕೊಟ್ಟು ಹೋಗುವಾರ ಅವರ ಬಳಿ ಒಂದು ಕಾರ್ಬನ್ ಪ್ರತಿ ಇರುತ್ತದೆ. ಅಭ್ಯರ್ಥಿಗಳು ಹೋದ ನಂತರ ಮೇಲ್ವಿಚಾರಕರು ಉಳಿದ ಉತ್ತರಗಳನ್ನು ಟಿಕ್ ಮಾಡುತ್ತಾರೆ. ಆದ್ರೆ ಅದು ಅಭ್ಯರ್ಥಿ ಬಳಿ ಇರುವ OMR ಶೀಟನಲ್ಲಿ ಗೋಚರವಾಗುವುದಿಲ್ಲ.
ಈ ವ್ಯತ್ಯಾಸ ಹೊರ ಜಗತ್ತಿಗೆ ಗೊತ್ತಾಗಬಾರದೆಂದೆ ಅಕ್ರಮದ ರುವಾರಿಗಳು ಅಭ್ಯರ್ಥಿ ಬಳಿಯ ಕಾರ್ಬನ್ ಶೀಟ್ ಪರೀಕ್ಷೆ ಮುಗಿಯುತ್ತಿದ್ದಂತೆಯೇ ಕಸಿದುಕೊಂಡು ತಮ್ಮ ಬಳಿಯೇ ಇಟ್ಟುಕೊಳ್ಖುತ್ತಾರೆ. ಆದರೆ ಸೇಡಂನ ವೀರೇಶ ಎನ್ನುವ ಅಭ್ಯರ್ಥಿ ಫಿಜಿಕಲ್ ಟೆಸ್ಟಿಂಗ್ ಸಮಯದಲ್ಲಿ ಈ ಓ.ಎಂ.ಆರ್ ಶೀಟನ ಕಾರ್ಬನ್ ಪ್ರತಿ ತೆಗೆದುಕೊಂಡು ಬಂದಿದ್ದ. ಇದನ್ನು ಗಮನಿಸಿದ ಅಭ್ಯರ್ಥಿಯೊಬ್ಬರು, ಅದನ್ನು ಫೋಟೋ ತೆಗೆದುಕೊಂಡು ಕೇವಲ ಇಪ್ಪತ್ತೇ ಪ್ರಶ್ನೆಗೆ ಉತ್ತರಿಸಿದ ವ್ಯಕ್ತಿ ಅದು ಹೇಗೆ ಆಯ್ಕೆ ಆದ ಎಂದುಕೊಂಡು ಗೃಹ ಸಚಿವರಿಗೆ ಭೇಟಿ ಮಾಡಿ ದೂರು ಸಲ್ಲಿಸುತ್ತಾರೆ. ಆಗ ಅಕ್ರಮ ಬಯಲಿಗೆ ಬರುತ್ತದೆ.
ಖಾಕಿ ಪುತ್ರರೇ ಹೆಚ್ಚು: ಈ ರೀತಿ ಈ ಅಕ್ರಮದಲ್ಲಿ ಮೊದಲು ಸಿಕ್ಕವನೇ ಸೇಡಂನ ವೀರೇಶ ಎನ್ನುವ ಅಭ್ಯರ್ಥಿ. ಈತ ಕಲಬುರಗಿಯ ಪೊಲೀಸ್ ಒಬ್ಬರ ಪುತ್ರನಾಗಿದ್ದಾನೆ. ಇವನಷ್ಟೇ ಅಲ್ಲ, ಈ ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಪೊಲೀಸರ ಸಂಬಂಧಿಕರೇ ಎನ್ನಲಾಗಿದೆ.
ಬಿಜೆಪಿ ನಾಯಕಿಯ ಪಾತ್ರವೇನು?: PSI ನೇಮಕಾತಿ ಅಕ್ರಮ ಪ್ರಕರಣ ನಡೆದಿದ್ದೇ ಕಲಬುರಗಿಯ ಕಲಬುರಗಿಯ ಜ್ಞಾನ ಜ್ಯೋತಿ ಶಾಲಾ ಪರೀಕ್ಷಾ ಕೇಂದ್ರದಲ್ಲಿ. ಈ ಪರೀಕ್ಷಾ ಕೇಂದ್ರ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಒಡೆತನದ್ದು. ಇದೇ ಶಾಲೆಯ ಮೂವರು ಪರೀಕ್ಷಾ ಮೇಲ್ವಿಚಾರಕರನ್ನು ಸಿಐಡಿ ಪೊಲೀಸರು ನಿನ್ನೆ ಅರೆಸ್ಟ್ ಮಾಡಿದ್ದಾರೆ. ಶಾಲೆಯ ಅಧ್ಯಕ್ಷೆ ದಿವ್ಯಾ ಹಾಗರಗಿ ವಿಚಾರಣೆಗಾಗಿ ಅವರ ಮನೆಯತ್ತ ಇಂದು ಸಿಐಡಿ ಅಧಿಕಾರಿಗಳು ಬಂದು ಮನೆಯನ್ನು ಶೋಧಿಸಿದ್ದಾರೆ. ಆದರೆ ದಿವ್ಯಾ ಹಾಗರಗಿ ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆ ಮರೆಸಿಕೊಂಡಿದ್ದಾರೆ. ಅವರ ಮೊಬೈಲ್ ಸ್ವಿಚ್ಛ್ ಆಫ್ ಆಗಿದ್ದು, ಮನೆಯಲ್ಲೂ ಇಲ್ಲ. ಅವರ ಪತಿ ರಾಜೇಶನನ್ನು ವಿಚಾರಣೆ ನಡೆಸಿ ಇಡೀ ಮನೆಯನ್ನು ಸಿಐಡಿ ಶೋಧ ನಡೆಸಿದೆ. ಏನು ಪತ್ತೆಯಾಗಿದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಇದೀಗ ದಿವ್ಯಾ ಹಾಗರಗಿ ಪತ್ತೆಗಾಗಿ ಸಿಐಡಿ ಪೊಲೀಸರು ಬಲೆ ಬೀಸಿದ್ದಾರೆ. ದಿವ್ಯಾ ಹಾಗರಗಿ ಮಾತ್ರವಲ್ಲ ಜ್ಞಾನ ಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ, ಇಬ್ಬರು ಶಿಕ್ಷಕಿಯರೂ ಸಹ ಅಬ್ಸಕಾಂಡ್ ಆಗಿದ್ದಾರೆ.
PSI ನೇಮಕಾತಿ ಅಕ್ರಮ: ತನಿಖೆಗೆ ಮುನ್ನವೇ ಎಳ್ಳು ನೀರು ಬಿಟ್ರಾ ಗೃಹ ಸಚಿವ ಜ್ಞಾನೇಂದ್ರ?
ತಲಾ 40 ರಿಂದ 60 ಲಕ್ಷ ಡೀಲ್: PSI ಆಗಲು ಕನಸ್ಸು ಹೊತ್ತು ಅಕ್ರಮದ ಹಾದಿ ಹಿಡಿದ ಅಭ್ಯರ್ಥಿಗಳಿಂದ ಇದರ ರುವಾರಿಗಳು ತಲಾ 40 ರಿಂದ 60 ಲಕ್ಷ ರೂಪಾಯಿ ಪಡೆದಿದ್ದಾರೆ. ಇದೆಲ್ಲಾ ಒಂದೆ ಬಾರಿ ಪಡೆಯದೇ 20-30 ಲಕ್ಷಗಳನ್ನು ಇನ್‌ಸ್ಟಾಲ್‌ಮೆಂಟ್ ಆಧಾರದಲ್ಲಿ ಪಡೆದಿದ್ದಾರೆ ಎನ್ನುವುದು ಇದೀಗ ಸಿಐಡಿ ಬಂಧಿಸಿರುವ ಅಭ್ಯರ್ಥಿಗಳು ನೀಡಿರುವ ಮಾಹಿತಿಯಿಂದ ಬಯಲಾಗಿದೆ.
ಮೂಲ ಕಿಂಗ್ ಪಿನ್ ಯಾರು?: ಇದರ ಮುಖ್ಯ ಕಿಂಗ್ ಪಿನ್ ಯಾರು ಎನ್ನುವುದರ ಬಗ್ಗೆ ಸಿಐಡಿ ತನಿಖೆ ತೀವ್ರಗೊಳಿಸಿದೆ. ಸದ್ಯ ಬಂಧಿತರಾಗಿರುವ ಪರೀಕ್ಷಾ ಮೇಲ್ವಿಚಾರಕರ ಬೊಟ್ಟು ಶಾಲಾ ಅಧ್ಯಕ್ಷೆ ದಿವ್ಯಾ ಹಾಗರಗಿ ಅವರತ್ತ ಹೊರಳುತ್ತಿದೆ ಎನ್ನಲಾಗಿದೆ. ಅದಾಗ್ಯೂ ಅವರು ಹೊರತುಪಡಿಸಿಯೂ ಇನ್ನೂ ಹಲವರ ಪಾತ್ರ ಅಲ್ಲಗಳೆಯುವಂತಿಲ್ಲ. ದಿವ್ಯಾ ಹಾಗರಗಿ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿ ನಾಯಕರೆಲ್ಲರಿಗೂ ಹತ್ತಿರದವರಾಗಿದ್ದು, ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಸದ್ಯಕ್ಕಂತೂ ಸಿಐಡಿಯ ದಕ್ಷ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಸರಿಯಾದ ದಿಕ್ಕಿನತ್ತ ಸಾಗುತ್ತಿದೆ ಎನ್ನಲಾಗಿದೆ.